Site icon Vistara News

Covid 19 Updates: 7ತಿಂಗಳ ಬಳಿಕ ಇಂದು 7 ಸಾವಿರಕ್ಕೂ ಹೆಚ್ಚು ಕೊರೊನಾ ಕೇಸ್​ ದಾಖಲು; 16ಸೋಂಕಿತರು ಸಾವು

7830 new Covid cases reports in India in 24 hours

#image_title

ಭಾರತದಲ್ಲಿ ಇತ್ತೀಚೆಗೆ ಕೊರೊನಾ ವೈರಸ್​ (Covid 19 Updates) ಪ್ರಮಾಣದಲ್ಲಿ ನಿರಂತರವಾಗಿ ಹೆಚ್ಚಳವಾಗುತ್ತಿದೆ. ಹೊಸ ಅಲೆಯೇನೂ ಏಳುವುದಿಲ್ಲ. ಈಗ ಸೋಂಕಿನ ಲಕ್ಷಣಗಳು ಸೌಮ್ಯವಾಗಿವೆ, ಆತಂಕ ಬೇಡ ಎಂದು ಆರೋಗ್ಯ ತಜ್ಞರು ಹೇಳುತ್ತಿದ್ದರೂ, ದಿನದಿಂದ ದಿನಕ್ಕೆ ಪತ್ತೆಯಾಗುತ್ತಿರುವ ಸೋಂಕಿತರ ಸಂಖ್ಯೆ ಏರುತ್ತಿದೆ. ಕಳೆದ 24ಗಂಟೆಯಲ್ಲಿ 7830 ಕೇಸ್​ಗಳು ದಾಖಲಾಗಿವೆ. ಏಳು ತಿಂಗಳಲ್ಲಿ ಇದೇ ಮೊದಲ ಬಾರಿಗೆ ಒಂದು ದಿನದಲ್ಲಿ ಇಷ್ಟು ಪ್ರಮಾಣದ ಕೊರೊನಾ ಕೇಸ್​​ಗಳು ಪತ್ತೆಯಾಗಿರಲಿಲ್ಲ. ಈ ಮೂಲಕ ಭಾರತದಲ್ಲಿ ಸೋಂಕಿತರ ಒಟ್ಟು 4,47,76,002ಕ್ಕೆ ಏರಿಕೆಯಾಗಿದೆ. ಮಂಗಳವಾರ 5676 ಕೊರೊನಾ ಕೇಸ್​ಗಳು ದಾಖಲಾಗಿದ್ದವು, ಆದರೆ ಒಂದೇ ದಿನದಲ್ಲಿ ಸುಮಾರು 2000ಗಳಷ್ಟೇ ಹೆಚ್ಚಾಗಿದೆ. ಸದ್ಯ ದೇಶದಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 40,215.

ದೇಶದಲ್ಲಿ 24ಗಂಟೆಯಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 16. ಸೋಂಕು ಶುರುವಾದಾಗಿನಿಂದ ಇದುವರೆಗೆ ಪ್ರಾಣ ಕಳೆದುಕೊಂಡವರ ಒಟ್ಟಾರೆ ಸಂಖ್ಯೆ 5,31,016. ದೇಶದಲ್ಲಿ ಕೊರೊನಾ ಚೇತರಿಕೆ ಪ್ರಮಾಣ ಶೇ.98.72ರಷ್ಟಿದೆ. ಹಾಗೇ, ಮರಣದ ದರ ಶೇ.1.19 ಆಗಿದೆ ಮತ್ತು ದೈನಂದಿನ ಪಾಸಿಟಿವಿಟಿ ರೇಟ್​ ಶೇ.3ಕ್ಕಿಂತಲೂ ಜಾಸ್ತಿಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. 2022ರ ಸೆಪ್ಟೆಂಬರ್​ 1ರಂದು 7946 ಕೊವಿಡ್​ 19 ಕೇಸ್​ಗಳು ದಾಖಲಾಗಿದ್ದವು. ಅದಾದ ಮೇಲೆ ಒಂದು ದಿನದಲ್ಲಿ ಇಷ್ಟು ದಾಖಲಾಗಿರಲಿಲ್ಲ.

ಇದನ್ನೂ ಓದಿ: Covid 19 Updates: ಎಚ್ಚರವಿರಲಿ, ಹೆಚ್ಚುತ್ತಿದೆ ಕೊರೊನಾ; ಇಂದು ದೇಶದಲ್ಲಿ 3824 ಕೊವಿಡ್​ 19 ಕೇಸ್​ಗಳು ದಾಖಲು

ಈ ಸಲ ಕೊರೊನಾ ಹರಡುತ್ತಿರಲು ಮುಖ್ಯ ಕಾರಣ ಅದರ XBB1.16 ತಳಿ. ಇದು ಒಮಿಕ್ರಾನ್​ನ ಉಪತಳಿಯಾಗಿದೆ. ಹಾಗೇ, ಸದ್ಯ ಕೊರೊನಾ ವೈರಸ್​​ ಗಂಭೀರ ಸ್ವರೂಪದ ಲಕ್ಷಣಗಳನ್ನು ಉಂಟು ಮಾಡುತ್ತಿಲ್ಲ. ಆಸ್ಪತ್ರೆಗೆ ದಾಖಲಾಗುವವರ ಮತ್ತು ಸಾಯುವವರ ಪ್ರಮಾಣ ಕಡಿಮೆಯಿದೆ. ಕೊವಿಡ್​ 19 ನಿರ್ಬಂಧಿತ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಕೇಂದ್ರ ಆರೋಗ್ಯ ಇಲಾಖೆ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೂ ಸೂಚನೆ ನೀಡಿದೆ. ಒಂದೊಂದೇ ರಾಜ್ಯದಲ್ಲಿ ಮಾಸ್ಕ್​ಗಳನ್ನು ಕಡ್ಡಾಯಗೊಳಿಸಲಾಗುತ್ತಿದೆ.

Exit mobile version