ನಾಗ್ಪುರ: ಭಾರತದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ವಿಸ್ತಾರವಾಗುತ್ತಿದೆ. ದೇಶದ ಆರನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು, ಛತ್ತೀಸ್ಗಢ್ದ ಬಿಲಾಸ್ಪುರ ಮತ್ತು ಮಹಾರಾಷ್ಟ್ರದ ನಾಗ್ಪುರ ನಡುವೆ ಸಂಚರಿಸಲಿದ್ದು, ಈ ರೈಲು ಸಂಚಾರಕ್ಕೆ ಇಂದು ನಾಗ್ಪುರ ರೈಲ್ವೆ ಸ್ಟೇಶನ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಿದರು. ಈ ವೇಳೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆ ಸಚಿವ ನಿತಿನ್ ಗಡ್ಕರಿ ಉಪಸ್ಥಿತರಿದ್ದರು. ಬಳಿಕ ರೈಲು ಹತ್ತಿ, ಒಳಗೆ ಹೋದ ಪ್ರಧಾನಿ ಮೋದಿ, ಅಲ್ಲಿ ಪ್ರಯಾಣಿಕರೊಂದಿಗೆ, ರೈಲು ಸಿಬ್ಬಂದಿಯೊಂದಿಗೆ ಮಾತುಕತೆ ನಡೆಸಿದರು. ಸ್ವಲ್ಪ ದೂರ ಅದರಲ್ಲಿ ಪ್ರಯಾಣ ಮಾಡಿದರು.
ಬಿಲಾಸ್ಪುರ-ನಾಗ್ಪುರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ನಿರ್ವಹಣೆಯ ಜವಾಬ್ದಾರಿ ಆಗ್ನೇಯ ಮಧ್ಯ ರೈಲ್ವೆಯದ್ದು. ವಾರದಲ್ಲಿ ಆರು ದಿನ ಸಂಚರಿಸುವ ಈ ರೈಲು ರಾಯ್ಪುರ, ದುರ್ಗ್ ಮತ್ತು ಗೊಂಡಿಯಾಗಳಲ್ಲಿ ನಿಲುಗಡೆಯಾಗುತ್ತದೆ. ಬಿಲಾಸ್ಪುರದಿಂದ ನಾಗ್ಪುರಕ್ಕೆ ತೆರಳಲು 5 ತಾಸು, 20 ನಿಮಿಷ ಸಮಯ ತೆಗೆದುಕೊಳ್ಳುತ್ತದೆ. ಹಾಗೇ, ನಾಗ್ಪುರದಿಂದ ಬಿಲಾಸ್ಪುರಕ್ಕೂ ಅಷ್ಟೇ ಸಮಯದಲ್ಲಿ ಮರಳುತ್ತದೆ. ಇದರಲ್ಲಿ ಹವಾನಿಯಂತ್ರಿತ ವಿಭಾಗ ಮತ್ತು ಎಕ್ಸಿಕ್ಯೂಟಿವ್ ಚೇರ್ ಕಾರ್ ವಿಭಾಗಗಳಿವೆ. ಹವಾನಿಯಂತ್ರಿತ ಭಾಗದಲ್ಲಿ ಕುಳಿತು ಪ್ರಯಾಣಿಸಲು ಟಿಕೆಟ್ ದರ 1240 ರೂ. ಮತ್ತು ಎಕ್ಸಿಕ್ಯೂಟಿವ್ ಚೇರ್ ಕಾರ್ ವಿಭಾಗದಲ್ಲಿ ಪ್ರಯಾಣಿಸಲು ಒಂದು ಟಿಕೆಟ್ಗೆ 2,240 ರೂಪಾಯಿ ದರ ಇದೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು, ದೇಶದ ಸೆಮಿ ಹೈಸ್ಪೀಡ್ ರೈಲು ಆಗಿದ್ದು, ಗಂಟೆಗೆ 180 ಕಿಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ. ಮೊಟ್ಟಮೊದಲು 2019ರ ಫೆಬ್ರವರಿಯಲ್ಲಿ ನವ ದೆಹಲಿ-ಶ್ರೀಮಾತಾ ವೈಷ್ಣೋ ದೇವಿ ಕಾತ್ರಾ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ಶುರು ಮಾಡಿದ್ದು, ಇಲ್ಲಿಯವರೆಗೆ, ನವ ದೆಹಲಿ-ವಾರಾಣಸಿ, ಮುಂಬಯಿ ಸೆಂಟ್ರಲ್-ಗಾಂಧಿನಗರ (ಗುಜರಾತ್), ನವ ದೆಹಲಿ- ಅಂಬ್ ಅದೌರಾ (ಹಿಮಾಚಲಪ್ರದೇಶ) ಮತ್ತು ಚೆನ್ನೈ-ಬೆಂಗಳೂರು-ಮೈಸೂರು ಮಾರ್ಗದಲ್ಲಿ ವಂದೇ ಭಾರತ್ ರೈಲು ಸಂಚಾರ ಮಾಡುತ್ತಿತ್ತು.
ಇದನ್ನೂ ಓದಿ: ವಿಸ್ತಾರ Explainer | Vande Bharat Express| ವಂದೇ ಭಾರತ್ ವೇಗ ಹೆಚ್ಚಿಸಲು ಸಿದ್ಧತೆ, ಟಿಕೆಟ್ ದರದಲ್ಲಿ ವ್ಯತ್ಯಾಸ ಏಕೆ?!