ನವ ದೆಹಲಿ: ಸೊಳ್ಳೆಬತ್ತಿ ಹಾಸಿಗೆ (mosquito coil) ಮೇಲೆ ಬಿದ್ದು, ಅದರಿಂದ ಹೊಮ್ಮಿದ ವಿಷಪೂರಿತ ಹೊಗೆಯಿಂದ ಉಸಿರುಕಟ್ಟಿ ಒಂದೇ ಕುಟುಂಬದ ಆರು ಮಂದಿ ಮೃತಪಟ್ಟಿದ್ದಾರೆ. ಈ ಘಟನೆ ವರದಿಯಾಗಿದ್ದು ದೆಹಲಿಯ ಈಶಾನ್ಯ ಭಾಗದಲ್ಲಿರುವ (New Delhi) ಶಾಸ್ತ್ರಿಪಾರ್ಕ್ ಏರಿಯಾದಿಂದ. ಸೊಳ್ಳೆಯಿಂದ ಪಾರಾಗಲು ಈ ಮನೆಯಲ್ಲಿ ಸೊಳ್ಳೆ ಬತ್ತಿ ಹಾಕಿಕೊಂಡು ಎಲ್ಲರೂ ಮಲಗಿದ್ದರು. ರಾತ್ರಿ ಯಾವಾಗಲೋ ಆ ಬತ್ತಿ ಹಾಸಿಗೆ ಮೇಲೆ ಬಿದ್ದಿದೆ. ಸಾಮಾನ್ಯವಾಗಿ ಸೊಳ್ಳೆ ಬತ್ತಿಯ ಹೊಗೆಯೇ ಘಾಟಾಗಿ ಇರುತ್ತದೆ. ಅದು ಹಾಸಿಗೆ ಮೇಲೆ ಬಿದ್ದು, ಹಾಸಿಗೆಯ ಬಟ್ಟೆಯ ಹೊಗೆಯೂ ಜತೆಗೆ ಸೇರಿ, ಆರೂ ಮಂದಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ.
ಮುಂಜಾನೆ ಹೊತ್ತಿಗೆ ಆ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ನೆರೆಯವರು ಪೊಲೀಸರಿಗೆ ಕರೆ ಮಾಡಿದ್ದರು. ಅಲ್ಲಿಗೆ ಧಾವಿಸಿದ ಪೊಲೀಸರು, ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಮೃತದೇಹಗಳನ್ನು ಹೊರಗೆ ತೆಗೆಯಲಾಗಿದೆ. ಈಶಾನ್ಯ ದೆಹಲಿ ಜಿಲ್ಲೆಯ ಡಿಸಿಪಿ ಜಾಯ್ ಟಿರ್ಕಿ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿ ‘ಮಚ್ಚಿ ಮಾರ್ಕೆಟ್ ಬಳಿಯಿರುವ ಮಾಜಾರ್ ವಾಲಾ ರಸ್ತೆಯಲ್ಲಿರುವ ಮನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದಾಗಿ ಬೆಳಗ್ಗೆ ಹೊತ್ತಿಗೆ ಶಾಸ್ತ್ರಿಪಾರ್ಕ್ ಪೊಲೀಸ್ ಸ್ಟೇಶನ್ಗೆ ಕರೆಬಂತು. ಪೊಲೀಸರು ಮತ್ತು ಅಗ್ನಿಶಾಮಕದಳದ ಸಿಬ್ಬಂದಿ ತಕ್ಷಣವೇ ಅಲ್ಲಿಗೆ ತೆರಳಿದರು. ಮೃತದೇಹಗಳನ್ನೆಲ್ಲ ಜಗ್ ಪ್ರವೇಶ್ ಚಂದ್ರ ಆಸ್ಪತ್ರೆಗೆ ಸಾಗಿಸಲಾಗಿದೆ’ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Family suicide : ಮಂಗಳೂರಿನ ಲಾಡ್ಜ್‌ನಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ, ಮೃತರು ಮೈಸೂರಿನವರು
ಈ ಮನೆಯಲ್ಲಿ ಒಟ್ಟು ಒಂಭತ್ತು ಮಂದಿ ಇದ್ದರು. ಅದರಲ್ಲಿ ಮೂವರು ಅಪಾಯದಿಂದ ಪಾರಾಗಿದ್ದಾರೆ. ಆದರೆ ಅವರೂ ಕೂಡ ಎಚ್ಚರ ತಪ್ಪಿದ್ದರು. ಆ ಮೂವರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅದರಲ್ಲಿ ಒಬ್ಬರು ಪ್ರಾಥಮಿಕ ಚಿಕಿತ್ಸೆಗೇ ಚೇತರಿಸಿಕೊಂಡು, ಡಿಸ್ಚಾರ್ಜ್ ಆಗಿದ್ದಾರೆ. ಇನ್ನಿಬ್ಬರಿಗೆ ಸುಟ್ಟಗಾಯಗಳೂ ಆಗಿದ್ದು ಅವರಿಗೆ ಚಿಕಿತ್ಸೆ ಮುಂದುವರಿದಿದೆ ಎಂದು ಜಾಯ್ ಟಿರ್ಕಿ ತಿಳಿಸಿದ್ದಾರೆ. ಮೃತಪಟ್ಟವರಲ್ಲಿ ಒಂದು ಮಗು, ನಾಲ್ವರು ಪುರುಷರು, ಒಬ್ಬಳು ಮಹಿಳೆ ಸೇರಿದ್ದಾರೆ.