ಮಕ್ಕಳಿದ್ದ ಮನೆಯಲ್ಲಿ ಅವರ ಕಾವಲಿಗೆ ಎಷ್ಟೇ ಎಚ್ಚರಿಕೆಯಿಂದ ಇದ್ದರೂ ಸಾಕಾಗೋದಿಲ್ಲ. ಇಲ್ಲೇ ನಮ್ಮ ಕಾಲ್ಬುಡದಲ್ಲೇ ಇರುತ್ತಾರೆ, ಕಣ್ಮುಚ್ಚಿ ಬಿಡುವುದರಲ್ಲಿ ಇನ್ನೆಲ್ಲೋ ಹೋಗುತ್ತಾರೆ. ಹೀಗೆ ಮಾಡುತ್ತಲೇ ಕೆಲವು ಮಕ್ಕಳು ಅಪಾಯ ಮೈಮೇಲೆ ಎಳೆದುಕೊಳ್ಳುತ್ತಾರೆ. ಇದೀಗ ನೊಯ್ಡಾದ ಹೈಡ್ ಪಾರ್ಕ್ ಸೊಸೈಟಿ ಅಪಾರ್ಟ್ಮೆಂಟ್ನಲ್ಲಿ (Noida Apartment) ಐದು ವರ್ಷದ ಬಾಲಕನೊಬ್ಬ ಹೀಗೆ ಒಬ್ಬನೇ ಮನೆಯಿಂದ ಹೊರಗೆ ಬಂದು, ಬಾಲ್ಕನಿಯಲ್ಲಿ ಕಸರತ್ತು ಮಾಡಲು ಹೋಗಿ ಬಿದ್ದು ಮೃತಪಟ್ಟಿದ್ದಾನೆ.
ನೊಯ್ಡಾದ 78ನೇ ಸೆಕ್ಟರ್ನಲ್ಲಿರುವ ಈ ಅಪಾರ್ಟ್ಮೆಂಟ್ನಲ್ಲಿ 8ನೇ ಮಹಡಿಯ ಫ್ಲಾಟ್ನಲ್ಲಿ ಅಪ್ಪ-ಅಮ್ಮನೊಂದಿಗೆ ಇದ್ದ ಬಾಲಕ ಅಕ್ಷತ್ ಶುಕ್ರವಾರ ಮುಂಜಾನೆ 5.45ಕ್ಕೆ ಎಚ್ಚರಗೊಂಡಿದ್ದಾನೆ. ಆಗಿನ್ನೂ ಅವನ ಪಾಲಕರು ಮಲಗೇ ಇದ್ದರು. ಮಗ ಎದ್ದುಹೋದರೂ ಅಪ್ಪ-ಅಮ್ಮಂಗೆ ಗೊತ್ತಾಗಲಿಲ್ಲ. ಕೋಣೆಯಿಂದ ಹಾಲ್ಗೆ ಹೋದ ಅಕ್ಷತ್, ಅಲ್ಲಿನ ಮುಖ್ಯ ಬಾಗಿಲನ್ನು ಚೇರ್ ಹಾಕಿಕೊಂಡು ತೆಗೆದು ಸೀದಾ ಬಾಲ್ಕನಿಗೆ ಬಂದಿದ್ದಾನೆ. ಮತ್ತೆ ಅದೇ ಕುರ್ಚಿಯನ್ನು ಬಾಲ್ಕನಿಗೆ ತಂದು, ಅದರ ಗ್ರಿಲ್ ಬಳಿ ಹಾಕಿದ್ದಾನೆ. ಬಳಿಕ ಕುರ್ಚಿ ಮೇಲೆ ಹತ್ತಿ ಕೆಳಗೆ ಇಣುಕಿ ನೋಡುತ್ತಿದ್ದಾಗ ಆಯತಪ್ಪಿ ಬಿದ್ದಿದ್ದಾನೆ. ಅಲ್ಲೆಲ್ಲ ಕೆಲವು ಹೂವಿನ ಗಿಡಗಳ ಪಾಟ್ಗಳನ್ನೂ ಇಡಲಾಗಿತ್ತು. ಚೇರ್ ಅಲ್ಲೇ ಉಳಿದಿತ್ತು, ಹುಡುಗ ಕೆಳಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದ.
ಇಷ್ಟೆಲ್ಲ ಆದರೂ ಬಾಲಕನ ಅಪ್ಪ-ಅಮ್ಮಂಗೆ ಎಚ್ಚರ ಆಗಲಿಲ್ಲ. ಅದೇನೋ ದೊಡ್ಡದಾಗಿ ಶಬ್ದ ಕೇಳಿದ್ದರಿಂದ ಅಪಾರ್ಟ್ಮೆಂಟ್ನ ಸೆಕ್ಯೂರಿಟಿ ಗಾರ್ಡ್ ಹೊರಬಂದು ನೋಡಿದ್ದಾರೆ. ರಕ್ತದ ಮಡುವಲ್ಲಿ ಬಿದ್ದ ಮಗುವನ್ನು ನೋಡಿ ಅವನಿಗೂ ಶಾಕ್ ಆಗಿದೆ. ಯಾವ ಮಹಡಿಯಿಂದ ಬಿದ್ದ? ಯಾರ ಮನೆಯವನು ಎಂಬುದೇನೂ ಸೆಕ್ಯೂರಿಟಿಗೆ ಗೊತ್ತಾಗಲಿಲ್ಲ. ಆತ ಅಲ್ಲಿ ಅಪಾರ್ಟ್ಮೆಂಟ್ನ ಮೊದಲ ಮಹಡಿ ಮತ್ತು ಸುತ್ತಮುತ್ತಲೂ ಇದ್ದ ಕೆಲವರನ್ನು ಕೂಗಿ ಕರೆದ. ತಕ್ಷಣವೇ ಅಕ್ಷತ್ನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾನೆ. ಆದರೆ ಅಲ್ಲಿಗೆ ಹೋಗುವಷ್ಟರಲ್ಲಿ ಹುಡುಗನ ಪ್ರಾಣ ಹೋಗಿತ್ತು.
ಇದನ್ನೂ ಓದಿ: Dubai Building Fire: ದುಬೈನಲ್ಲಿ ಅಪಾರ್ಟ್ಮೆಂಟ್ಗೆ ಬೆಂಕಿ; ಭಾರತದ ನಾಲ್ವರು ಸೇರಿ 16 ಮಂದಿ ದುರ್ಮರಣ
ಇನ್ನು ಪೊಲೀಸರು ಅಪಾರ್ಟ್ಮೆಂಟ್ಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಅಷ್ಟರಲ್ಲಿ ಅಕ್ಷತ್ ಪಾಲಕರಿಗೂ ವಿಷಯ ಗೊತ್ತಾಗಿ ಗೋಳಾಡಿದ್ದಾರೆ. ಇನ್ನು ಅಕ್ಷತ್ ಹೀಗೆ ಹಲವು ಸಲ ಮಾಡಿದ್ದ. ಬೆಳಗಿನ ಜಾವವೇ ಎದ್ದು ಮನೆಯಿಡೀ ಓಡಾಡಿಕೊಂಡು ಇರುತ್ತಿದ್ದ. ಆದರೆ ಯಾವತ್ತೂ ಬಾಗಿಲು ತೆಗೆದು ಹೊರಗೆ ಹೋಗಿರಲಿಲ್ಲ ಎಂದು ಪಾಲಕರು ಪೊಲೀಸರಿಗೆ ತಿಳಿಸಿದ್ದಾರೆ.