Site icon Vistara News

Jagannath Rath Yatra: ಜಗನ್ನಾಥ ರಥಯಾತ್ರೆಯಲ್ಲಿ ಬೆಂಕಿ; 7 ಮಂದಿ ದುರ್ಮರಣ

Jagannath Rath Yatra

ತ್ರಿಪುರಾದ ಕುಮಾರ್​ ಘಾಟ್​​ನಲ್ಲಿ ನಡೆಯುತ್ತಿರುವ ಜಗನ್ನಾಥ ರಥಯಾತ್ರೆ (Jagannath Rath Yatra In Tripura))ಯಲ್ಲಿ ದುರಂತ ನಡೆದಿದೆ. ರಥದ ಮೇಲ್ತುದಿಗೆ ಹೈಟೆನ್ಷನ್​ ತಂತಿ ತಗುಲಿದ ಪರಿಣಾಮ ಬೆಂಕಿ ಹೊತ್ತಿದೆ. ಈ ಅವಘಡದಲ್ಲಿ 7 ಮಂದಿ ಮೃತಪಟ್ಟಿದ್ದಾರೆ. ಒಂದಷ್ಟು ಜನ ಸಜೀವ ದಹನವಾಗಿದ್ದರೆ, ಇನ್ನೂ ಕೆಲವರು ಕಾಲ್ತುಳಿತಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ಸುಮಾರು 15 ಜನರಿಗೆ ಗಾಯವಾಗಿದೆ.

ಭಗವಂತ ಜಗನ್ನಾಥ, ಬಾಲಭದ್ರ ಮತ್ತು ದೇವಿ ಸುಭದ್ರೆಯ ಉತ್ಸವ ಮೂರ್ತಿಗಳನ್ನು ಅಲಂಕೃತ ರಥದಲ್ಲಿ ಇಟ್ಟು ಎಳೆಯಲಾಗುತ್ತಿತ್ತು. ಅದು ಕಬ್ಬಿಣದ ರಥವಾಗಿದೆ. ಅಲ್ಲೆಲ್ಲ ಹಬ್ಬದ ವಾತಾವರಣವೇ ಇತ್ತು. ದೊಡ್ಡ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು. ರಥ ಎಳೆಯುತ್ತಿದ್ದಾಗ ಅದರ ಮೇಲ್ಭಾಗಕ್ಕೆ 133 ಕೆವಿ ವಿದ್ಯುತ್​ ತಂತಿ ತಗುಲಿದೆ. ಕೂಡಲೇ ರಥಕ್ಕೆ ಬೆಂಕಿ ಹೊತ್ತುಕೊಂಡಿದೆ. 6 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಒಂದಿಬ್ಬರಿಗೆ ಶಾಕ್ ಹೊಡೆದಿದೆ. ಗಾಯಗೊಂಡವರೆಲ್ಲ ಸಮೀಪದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 15 ಮಂದಿಯಲ್ಲಿ ಬಹುತೇಕ ಎಲ್ಲರ ಸ್ಥಿತಿಯೂ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Kalaburagi News: ಕಲಬುರಗಿಯಲ್ಲಿ ಕೃಷಿ ಮಾಹಿತಿ ರಥಕ್ಕೆ ಸಚಿವ ಡಾ. ಶರಣಪ್ರಕಾಶ್‌ ಪಾಟೀಲ್‌ ಚಾಲನೆ

ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸಾಹಾ ಅವರು ಘಟನೆ ಬಗ್ಗೆ ಖೇದ ವ್ಯಕ್ತಪಡಿಸಿದ್ದಾರೆ. ‘ಕುಮಾರಘಾಟ್​ನಲ್ಲಿ ಜಗನ್ನಾಥ ರಥಯಾತ್ರೆಯ ಸಂದರ್ಭದಲ್ಲಿ ನಡೆದ ದುರಂತದಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ. ರಥವನ್ನು ಎಳೆಯುವಾಗ ವಿದ್ಯುತ್​ ತಂತಿ ತಗುಲಿ ಈ ಅವಘಡವಾಗಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಗಾಯಗೊಂಡವರು ಬೇಗನೇ ಚೇತರಿಸಿಕೊಳ್ಳಲಿ. ರಾಜ್ಯ ಸರ್ಕಾರ ಅವರಿಗೆ ನೆರವು ನೀಡಲಿದೆ’ ಎಂದಿದ್ದಾರೆ.

ಒಡಿಶಾದ ಪುರಿಯಲ್ಲಿ ಪ್ರಸಿದ್ಧ ಜಗನ್ನಾಥ ಯಾತ್ರೆ ಜೂನ್​ 20ರಿಂದ ಪ್ರಾರಂಭವಾಗಿದ್ದು, ಅಂದಿನಿಂದಲೇ ದೇಶಾದ್ಯಂತ ಎಲ್ಲ ಜಗನ್ನಾಥ ಮಂದಿರಗಳಲ್ಲೂ ಉತ್ಸವ ಶುರುವಾಗಿದೆ. ಇಂದು ಯಾತ್ರೆಯ ಮುಕ್ತಾಯದ ದಿನವಾಗಿದ್ದು, ದೇವರನ್ನು ರಥದಲ್ಲಿ ಕೂರಿಸಿ, ರಥ ಎಳೆಯಲಾಗುತ್ತದೆ. ತ್ರಿಪುರಾ ಕುಮಾರ್​ಘಾಟ್​ನ ಜಗನ್ನಾಥ ದೇಗುಲದಲ್ಲೂ ಕೂಡ ಇಂದು ರಥೋತ್ಸವದ ಅಂತಿಮ ದಿನವಾಗಿತ್ತು.

Exit mobile version