ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹಮ್ಮಿಕೊಂಡಿರುವ ಆಜಾದಿ ಕಾ ಅಮೃತ್ ಮಹೋತ್ಸವದ ಭಾಗವಾಗಿ ಇಂದು ನೂತನ ಸಂಸತ್ ಭವನದ (New Parliament Building) ಲೋಕಾರ್ಪಣೆಯಾಯಿತು. ಹೊಸ ಸಂಸತ್ ಭವನ ಉದ್ಘಾಟನೆ ಸ್ಮರಣಾರ್ಥ ಪ್ರಧಾನಿ ಮೋದಿ (PM Modi) ಅವರು ಇಂದು ವಿಶೇಷ ಅಂಚೆಚೀಟಿ ಮತ್ತು 75 ರೂಪಾಯಿ ಮೌಲ್ಯದ ನಾಣ್ಯವನ್ನು ಬಿಡುಗಡೆ ಮಾಡಿದರು. ಮುಂಜಾನೆ 7.30ರಿಂದ ಮೊದಲ ಹಂತವಾಗಿ, ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮೊದಲು ಗಣಪತಿ ಹೋಮ ನಡೆದು, ನಂತರ ಸೆಂಗೋಲ್ (ತಮಿಳುನಾಡಿನ ವಿಶೇಷ ರಾಜದಂಡ)ನ್ನು ಪ್ರಧಾನಿ ಮೋದಿಯವರು ಸಂಸತ್ತಿನಲ್ಲಿ ಲೋಕಸಭೆ ಸ್ಪೀಕರ್ ಕುಳಿತುಕೊಳ್ಳುವ ಕುರ್ಚಿ ಬಲಭಾಗದಲ್ಲಿ ಪ್ರತಿಷ್ಠಾಪಿಸಿದರು. ಬಳಿಕ ಸರ್ವ ಧರ್ಮ ಪ್ರಾರ್ಥನೆಯೂ ನಡೆಯಿತು.
ನಾಣ್ಯದ ವಿಶೇಷತೆ
ಎರಡನೇ ಹಂತದ ಕಾರ್ಯಕ್ರಮ 11.30 ರಿಂದ ನೂತನ ಸಂಸತ್ ಭವನದಲ್ಲಿ ಪ್ರಾರಂಭಗೊಂಡು 1.10ರವರೆಗೆ ನಡೆಯಿತು. ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಅಂಚೆಚೀಟಿ ಮತ್ತು 75ರೂ. ನಾಣ್ಯ ಬಿಡುಗಡೆಗೊಳಿಸಿದರು. ನಾಣ್ಯ 36 ಗ್ರಾಂಗಳಷ್ಟಿದ್ದು, 44 ಮಿಲಿಮೀಟರ್ ವ್ಯಾಸ ಹೊಂದಿದೆ. ಅಂಚಿನಲ್ಲಿ ಉದ್ದಕ್ಕೂ 200 ಸರಪಣಿಗಳ ಮುದ್ರಣವಿರುತ್ತದೆ. ನಾಣ್ಯವು 50% ಬೆಳ್ಳಿ, 40% ತಾಮ್ರ, 5% ನಿಕಲ್ ಮತ್ತು 5% ಸತುವನ್ನು ಒಳಗೊಂಡಿರುವ ಕ್ವಾಟರ್ನರಿ ಮಿಶ್ರಲೋಹವನ್ನು ಹೊಂದಿದೆ.
ನಾಣ್ಯದ ಒಂದು ಭಾಗದಲ್ಲಿ ರಾಷ್ಟ್ರೀಯ ಲಾಂಛನವಾದ ಅಶೋಕ ಸ್ತಂಭದಲ್ಲಿರುವ ಸಿಂಹಗಳ ಜೊತೆಗೆ ‘ಸತ್ಯಮೇವ ಜಯತೇ’ ಎಂಬ ವಾಕ್ಯ ನಾಣ್ಯದ ಹಿಂಭಾಗದಲ್ಲಿ ಇರಲಿದೆ. ಇಂಗ್ಲಿಷ್ ಹಾಗೂ ದೇವನಾಗರಿ ಲಿಪಿಯಲ್ಲಿ ಎಡ- ಬಲ ಕಡೆಗಳಲ್ಲಿ ʼಭಾರತʼ ಎಂದು ಬರೆದಿರುತ್ತದೆ. ನಾಣ್ಯದ ಮೇಲ್ಬದಿಯಲ್ಲಿ ಇಂಗ್ಲಿಷ್‌ನಲ್ಲಿ ಹಾಗೂ ಕೆಳಬದಿಯಲ್ಲಿ ದೇವನಾಗರಿ ಲಿಪಿಯಲ್ಲಿ ʼಸಂಸತ್ ಭವನʼ ಎಂದು ಕೆತ್ತಲಾಗಿದೆ. ನಾಣ್ಯದ ವಿನ್ಯಾಸ ಸಂವಿಧಾನದ ಮೊದಲ ಶೆಡ್ಯೂಲ್‌ನಲ್ಲಿ ನಿರ್ದಿಷ್ಟಪಡಿಸಿದ ಮಾರ್ಗಸೂಚಿಗಳಿಗೆ ಅನುಗುಣವಾಗಿದೆ.
#WATCH | Prime Minister Narendra Modi releases a stamp and Rs 75 coin in the new Parliament. pic.twitter.com/7YSi1j9dW9
— ANI (@ANI) May 28, 2023