Site icon Vistara News

Bengal Coal Scam Case | ಮಮತಾ ನಾಡಿಗೆ ತನಿಖಾ ದಳಗಳ ಲಗ್ಗೆ; 8 ಐಪಿಎಸ್​ ಅಧಿಕಾರಿಗಳಿಗೆ ಇಡಿ ಸಮನ್ಸ್​​

Coal Scam

ಕೋಲ್ಕತ್ತ: 2020ರ ಜಾನುವಾರು ಕಳ್ಳಸಾಗಣೆ ಪ್ರಕರಣದಡಿ ಸಿಎಂ ಮಮತಾ ಬ್ಯಾನರ್ಜಿ ಆಪ್ತ ಅನುಬ್ರತಾ ಮಂಡಲ್​​ ಅವರನ್ನು ಸಿಬಿಐ ಬಂಧಿಸಿದ ಬೆನ್ನಲ್ಲೇ, ಇಡಿ ಇನ್ನೊಂದು ಕೇಸ್​​ನಲ್ಲಿ ತನಿಖೆ ಚುರುಕುಗೊಳಿಸಿದೆ. ಪಶ್ಚಿಮ ಬಂಗಾಳದ ಕಲ್ಲಿದ್ದಲು ಅಕ್ರಮ ಮಾರಾಟ ಹಗರಣದಡಿ ಐಪಿಎಸ್​ ಅಧಿಕಾರಿಗಳಾದ ಜ್ಞಾನವಂತ್ ಸಿಂಗ್, ಕೋಟೇಶ್ವರ ರಾವ್, ಎಸ್.ಸೆಲ್ವಮುರುಗನ್, ಶ್ಯಾಮ್ ಸಿಂಗ್, ರಾಜೀವ್ ಮಿಶ್ರಾ, ಸುಕೇಶ್ ಕುಮಾರ್ ಜೈನ್ ಮತ್ತು ತಥಾಗತ ಬಸು ಎಂಬುವರಿಗೆ ಸಮನ್ಸ್​ ನೀಡಿದ್ದು, ದೆಹಲಿಗೆ ಬಂದು ವಿಚಾರಣೆ ಎದುರಿಸುವಂತೆ ಸೂಚಿಸಿದೆ. ಒಬ್ಬೊಬ್ಬ ಅಧಿಕಾರಿಗೂ ಒಂದೊಂದು ದಿನಾಂಕವನ್ನು ಇಡಿ ನಿಗದಿ ಪಡಿಸಿದೆ. ಆಗಸ್ಟ್​ 21ರಿಂದ 31ರೊಳಗೆ ಎಲ್ಲ ಐಪಿಎಸ್ ಅಧಿಕಾರಿಗಳ ವಿಚಾರಣೆಗೂ ಪೂರ್ಣಗೊಳ್ಳಲಿದೆ.

ಕಲ್ಲಿದ್ದಲು ಅಕ್ರಮ ಗಣಿಗಾರಿಕೆ, ಸಾಗಣೆ ನಡೆಯುತ್ತಿದ್ದುದು ಇವರಿಗೆಲ್ಲ ಗೊತ್ತಿತ್ತಾದರೂ, ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಅದರಲ್ಲೂ ಕೆಲವು ಅಧಿಕಾರಿಗಳಂತೂ ಕಲ್ಲಿದ್ದಲು ಅಕ್ರಮ ಸಾಗಣೆಗೆ ಸಹಾಯವನ್ನೂ ಮಾಡಿದ್ದಾರೆ. ಕಲ್ಲಿದ್ದಲು ಹೊತ್ತ ವಾಹನ ಯಾವುದೇ ತೊಂದರೆಯಿಲ್ಲದೆ, ತಲುಪಬೇಕಾದ ಸ್ಥಳಕ್ಕೆ ಹೋಗಲು ಇವರೇ ಖುದ್ದಾಗಿ ನಿಂತು ವ್ಯವಸ್ಥೆ ಮಾಡಿದ್ದಾರೆ. ಅದಕ್ಕೆ ಸಾಕ್ಷಿಯೂ ಇದೆ ಎಂದು ಇಡಿ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

19 ಸಾವಿರ ಕೋಟಿ ರೂಪಾಯಿಗೂ ಅಧಿಕ ಮೊತ್ತದ ಈ ಕಲ್ಲಿದ್ದಲು ಹಗರಣದಲ್ಲಿ, ಮಮತಾ ಬ್ಯಾನರ್ಜಿ ಹತ್ತಿರದ ಸಂಬಂಧಿ ಅಭಿಷೇಕ್​ ಬ್ಯಾನರ್ಜಿಯವರ ಆಪ್ತ, ಟಿಎಂಸಿ ಯುವ ನಾಯಕ ವಿನಯ್​ ಮಿಶ್ರಾ ಪ್ರಮುಖ ಆರೋಪಿ ಮತ್ತು ಸ್ಥಳೀಯ ಕಲ್ಲಿದ್ದಲು ನಿರ್ವಾಹಕ ಅನುಪ್ ಮಾಝಿ ಕೂಡ ಇದರಲ್ಲಿ ಭಾಗಿಯಾಗಿರುವ ಶಂಕೆ ಇದೆ. ಈ ಕಲ್ಲಿದ್ದಲು ಅಕ್ರಮ ಸಾಗಣೆ, ಕಾಳಸಂತೆಯಲ್ಲಿ ಮಾರಾಟ ಪ್ರಕರಣದ ತನಿಖೆಯನ್ನು ಇಡಿ ಮತ್ತು ಸಿಬಿಐ ಎರಡೂ ತನಿಖಾ ದಳಗಳು ನಡೆಸುತ್ತಿವೆ. ಅಭಿಷೇಕ್​ ಬ್ಯಾನರ್ಜಿಯನ್ನೂ ಕೂಡ ಈಗಾಗಲೇ ಎರಡೂ ತನಿಖಾ ದಳಗಳು ವಿಚಾರಣೆಗೆ ಒಳಪಡಿಸಿವೆ. ಹಾಗೇ, ಈ ಕೇಸ್​​ಗೆ ಸಂಬಂಧಪಟ್ಟು ಮೂರ್ನಾಲ್ಕು ಜನರನ್ನು ಇಡಿ ಬಂಧಿಸಿದೆ.

ಇದನ್ನೂ ಓದಿ: Anubrata Mondal | ಸಿಎಂ ಮಮತಾ ಬ್ಯಾನರ್ಜಿ ಆಪ್ತ ಅನುಬ್ರತಾ ಮಂಡಲ್​ರನ್ನು ಬಂಧಿಸಿದ ಸಿಬಿಐ

Exit mobile version