Site icon Vistara News

ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿಗರ ಅಡ್ಡ ಮತದಾನ; 7 ಶಾಸಕರು, ಇಬ್ಬರು ಸಂಸದರ ಮೇಲೆ ಅನುಮಾನ

BJP Flag

ನವ ದೆಹಲಿ: ರಾಷ್ಟ್ರಪತಿ ಚುನಾವಣೆ ಇಂದು ಬೆಳಗ್ಗೆ ಪ್ರಾರಂಭವಾಗಿದ್ದು, ಶಾಸಕರು-ಸಂಸದರು ಮತದಾನ ಮಾಡುತ್ತಿದ್ದಾರೆ. ಆದರೆ ಈ ಚುನಾವಣೆಯಲ್ಲೂ ಕೂಡ ಕುದುರೆ ವ್ಯಾಪಾರ ನಡೆದಿದೆ ಎಂಬ ಮಾತು ಕೇಳಿಬರುತ್ತಿದೆ. ಈ ಸಲ ಪಕ್ಷಕ್ಕೆ ವಂಚಿಸಿದ್ದು ಪಶ್ಚಿಮ ಬಂಗಾಳ ಬಿಜೆಪಿಗರು ಎನ್ನಲಾಗಿದೆ. ಬಿಜೆಪಿ ಪಕ್ಷದ ಏಳು ಶಾಸಕರು ಮತ್ತು 2 ಸಂಸದರು ಅಡ್ಡಮತದಾನ ಮಾಡಿದ್ದಾರೆ. ಯಶವಂತ್‌ ಸಿನ್ಹಾರಿಗೆ ವೋಟ್‌ ಹಾಕಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ. ಬಿಜೆಪಿಯ ಈ ಶಾಸಕ-ಸಂಸದರು ನಿನ್ನೆ ಇಡೀ ರಾತ್ರಿ ಹರ್ಯಾಣದ ಗುರ್‌ಗಾಂವ್‌ನಲ್ಲಿರುವ ಹೋಟೆಲ್‌ನಲ್ಲಿ ಕಳೆದಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.

ಎನ್‌ಡಿಎ ಒಕ್ಕೂಟದಿಂದ ದ್ರೌಪದಿ ಮುರ್ಮು ಅಭ್ಯರ್ಥಿಯಾಗಿದ್ದರೆ, ಪ್ರತಿಪಕ್ಷಗಳ ಒಕ್ಕೂಟದಿಂದ ಯಶವಂತ್‌ ಸಿನ್ಹಾ ಕಣಕ್ಕೆ ಇಳಿದಿದ್ದಾರೆ. ಯಾವುದೇ ಲೆಕ್ಕಾಚಾರದಲ್ಲಿ ನೋಡಿದರೂ ದ್ರೌಪದಿ ಮುರ್ಮು ಪರವೇ ಗೆಲುವಿನ ಅಲೆ ಇದೆ. ಆದರೂ ಈಗ ಬಿಜೆಪಿಯ ಕೆಲ ಎಂಎಲ್‌ಎ, ಸಂಸದರು ಅಡ್ಡಮತದಾನ ಮಾಡಿದ ಬಗ್ಗೆ ಮಾತು ಕೇಳಿಬರುತ್ತಿದೆ. ಆದರೆ ಅವರು ಯಾರು ಎಂಬುದಿನ್ನೂ ಸ್ಪಷ್ಟವಾಗಿಲ್ಲ.

ಪಶ್ಚಿಮ ಬಂಗಾಳದಲ್ಲಿ ಶಾಸಕರು ಲಾಕ್‌ !
ಇನ್ನು ಇಂದು (ಜುಲೈ 18) ಚುನಾವಣೆ ನಡೆಯಲಿದ್ದ ಹಿನ್ನೆಲೆಯಲ್ಲಿ, ಭಾನುವಾರ ಪಶ್ಚಿಮ ಬಂಗಾಳದ ಸುಮಾರು 69 ಬಿಜೆಪಿ ಶಾಸಕ/ಸಂಸದರನ್ನು ಕೋಲ್ಕತ್ತದ ನ್ಯೂಟೌನ್‌ನಲ್ಲಿರುವ ಹೋಟೆಲ್‌ ಒಂದರಲ್ಲಿ ಲಾಕ್‌ ಮಾಡಿಡಲಾಗಿತ್ತು. ಪಶ್ಚಿಮ ಬಂಗಾಳದಲ್ಲಿ ಕಳೆದ ವಿಧಾನಸಭೆ ಚುನಾವಣೆ ಪೂರ್ವ ಟಿಎಂಸಿಯಿಂದ ಬಿಜೆಪಿಗೆ ಸೇರಿದ್ದ ಹಲವು ನಾಯಕರು, ಚುನಾವಣೆ ಮುಗಿದ ಬಳಿಕ ಮತ್ತೆ ವಾಪಸ್‌ ಟಿಎಂಸಿಗೆ ಸೇರ್ಪಡೆಯಾಗಿದ್ದರು. ಇತ್ತೀಚೆಗೆ ಬಿಜೆಪಿಯಿಂದ ಯಾರಾದರೂ ಮತ್ತೊಂದು ಪಕ್ಷಕ್ಕೆ ಹೋಗುತ್ತಾರೆ ಎಂದರೆ ಅದು ಪಶ್ಚಿಮ ಬಂಗಾಳದಲ್ಲಿ ಮಾತ್ರ ಸಾಧ್ಯವಾಗುತ್ತಿದೆ. ಅದೇ ಕಾರಣಕ್ಕೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ತನ್ನ ಶಾಸಕರನ್ನು ಲಾಕ್‌ ಮಾಡಿತ್ತು ಎಂದು ಹೇಳಲಾಗಿದೆ. ಯಾಕೆಂದರೆ, ಒಂದೊಮ್ಮೆ ಬಿಜೆಪಿಯ ಯಾವುದೇ ಶಾಸಕ/ಸಂಸದ ಪ್ರತಿಪಕ್ಷಗಳ ಅಭ್ಯರ್ಥಿ, ಅದರಲ್ಲೂ ಟಿಎಂಸಿ ಹಿರಿಯ ನಾಯಕ ಯಶವಂತ್‌ ಸಿನ್ಹಾಗೆ ಮತದಾನ ಮಾಡಿದರೆ ಅದು ನಮ್ಮ ಪ್ರತಿಷ್ಠೆಗೆ ಕುಂದು ಎಂದು ಆ ಪಕ್ಷ ನಂಬಿಕೊಂಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆ ಮತದಾನ ಆರಂಭ: ನಡೆದುಬಂದು ಮತ ಚಲಾಯಿಸಿದ ಇಬ್ಬರು ಶಾಸಕರು

Exit mobile version