ತೆಲಂಗಾಣ: ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್ ಇಬ್ಬರೂ ಬಿಜೆಪಿಯಲ್ಲಿದ್ದಾಗ ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನ ಮಾಡಿದ್ದಾರೆ. ಸದ್ಯ ನೂಪುರ್ ಶರ್ಮಾ ಅಮಾನತುಗೊಂಡಿದ್ದರೆ, ನವೀನ್ ಜಿಂದಾಲ್ ಪಕ್ಷದಿಂದಲೇ ಉಚ್ಚಾಟನೆಗೊಂಡಿದ್ದಾರೆ. ಆದರೂ ಇವರಿಬ್ಬರೂ ಪಕ್ಷಕ್ಕೆ ಮಾಡಿ ಹೋದ ಹಾನಿಯನ್ನು ಪೂರ್ತಿಯಾಗಿ ಸರಿಪಡಿಸಿಕೊಳ್ಳಲು ಇನ್ನೂ ಬಿಜೆಪಿಗೆ ಸಾಧ್ಯವಾಗಿಲ್ಲ. ಅಷ್ಟರಲ್ಲಾಗಲೇ ತೆಲಂಗಾಣದ ಬಿಜೆಪಿ ನಾಯಕ ಟಿ. ರಾಜಾಸಿಂಗ್ ಮತ್ತದೇ ತಪ್ಪು ಮಾಡಿದ್ದಾರೆ. ಪ್ರವಾದಿ ಮೊಹಮ್ಮದ್ಗೆ ಅಪಮಾನ ಮಾಡಿ, ಮತ್ತೊಂದಷ್ಟು ಗಲಾಟೆ ಸೃಷ್ಟಿಸಿದ್ದಾರೆ. ಸದ್ಯ ರಾಜಾ ಸಿಂಗ್ ಕೂಡ ಪಕ್ಷದಿಂದ ಅಮಾನತುಗೊಂಡಿದ್ದಾರೆ.
ಪ್ರವಾದಿ ವಿರುದ್ಧ ಅವಹೇಳನ ಮಾಡಿ, ಆ ವಿಡಿಯೋ ಹರಿಬಿಟ್ಟ ರಾಜಾ ಸಿಂಗ್ ವಿರುದ್ಧ ದೂರು ದಾಖಲಾಗಿತ್ತು. ಇಂದು ಬೆಳಗ್ಗೆ ಹೈದರಾಬಾದ್ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಅದರ ಬೆನ್ನಲ್ಲೇ ಬಿಜೆಪಿ ರಾಜಾ ಸಿಂಗ್ರನ್ನು ಅಮಾನತು ಮಾಡಿದ್ದು, ಶೋಕಾಸ್ ನೋಟಿಸ್ಗೆ 10ದಿನಗಳಲ್ಲಿ ಉತ್ತರ ಕೊಡದೆ ಇದ್ದರೆ, ಉಚ್ಚಾಟನೆ ಮಾಡುವುದಾಗಿ ಎಚ್ಚರಿಕೆ ನೀಡಿದೆ.
ವಿವಾದಗಳ ರಾಜಾ !
ಪ್ರವಾದಿ ವಿರುದ್ಧ ಮಾತನಾಡಿ ಇಂದು ಅಮಾನತುಗೊಂಡ ಟೈಗರ್ ರಾಜಾ ನಾವಲ್ ಸಿಂಗ್ ಲೋಧ ಮೊದಲಿನಿಂದಲೂ ಒಂಥರ ಬಾಯಿಬಡುಕನಂತೇ ಇದ್ದವರು. ಅಂದರೆ ತಮ್ಮ ಮಾತುಗಳ ಮೂಲಕವೇ ಹಲವು ವಿವಾದವನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದವರು. ಆದರೆ ತೆಲಂಗಾಣದಲ್ಲಿ 2023ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದೆ. ಆ ರಾಜ್ಯದಲ್ಲಿ ಗಟ್ಟಿ ಅಸ್ತಿತ್ವ ಸ್ಥಾಪಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಾರಂಭ ಮಾಡಿದೆ. ಪ್ರಸಕ್ತ ಸಾಲಿನ ರಾಷ್ಟ್ರೀಯ ಕಾರ್ಯಕಾರಿಣಿಯನ್ನೂ ತೆಲಂಗಾಣದಲ್ಲಿಯೇ ದೊಡ್ಡಮಟ್ಟದಲ್ಲಿ ನಡೆಸಿದೆ. ತಳಮಟ್ಟದಿಂದ ಪಕ್ಷ ಕಟ್ಟುವ ಪ್ರಯತ್ನದಲ್ಲಿ ತೊಡಗಿದೆ. ಹೀಗೆಲ್ಲ ಇರುವಾಗ ಟಿ.ರಾಜಾ ಸಿಂಗ್ ತನ್ನ ಮಾತುಗಳಿಂದಲೇ ಎಡವಟ್ಟು ಮಾಡಿದ್ದಾರೆ.
ಆಗಲೇ ಹೇಳಿದಂತೆ ಟಿ.ರಾಜಾ ಸಿಂಗ್ ವಿವಾದ ಇದೇ ಮೊದಲಲ್ಲ. ಈ ಹಿಂದೊಮ್ಮೆ ರೊಹಿಂಗ್ಯಾಗಳಿಗೆ ಶೂಟ್ ಮಾಡಬೇಕು ಎಂದು ಹೇಳಿದ್ದರು. ಅಷ್ಟೇ ಅಲ್ಲ, ಉತ್ತರ ಪ್ರದೇಶ ಚುನಾವಣೆಯಲ್ಲಿ ಯೋಗಿ ಆದಿತ್ಯನಾಥ್ಗೆ ಮತ ಹಾಕದವರ ಮನೆಯನ್ನು ಕೆಡುವುತ್ತೇವೆಂದೂ ಬೆದರಿಕೆಯೊಡ್ಡಿ ಸುದ್ದಿ ಮಾಡಿದ್ದರು. ಇವರ ವಿರುದ್ಧ ಒಟ್ಟು 72 ಕೇಸ್ಗಳು ದಾಖಲಾಗಿವೆ. ಅದರಲ್ಲಿ ಹೆಚ್ಚಿನವೆಲ್ಲ ದ್ವೇಷ ಭಾಷಣ, ಪ್ರಚೋದನಕಾರಿ ಮಾತುಗಳಿಂದಲೇ ಬಿದ್ದ ಕೇಸ್ಗಳಾಗಿವೆ. ಹಾಗೇ, ಕಾನೂನು ಮತ್ತು ಸುವ್ಯವಸ್ಥೆ ಹದಗೆಡಿಸಿದ ಆರೋಪವನ್ನೂ ಹೊತ್ತಿದ್ದಾರೆ.
ಭಾಗ್ಯನಗರವೆಂದು ಹೆಸರಿಡಿ
ಹೈದರಾಬಾದ್ಗೆ ಭಾಗ್ಯನಗರ ಎಂದು ಮರುನಾಮಕರಣ ಮಾಡಬೇಕು ಎಂದು ಮೊಟ್ಟಮೊದಲಿಗೆ, 2018ರಲ್ಲಿ ಧ್ವನಿ ಎತ್ತಿದ್ದೇ ಈ ಟಿ.ರಾಜಾ. ಈಗ ಅದನ್ನು ಬಿಜೆಪಿಯ ಪ್ರತಿಯೊಬ್ಬ ಶಾಸಕ-ಸಚಿವರೂ ಹೇಳುತ್ತಾರೆ. ಇದು ಬಿಜೆಪಿಯ ಚುನಾವಣಾ ಪ್ರಣಾಳಿಕೆಯಲ್ಲಿ ಒಂದಾಗಿದೆ. ಹಾಗೇ ಇತ್ತೀಚೆಗೆ 12ನೇ ಶತಮಾನದ ಸೂಫಿ ಸಂತ ಹಜ್ರತ್ ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಬಗ್ಗೆಯೂ ಅವಹೇಳನಕಾರಿ ಮಾತುಗಳನ್ನಾಡಿದ್ದರು. ರಾಮನವಮಿ ಸಂದರ್ಭದಲ್ಲಿ ಮುಸ್ಲಿಮರು ಮೆರವಣಿಗೆಗೆ ಕಲ್ಲೆಸಿದಿದ್ದಕ್ಕೆ ತೀವ್ರ ಆಕ್ರೋಶ ಭರಿತರಾಗಿ ಮಾತನಾಡಿದ್ದ ರಾಜಾ, ಮುಸ್ಲಿಮರನ್ನೆಲ್ಲ ಬಹಿಷ್ಕರಿಸಬೇಕು ಎಂದೂ ಹೇಳಿದ್ದರು. ಅದಕ್ಕೂ ಮೊದಲು ಅಯೋಧ್ಯಾ ರಾಮಮಂದಿರದ ಬಗ್ಗೆ ಮಾತನಾಡಿದ್ದ ಅವರು, ‘ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗುತ್ತಿರುವುದನ್ನು ಯಾರೆಲ್ಲ ವಿರೋಧಿಸುತ್ತಿದ್ದಾರೋ, ಅವರ ಶಿರಚ್ಛೇದ ಮಾಡಬೇಕು’ ಎಂದಿದ್ದರು.
ಇದನ್ನೂ ಓದಿ: ಪ್ರವಾದಿ ಮೊಹಮ್ಮದ್ಗೆ ಅವಹೇಳನ; ತೆಲಂಗಾಣ ಬಿಜೆಪಿ ಶಾಸಕ ರಾಜಾ ಸಿಂಗ್ ಪಕ್ಷದಿಂದಲೇ ಅಮಾನತು