Site icon Vistara News

7 ದಿನಕ್ಕಾಗಿ 70 ರೂಮ್‌ಗಳು; ಅಸ್ಸಾಂ ಹೋಟೆಲ್‌ನಲ್ಲಿ ಮಹಾ ಬಂಡಾಯ ಶಾಸಕರ ಐಷಾರಾಮಿ ಬದುಕು

Maharashtra Politics 1

ಗುವಾಹಟಿ: ಮಹಾರಾಷ್ಟ್ರ ರಾಜಕೀಯ (Maharashtra Politics) ಅಸ್ಥಿರತೆ ಮಧ್ಯೆ ಕೇಂದ್ರಬಿಂದು ಆಗಿರುವುದು ಅಸ್ಸಾಂನ ಗುವಾಹಟಿಯಲ್ಲಿರುವ ಫೈವ್‌ ಸ್ಟಾರ್‌ ಹೋಟೆಲ್‌. ಸರ್ಕಾರದ ವಿರುದ್ಧ ಬಂಡಾಯವೆದ್ದಿರುವ ಶಿವಸೇನೆ ಶಾಸಕರೆಲ್ಲ ಇಲ್ಲಿಯೇ ತಂಗಿದ್ದಾರೆ. ಈ ಐಷಾರಾಮಿ ಹೋಟೆಲ್‌ನಲ್ಲಿ, ಶಿವಸೇನೆ ನಾಯಕ ಏಕನಾಥ್‌ ಶಿಂಧೆ ನೇತೃತ್ವದಲ್ಲಿ ಹತ್ತು-ಹಲವು ಸಭೆಗಳಾಗುತ್ತಿವೆ. ಇವರೆಲ್ಲ ಇಲ್ಲೇ ಕುಳಿತು ಉದ್ಧವ್‌ ಠಾಕ್ರೆ ಬಣವನ್ನು ಮಣಿಸಲು ತಂತ್ರರೂಪಿಸುತ್ತಿದ್ದಾರೆ. ಅಂದಹಾಗೇ, ಈ ಹೋಟೆಲ್‌ನಲ್ಲಿ ಬಂಡಾಯ ಶಾಸಕರಿಗಾಗಿ ಏಳು ದಿನಕ್ಕೆ 70 ರೂಮುಗಳು ಬುಕ್‌ ಆಗಿವೆ ಎಂದು ಹೇಳಲಾಗಿದೆ.

ಜೂ.19ರಂದು ಮಹಾರಾಷ್ಟ್ರ ವಿಧಾನ ಪರಿಷತ್‌ ಚುನಾವಣೆ ಫಲಿತಾಂಶ ಹೊರಬಿದ್ದ ಬಳಿಕ ಅಲ್ಲಿನ ರಾಜಕೀಯ ಸ್ಥಿತಿಯೇ ಅತಂತ್ರವಾಯಿತು. ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್‌ ಮೈತ್ರಿ ಸರ್ಕಾರ ಮಹಾ ವಿಕಾಸ್‌ ಅಘಾಡಿ ಪತನದ ಅಂಚಿಗೆ ಬಂದು ನಿಂತಿದೆ. ಇದಕ್ಕೆ ಮುಖ್ಯ ಕಾರಣ ಶಿವಸೇನೆ ನಾಯಕ, ಸಚಿವ ಏಕನಾಥ್‌ ಶಿಂಧೆ. ಇವರು ತಮ್ಮ ಬೆಂಬಲಿಗ ಶಾಸಕರೊಂದಿಗೆ, ಬಿಜೆಪಿ ಆಡಳಿತ ಇರುವ ಗುಜರಾತ್‌ಗೆ ಹೋಗಿ ಅಲ್ಲಿನ ಸೂರತ್‌ನ ರೆಸಾರ್ಟ್‌ವೊಂದರಲ್ಲಿ ಬೀಡುಬಿಟ್ಟರು. ಮರುದಿನ ಇವರೆಲ್ಲ ಸೂರತ್‌ನಿಂದ ಮತ್ತೊಂದು ಬಿಜೆಪಿ ಆಡಳಿತ ರಾಜ್ಯ ಅಸ್ಸಾಂನ ಗುವಾಹಟಿಯಲ್ಲಿರುವ ಐಷಾರಾಮಿ ಹೋಟೆಲ್‌ ರಾಡಿಸನ್‌ ಬ್ಲ್ಯೂಗೆ (Radisson Blu)ಶಿಫ್ಟ್‌ ಆಗಿದ್ದಾರೆ.

ಇದನ್ನೂ ಓದಿ: Maha Politics | ಮಹಾರಾಷ್ಟ್ರ ಸರ್ಕಾರದ ಭವಿಷ್ಯ ಇಂದು ನಿರ್ಧಾರ?; 12ಗಂಟೆಗೆ ಸಿಎಂ ಠಾಕ್ರೆ ಮಹತ್ವದ ಸಭೆ

ಖರ್ಚುವೆಚ್ಚವೆಷ್ಟು?
ಇದು ಹೇಳಿಕೇಳಿ ಫೈವ್‌ ಸ್ಟಾರ್‌ ಹೋಟೆಲ್‌. ಒಟ್ಟಾರೆ 196 ಕೋಣೆಗಳನ್ನು ಹೊಂದಿದೆ. ಸಹಜವಾಗಿ ಇಲ್ಲಿ ಲಾಡ್ಜಿಂಗ್‌, ಊಟದ ಬೆಲೆ ಜಾಸ್ತಿಯೇ ಇರುತ್ತದೆ. ಈ ಬಂಡಾಯ ಶಾಸಕರು ಜೂ.28ರವರೆಗೆ ಅಂದರೆ ಏಳುದಿನಕ್ಕಾಗಿ 70 ಕೋಣೆಗಳನ್ನು ಬುಕ್‌ ಮಾಡಿಕೊಂಡಿದ್ದು, ಅದರ ಒಟ್ಟಾರೆ ಬಾಡಿಗೆ 56 ಲಕ್ಷ ರೂಪಾಯಿ. ಅದರ ಹೊರತಾಗಿ ಇವರೆಲ್ಲರ ಊಟ-ತಿಂಡಿ, ಮತ್ತಿತರ ಸೇವೆಗಾಗಿ 8 ಲಕ್ಷ ರೂಪಾಯಿ ಎಂದು ಹೋಟೆಲ್‌ ಮೂಲಗಳು ತಿಳಿಸಿದ್ದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ಈ ಶಾಸಕರು ಕೋಣೆಗಳನ್ನು ಬುಕ್‌ ಮಾಡಿದಾಗಿನಿಂದ ಹೋಟೆಲ್‌ನವರು ರೂಮುಗಳ ಬುಕ್ಕಿಂಗ್‌ ಬಂದ್‌ ಮಾಡಿದ್ದಾರೆ. ಈಗಾಗಲೇ ಬುಕ್‌ ಮಾಡಿ, ರೂಂಗಳಲ್ಲಿ ಇರುವವರನ್ನು ಬಿಟ್ಟರೆ ಉಳಿದಂತೆ ಹೊಸದಾಗಿ ಯಾರಾದರೂ ರೂಮ್‌ ಕೇಳಿಕೊಂಡು ಬಂದರೆ ಅವರಿಗೆ ಇಲ್ಲ ಎಂದೇ ಹೇಳಲಾಗುತ್ತಿದೆ. ಹೀಗಾಗಿ ಹೋಟೆಲ್‌ನಲ್ಲಿ ಹಲವು ಕೋಣೆಗಳು ಖಾಲಿ ಉಳಿದಿದ್ದು, ಇದು ಹೋಟೆಲ್‌ ಮ್ಯಾನೇಜ್‌ಮೆಂಟ್‌ಗೆ ತುಸು ನಷ್ಟವೂ ಹೌದು. ಸದ್ಯದ ಮಟ್ಟಿಗೆ ಬಂಡಾಯ ಶಾಸಕರೆಲ್ಲ ಏಳು ದಿನಗಳವರೆಗೆ ಮಾತ್ರ ಇಲ್ಲಿರುತ್ತಾರೆ ಎಂದು ಹೇಳಲಾಗಿದ್ದು, ಅದು ಮುಂದುವರಿಯುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ರಾಜಕೀಯ ಬಿರುಗಾಳಿಗೆ ಕಾರಣವಾಗಿರುವ ಏಕನಾಥ್‌ ಶಿಂಧೆ ಯಾರು?

Exit mobile version