ಛತ್ತೀಸ್ಗಢ್ನಲ್ಲಿ ನಕ್ಸಲರ ವಿರುದ್ಧ ಭರ್ಜರಿ ಕಾರ್ಯಾಚರಣೆ ನಡೆದಿದೆ. ಬಸ್ತರ್ ಜಿಲ್ಲೆಯಲ್ಲಿ ಮೂವರು ಮತ್ತು ಬಿಜಾಪುರ ಜಿಲ್ಲೆಯಲ್ಲಿ ಮೂವರು ಸೇರಿ ಒಟ್ಟು 6 ಮಂದಿ ನಕ್ಸಲರನ್ನು ಬಂಧಿಸಲಾಗಿದೆ. ಬಂಧಿತರಾದ 6 ಜನರಲ್ಲಿ ಇಬ್ಬರು ಪ್ರಮುಖ ನಾಯಕರಾಗಿದ್ದಾರೆ. ಹಾಗೇ, ಇವರಿಬ್ಬರೂ ತಲಾ 1 ಲಕ್ಷ ರೂಪಾಯಿ ಬಹುಮಾನ ಹೊತ್ತಿದ್ದವರಾಗಿದ್ದರು.
ಶುಕ್ರವಾರ ಮುಂಜಾನೆ ಸುಕ್ಮಾ ಜಿಲ್ಲೆಯ ಪೋಲಂಪಲ್ಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೂವರು ನಕ್ಸಲರು ಬಂಧಿತರಾಗಿದ್ದಾರೆ. ಇವರು ಭದ್ರತಾ ಪಡೆಗಳ ಸಿಬ್ಬಂದಿಯನ್ನು ಕೊಲ್ಲಲು, ಸ್ಫೋಟಕವನ್ನು ಅಳವಡಿಸುತ್ತಿದ್ದಾಗಲೇ ಸಿಕ್ಕಿಬಿದ್ದಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಮುಚ್ಚಕಿ ಗಂಗಾ (32), ಮಡ್ಕಂ ಭೀಮಾ (27) ಮತ್ತು ಕಲ್ಮು ಪೊಜ್ಜ (20) ಬಂಧಿತರಾಗಿದ್ದು, ಇದರಲ್ಲಿ ಮುಚ್ಚಕಿ ಗಂಗಾ ತಲೆಗೆ 1 ಲಕ್ಷ ರೂಪಾಯಿ ಬಹುಮಾನ ಇತ್ತು. ಈತ ಸಿಪಿಐ (ಮಾವೋವಾದಿ) ಸಂಘಟನೆಯ ಸಾಂಸ್ಕೃತಿಕ ವಿಭಾಗವಾದ ಚೇತನಾ ನಾಟ್ಯ ಮಂಡಳಿಯ ಮುಖ್ಯಸ್ಥನಾಗಿದ್ದಾನೆ.
ಈ ಮೂವರು ನಕ್ಸಲರು ಮೇದ್ವಾಹಿ ಮತ್ತು ಅರ್ಲಂಪಲ್ಲಿ ಗ್ರಾಮಗಳ ಮಧ್ಯೆಯ ಅರಣ್ಯ ಪ್ರದೇಶದಲ್ಲಿ ಐಇಡಿ (ಸುಧಾರಿತ ಸ್ಫೋಟಕ ಸಾಧನ)ಯನ್ನು ಮಣ್ಣೊಳಗೆ ಹೂತಿಡಲು ಗುಂಡಿ ತೋಡುತ್ತಿದ್ದರು. ಭದ್ರತಾ ಸಿಬ್ಬಂದಿ ಅಲ್ಲೆಲ್ಲ ಗಸ್ತು ತಿರುಗುತ್ತಾರೆ ಎಂದು ಗೊತ್ತಿದ್ದೇ ಅವರು ಐಇಡಿ ಅಳವಡಿಸಲು ಮುಂದಾಗಿದ್ದರು. ಆದರೆ ನಕ್ಸಲರು ಗುಂಡಿ ತೋಡುತ್ತಿದ್ದಾಗಲೇ ಭದ್ರತಾ ಸಿಬ್ಬಂದಿಯ ಕಣ್ಣಿಗೆ ಬಿದ್ದಿದ್ದಾರೆ. ಇನ್ನು ಭದ್ರತಾ ಪಡೆ ಸಿಬ್ಬಂದಿಯನ್ನು ನೋಡುತ್ತಿದ್ದಂತೆ ಅವರು ಪರಾರಿಯಾಗಲು ಯತ್ನಿಸಿದರೂ, ಫಲಪ್ರದವಾಗಲಿಲ್ಲ. ಮೂವರೂ ಸಿಕ್ಕಿಬಿದ್ದಿದ್ದಾರೆ ಎಂದು ವರದಿಯಾಗಿದೆ. ಇವರೆಲ್ಲರೂ ಈ ಹಿಂದೆ ಹಲವು ದಾಳಿಗಳನ್ನು ನಡೆಸಿದವರು ಎನ್ನಲಾಗಿದೆ. ಅಂದಹಾಗೇ, ಜಿಲ್ಲಾ ರಿಸರ್ವ್ ಗಾರ್ಡ್ (DRG) ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್), ಸ್ಥಳೀಯ ಪೊಲೀಸರು ಮತ್ತು ಇತರ ಸಶಸ್ತ್ರ ಪಡೆ ಸಿಬ್ಬಂದಿ ಇತ್ತೀಚೆಗೆ ನಿರಂತರವಾಗಿ ನಕ್ಸಲರ ವಿರುದ್ಧ ಕಾರ್ಯಾಚರಣೆ ನಡೆಸುತ್ತಲೇ ಇದ್ದಾರೆ.
ಬಿಜಾಪುರದಲ್ಲಿ ಸಿಕ್ಕಿಬಿದ್ದ 3 ನಕ್ಸಲರು
ಹಾಗೇ, ಇನ್ನೊಂದೆಡೆ ಛತ್ತೀಸ್ಗಢ್ನ ಬಿಜಾಪುರ ಜಿಲ್ಲೆಯಲ್ಲಿ ಮೂವರು ನಕ್ಸಲರು ಬಂಧಿತರಾಗಿದ್ದಾರೆ. ಇಡೆನಾರ್ ಎಂಬ ಗ್ರಾಮದ ಸಮೀಪದ ಅರಣ್ಯದಲ್ಲಿ ನಕ್ಸಲರು ಅಡಗಿದ್ದಾರೆ ಎಂಬ ಖಚಿತ ಮಾಹಿತಿ ಪಡೆದ ಸ್ಪೆಷಲ್ ಟಾಸ್ಕ್ ಫೋರ್ಸ್, ದಂತೇವಾಡಾ ಮತ್ತು ಬಿಜಾಪುರ ಜಿಲ್ಲಾ ರಿಸರ್ವ್ ಗಾರ್ಡ್ಗಳು, ಕೋಬ್ರಾ ಪಡೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದವು. ಭದ್ರತಾ ಪಡೆ ಸಿಬ್ಬಂದಿ ನಕ್ಸಲರನ್ನು ಹಿಡಿಯಲು ಪ್ರಯತ್ನಿಸಿದಾಗ ಅವರು ತಪ್ಪಿಸಿಕೊಳ್ಳಲು ಯತ್ನಿಸಿದ್ದಲ್ಲದೆ, ಗುಂಡಿನ ಕಾಳಗವೂ ನಡೆದಿದೆ. ಅಂತಿಮವಾಗಿ ಮೂವರನ್ನೂ ಬಂಧಿಸಲಾಗಿದೆ.
ಇವರಲ್ಲಿ ಇಬ್ಬರು ಮಹಿಳೆಯರೇ ಆಗಿದ್ದಾರೆ. ಗುಡ್ಡು ಕುರ್ಸಾಮ್ (25), ಹಂಗಿ ಅವ್ಲಾಮ್ (27) ಮತ್ತು ಇಡೊ (28) ಬಂಧಿತರಾಗಿದ್ದು, ಇದರಲ್ಲಿ ಮಾವೋವಾದಿಗಳ ಸ್ಥಳೀಯ ಸಂಘಟನೆಯಾದ ಗ್ಯಾಂಗಲೂರ್ ಲೋಕಲ್ ಆರ್ಗನೈಸೇಶನ್ ಸ್ಕ್ವಾಡ್ನ ನಾಯ ಗುಡ್ಡು ತಲೆಗೆ 1 ಲಕ್ಷ ರೂಪಾಯಿ ಬಹುಮಾನವಿತ್ತು. ಈ ನಕ್ಸಲರ ಬ್ಯಾಗ್ನಲ್ಲಿದ್ದ ಟಿಫಿನ್ ಬಾಂಬ್, ಜಿಲೆಟಿನ್ ರಾಡ್‌ಗಳು, ಕಾರ್ಡೆಕ್ಸ್ ವೈರ್, ಡಿಟೋನೇಟರ್‌ಗಳು, ವಿದ್ಯುತ್ ತಂತಿ ಮತ್ತು ಬ್ಯಾಟರಿಗಳನ್ನು ಭದ್ರತಾ ಪಡೆ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ.