Site icon Vistara News

ಪಂಜಾಬ್​ ಪೊಲೀಸ್ ಠಾಣೆ ಮೇಲೆ ಗ್ರೆನೇಡ್​ ದಾಳಿ ಮಾಡಿದ್ದ 6 ಮಂದಿ ಬಂಧನ; ಯೂಟ್ಯೂಬ್​ ನೋಡಿ ದಾಳಿ ಮಾಡುವುದನ್ನು ಕಲಿತಿದ್ದರು!

6 held in Punjab RPG attack

ಅಮೃತ್​ಸರ್​: ಪಂಜಾಬ್​​ನ ತರಣ್​ ತಾರಣ್​ ಜಿಲ್ಲೆಯ ಅಮೃತ್​ಸರ್​-ಭಟಿಂಡಾ ಹೆದ್ದಾರಿಯಲ್ಲಿರುವ ಪೊಲೀಸ್​ ಠಾಣೆ ಮೇಲೆ ಡಿಸೆಂಬರ್​ 9ರ ತಡರಾತ್ರಿ ನಡೆದ ರಾಕೆಟ್​ ಚಾಲಿತ ಗ್ರೆನೇಡ್​ ದಾಳಿ ಕೇಸ್​​ಗೆ ಸಂಬಂಧಪಟ್ಟಂತೆ ಪಂಜಾಬ್​ ಪೊಲೀಸರು ಶುಕ್ರವಾರ (ಡಿ.16) ಆರು ಮಂದಿಯನ್ನು ಬಂಧಿಸಿದ್ದಾರೆ. ಇವರಲ್ಲಿ ಇಬ್ಬರು ಅಪ್ರಾಪ್ತ ವಯಸ್ಸಿನವರು ಎಂದೂ ಹೇಳಲಾಗಿದೆ. ಆರೋಪಿಗಳು ರಾಕೆಟ್​ ಮೂಲಕ ಗ್ರೆನೇಡ್​ ದಾಳಿ ಮಾಡುವುದು ಹೇಗೆಂದು ಯೂಟ್ಯೂಬ್​ ನೋಡಿ, ಕಲಿತು ಪಂಜಾಬ್​ ಪೊಲೀಸ್​ ಠಾಣೆ ಮೇಲೆ ದಾಳಿ ಮಾಡಿದ್ದರು. ಆ ಯೂಟ್ಯೂಬ್​ ವಿಡಿಯೊ ಮಾಡಿದ್ದು ವಿದೇಶಿಗ ಎಂಬ ವಿಷಯವನ್ನೂ ಪೊಲೀಸರು ಬಹಿರಂಗಗೊಳಿಸಿದ್ದಾರೆ.

ಪಂಜಾಬ್​ ಠಾಣೆ ಮೇಲೆ ದಾಳಿ ಮಾಡಿದ ಈ ದುಷ್ಕರ್ಮಿಗಳು ಏಕ ಬಳಕೆಯ 70 ಎಂಎಂ ಸಾಮರ್ಥ್ಯದ ಆರ್​​ಪಿಜಿ-26 ಬಳಸಿದ್ದಾರೆ. ಇದು ಸೋವಿಯತ್​ ಕಾಲದ್ದಾಗಿದೆ. ಇದನ್ನು ಆರೋಪಿಗಳು ಗಡಿಯಾಚೆಯಿಂದಲೇ ಪಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪಂಜಾಬ್​ ಠಾಣೆ ಮೇಲೆ ನಡೆದ ರಾಕೆಟ್​ ಚಾಲಿತ ಗ್ರೆನೇಡ್​ ದಾಳಿಯ ಮಾಸ್ಟರ್​ಮೈಂಡ್​ ಕೆನಡಾ ಮೂಲದ ಗ್ಯಾಂಗ್​ಸ್ಟರ್​ ಲಖ್ಬೀರ್​ ಸಿಂಗ್​ ಲಂಡಾ ಮತ್ತು ಆತನ ಸಹಚರರಾದ ಸತ್ಬೀರ್​ ಸಿಂಗ್​ ಸತ್ತಾ​ ಮತ್ತು ಗುರುದೇವ್​ ಸಿಂಗ್​ ಜಾಸ್ಸಲ್​ (ಇವರಿಬ್ಬರೂ ಯುರೋಪ್​​ನಲ್ಲಿದ್ದಾರೆ). ಇವರಿಗೆ ಸದ್ಯ ಪಂಜಾಬ್​​ನಲ್ಲಿರುವ ಅಜ್ಮೀತ್​ ಸಿಂಗ್​ ಸಹಾಯ ಮಾಡಿದ್ದಾನೆ. ಈ ಕೃತ್ಯಕ್ಕೆ ಮುಖ್ಯ ಸಹಕಾರ ಪಾಕಿಸ್ತಾನ ಗುಪ್ತಚರ ಇಲಾಖೆ ಐಎಸ್​ಐದ್ದು ಎಂದು ಡಿಜಿಪಿ ಗೌರವ್​ ಯಾದವ್​ ತಿಳಿಸಿದ್ದಾರೆ.

ಇದೀಗ ಬಂಧಿತರಾದ ಆರೋಪಿಗಳನ್ನು ಗುರುಪ್ರೀತ್​ ಸಿಂಗ್​ ಅಲಿಯಾಸ್​ ಗೋಪಿ (18), ಗುರುಲಾಲ್​ ಸಿಂಗ್​ ಅಲಿಯಾಸ್​ ಗಹ್ಲಾ, ಸುರ್ಲಾಲ್​ಪಾಲ್ ಸಿಂಗ್​ ಅಲಿಯಾಸ್​ ಲಾಲಿ(21) ಮತ್ತು ಜೋಬಾನ್​ಪ್ರೀತ್​ ಸಿಂಗ್​ (18) ಎಂದು ಗುರುತಿಸಲಾಗಿದೆ. ಇನ್ನಿಬ್ಬರು ಅಪ್ರಾಪ್ತ ಬಾಲಕರಾಗಿದ್ದರಿಂದ ಹೆಸರು ಬಹಿರಂಗಪಡಿಸಿಲ್ಲ. ಇವರಿಂದ ಪಿಸ್ತೂಲ್​, ಗ್ರೆನೇಡ್​ ಪಿ-86, ಮೋಟಾರ್​ ಬೈಕ್​​ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ:ಪಂಜಾಬ್​​ ಪೊಲೀಸ್ ಠಾಣೆ ಮೇಲೆ ರಾಕೆಟ್​ ಚಾಲಿತ ಗ್ರೆನೇಡ್​ ದಾಳಿ; ಬಾಗಿಲಿನ ಗಾಜು ಪುಡಿಪುಡಿ, ಪಾಕ್​ ಕೈವಾಡ ಶಂಕೆ

Exit mobile version