ದಿಸ್ಪುರ್: ಅಸ್ಸಾಂನಲ್ಲಿ ಶಿಶು ಮತ್ತು ತಾಯಿ ಮರಣ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರು ಬಾಲ್ಯ ವಿವಾಹ (Child Marriages) ತಡೆಗೆ ಕಟ್ಟುನಿಟ್ಟಾಗಿ ಆದೇಶಿಸಿದ್ದಾರೆ. 18 ವರ್ಷಕ್ಕಿಂತ ಸಣ್ಣ ಹೆಣ್ಣುಮಕ್ಕಳನ್ನು ವಿವಾಹವಾಗುವವರ ವಿರುದ್ಧ ಸೂಕ್ತ ಕಾಯ್ದೆಯಡಿ ಕ್ರಮ ವಹಿಸಲಾಗುವುದು ಮತ್ತು 14ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣುಮಕ್ಕಳನ್ನು ಮದುವೆಯಾಗುವ ಪುರುಷರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು ಎಂದು ಹೇಳಿದ್ದಾರೆ. ಅದರಂತೆ ಪೊಲೀಸರು ಬಾಲ್ಯ ವಿವಾಹ ತಡೆಯುವ ಯತ್ನದಲ್ಲಿ ಹಲವು ರೇಡ್ಗಳನ್ನು ಮಾಡುತ್ತಿದ್ದಾರೆ. ಸದ್ಯ ಅಸ್ಸಾಂ ಬಾಲ್ಯ ವಿವಾಹ ಕೇಸ್ನಡಿ ಒಟ್ಟು 4000 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದ್ದು, 60 ಖಾಜಿಗಳು ಸೇರಿ, 2278 ಮಂದಿಯನ್ನು ಅರೆಸ್ಟ್ ಮಾಡಲಾಗಿದೆ.
ಅಸ್ಸಾಂನಲ್ಲಿ ಬಾಂಗ್ಲಾದೇಶಿ ಮುಸ್ಲಿಮರ ಸಂಖ್ಯೆ ದೊಡ್ಡದಿದೆ. ಅದರಲ್ಲೂ ಅಕ್ರಮವಾಗಿ ನೆಲೆಸಿರುವವರೇ ಹೆಚ್ಚು. ಹಾಗಂತ ಈ ಕಾಯ್ದೆಯನ್ನು ಕೇವಲ ಮುಸ್ಲಿಂ ಜನಾಂಗಕ್ಕೆ ಅನ್ವಯವಾಗುವಂತೆಯೇನೂ ಅಸ್ಸಾಂ ಸರ್ಕಾರ ರೂಪಿಸಿಲ್ಲ. ಆದರೆ ಇಲ್ಲಿ ಬಾಲ್ಯ ವಿವಾಹ ಪ್ರಮಾಣ ಹೆಚ್ಚಾಗಿರುವುದರಿಂದ ನವಜಾತ ಶಿಶು ಮತ್ತು ತಾಯಿ ಮರಣದ ಪ್ರಮಾಣವೂ ಹೆಚ್ಚಾಗಿತ್ತು. ಹಾಗಾಗಿ ಬಾಲ್ಯವಿವಾಹದ ವಿರುದ್ಧ ಅಸ್ಸಾಂ ಸರ್ಕಾರ ಸಮರ ಸಾರಿದೆ. ಈ ಕೇಸ್ನಲ್ಲಿ 8000ಕ್ಕೂ ಹೆಚ್ಚು ಮಂದಿಯನ್ನು ಆರೋಪಿಗಳು ಎಂದು ಹೆಸರಿಸಲಾಗಿದೆ.
ಇದನ್ನೂ ಓದಿ: Himanta Biswa Sarma: ಹೆಣ್ಣುಮಕ್ಕಳು 22 ವರ್ಷದ ನಂತರವೇ ಗರ್ಭ ಧರಿಸಲಿ, ಅಸ್ಸಾಂ ಸಿಎಂ ಸಲಹೆ
‘ಇತ್ತೀಚಿನ ವರ್ಷಗಳಲ್ಲಿ ಸಣ್ಣ ವಯಸ್ಸಿನ, 1 ಲಕ್ಷಕ್ಕೂ ಅಧಿಕ ಹೆಣ್ಣು ಮಕ್ಕಳ ವಿವಾಹವಾಗಿದೆ. 18 ವರ್ಷಕ್ಕೆ ಮೊದಲೇ ಅವರು ಗರ್ಭವತಿಯರಾಗಿದ್ದಾರೆ. ಇತ್ತೀಚೆಗಂತೂ 9 ನೇ ತರಗತಿ ಹುಡುಗಿಯೊಬ್ಬಳು ಮಗುವಿಗೆ ಜನ್ಮ ನೀಡಿದ್ದಳು. ಬಾಲ್ಯ ವಿವಾಹ ಕಾನೂನು ಬಾಹಿರ ಎಂದು ಗೊತ್ತಿದ್ದರೂ, ಅಕ್ರಮವಾಗಿ ಮದುವೆ ಮಾಡಲಾಗುತ್ತಿದೆ. ಹೀಗಾಗಿಯೇ ನಾವು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದೇವೆ. ಇನ್ನು ಮುಂದೆ ಯಾವುದೇ ಬಾಲ್ಯ ವಿವಾಹ ನಡೆದರೂ ಅದನ್ನು ಮಾಡಿಸಿದ ಖಾಜಿಗಳ ವಿರುದ್ಧ, ಹುಡುಗಿಯ ಪಾಲಕರು ಮತ್ತು ಹುಡುಗನ ಪಾಲಕರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದ್ದಾರೆ.