ಭೋಪಾಲ್: ಕಳೆದ ನಾಲ್ಕು ದಿನಗಳ (ಡಿ.6) ಹಿಂದೆ ಮಧ್ಯಪ್ರದೇಶ ಬೇತುಲ್ ಜಿಲ್ಲೆಯ ಮಾಂಡ್ವಿ ಗ್ರಾಮದಲ್ಲಿ ಕೊಳವೆ ಬಾವಿಗೆ ಬಿದ್ದಿದ್ದ 8 ವರ್ಷದ ಹುಡುಗ ತನ್ಮಯ್ ಸಾಹು ಕೊನೆಗೂ ಬದುಕಿ ಹೊರಬರಲಿಲ್ಲ. ಆತನ ರಕ್ಷಣೆಗೆ 65 ಗಂಟೆಗಳು (ಎರಡೂವರೆ ದಿನಗಳು) ಕಾರ್ಯಾಚರಣೆ ನಡೆಸಲಾಗಿತ್ತು. ಕೊಳವೆ ಬಾವಿಯ ಒಳಗೇ ಆತ ಸಾವನ್ನಪ್ಪಿದ್ದ. ಮೃತದೇಹವನ್ನು ಹೊರತೆಗೆದು, ಅದನ್ನು ಬೇತುಲ್ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ರಕ್ಷಣಾ ಸಿಬ್ಬಂದಿ ಆ ಪುಟ್ಟ ಹುಡುಗನ ದೇಹವನ್ನು ಕೊಳವೆ ಬಾವಿಯಿಂದ ತೆಗೆದು, ಅದನ್ನು ಆ್ಯಂಬುಲೆನ್ಸ್ಗೆ ಹಾಕಿ ಆಸ್ಪತ್ರೆಗೆ ಕರೆದೊಯ್ಯುವ ದೃಶ್ಯವನ್ನು ವಿಡಿಯೊದಲ್ಲಿ ನೋಡಬಹುದು.
ಡಿಸೆಂಬರ್ 6ರಂದು ಸಂಜೆ ಹೊತ್ತು ಹೊಲದಲ್ಲಿ ಆಟವಾಡುತ್ತಿದ್ದ ತನ್ಮಯ್ ಅಲ್ಲಿಯೇ ಇದ್ದ ಕೊಳವೆಬಾವಿಗೆ ಬಿದ್ದು, ಸುಮಾರು 55 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದ. ಅಂದು ತಡರಾತ್ರಿ 2.30ರಿಂದ ರಕ್ಷಣಾ ಕಾರ್ಯಾಚರಣೆ ಪ್ರಾರಂಭವಾಗಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿ, ಎಸ್ಡಿಆರ್ಎಫ್ (ರಾಜ್ಯ ವಿಪತ್ತು ಪ್ರತಿಕ್ರಿಯಾ ಪಡೆ), ಪೊಲೀಸ್ ಜತೆ ಸ್ಥಳೀಯರೂ ಕಾರ್ಯಾಚರಣೆಗೆ ಕೈಜೋಡಿಸಿದ್ದರು. ಆದರೆ ಆ ಹಳ್ಳಿಯಲ್ಲಿ ಕೊಳವೆ ಬಾವಿ ಇದ್ದ ಪ್ರದೇಶದಲ್ಲಿ ಕಲ್ಲು ಜಾಸ್ತಿ ಇರುವುದರಿಂದ ಭೂಮಿ ಅಗೆಯಲು ವಿಳಂಬವಾಗುತ್ತಿತ್ತು. ಕೊಳವೆ ಬಾವಿ ಪಕ್ಕದಲ್ಲಿ, ಅದಕ್ಕೆ ಸಮಾನಾಂತರವಾಗಿ ನೆಲವನ್ನು ಜೆಸಿಬಿ ಮೂಲಕ ಅಗೆಯಬೇಕಾದ ಅಗತ್ಯ ಇತ್ತು. ಆದರೆ ಕಲ್ಲು ಜಾಸ್ತಿ ಇದ್ದಿದ್ದರಿಂದ ಬೇಗಬೇಗ ಕೆಲಸ ಆಗುತ್ತಿರಲಿಲ್ಲ. ಅದೇ ಬಾಲಕನ ರಕ್ಷಣೆಗೆ ತೊಡಕಾಯಿತು ಎಂದು ಬೇತುಲ್ ಜಿಲ್ಲಾಡಳಿತ ತಿಳಿಸಿದೆ.
‘ನನ್ನ ಮಗ ತೆರೆದ ಕೊಳವೆ ಬಾವಿಗೆ ಬಿದ್ದ ಎಂದು ಗೊತ್ತಾಗುತ್ತಿದ್ದಂತೆ ಅಲ್ಲಿಗೆ ಓಡಿದೆವು. ಆತನ ಧ್ವನಿ ಬೋರ್ವೆಲ್ನಿಂದ ಕೇಳುತ್ತಿತ್ತು. ಅವನು ಉಸಿರಾಡುತ್ತಿದ್ದ. ಸಂಜೆ 6ಗಂಟೆ ಹೊತ್ತಿಗೇ ಅಲ್ಲಿ ರಕ್ಷಣಾ ಸಿಬ್ಬಂದಿ ಆಗಮಿಸಿದರು. ತಡರಾತ್ರಿಯಿಂದ ಚುರುಕಾಗಿ ಕಾರ್ಯಾಚರಣೆ ಶುರು ಮಾಡಲಾಯಿತು’ ಎಂದು ಬಾಲಕನ ತಂದೆ ಹೇಳಿದ್ದಾರೆ.