Site icon Vistara News

ವಿಡಿಯೊ ನೋಡುತ್ತಿದ್ದಾಗಲೇ ಮೊಬೈಲ್ ಸ್ಫೋಟವಾಗಿ 8 ವರ್ಷದ ಬಾಲಕಿ ಸಾವು; ಮುಖ, ಕೈಯೆಲ್ಲ ಛಿದ್ರಛಿದ್ರ

8 Year Old Girl Dies After Mobile Explodes In Kerala

#image_title

ತಿರುವನಂತಪುರಂ: ಕೈಯಲ್ಲಿ ಹಿಡಿದಿದ್ದ ಮೊಬೈಲ್ ಸ್ಫೋಟಗೊಂಡು 8ವರ್ಷದ ಬಾಲಕಿಯೊಬ್ಬಳು ಮೃತಪಟ್ಟ ದುರ್ಘಟನೆ ಕೇರಳದ ತಿರುವಿಲ್ವಾಮಲದಲ್ಲಿ ನಡೆದಿದೆ. ಬಾಲಕಿಯ ಹೆಸರು ಆದಿತ್ಯಶ್ರೀ ಎಂದಾಗಿದ್ದು, ಅಶೋಕ್​ ಕುಮಾರ್​ ಮತ್ತು ಸೌಮ್ಯಾ ದಂಪತಿಯ ಪುತ್ರಿ. ಅಶೋಕ್​ ಕುಮಾರ್ ಅವರು ತಿರುವಿಲ್ವಾಮಲ ಗ್ರಾಮ ಪಂಚಾಯಿತಿಯ ಪಜಯನ್ನೂರು ಬ್ಲಾಕ್​​ನ ಮಾಜಿ ಸದಸ್ಯ.

ಸೋಮವಾರ ರಾತ್ರಿ 10.30ರ ಹೊತ್ತಿಗೆ ಬಾಲಕಿ ಕೈಯಲ್ಲಿ ಮೊಬೈಲ್​ ಹಿಡಿದುಕೊಂಡು ವಿಡಿಯೊ ನೋಡುತ್ತ ಕುಳಿತಿದ್ದಳು. ಆಕೆ ತುಂಬ ಹೊತ್ತಿನಿಂದಲೂ ಹಾಗೆ ಮೊಬೈಲ್​ ಆನ್​ಮಾಡಿಟ್ಟುಕೊಂಡು ನೋಡುತ್ತಲೇ ಇದ್ದಳು. ಬಳಿಕ ಅದು ಸ್ಫೋಟವಾಗಿದೆ. ಮೊಬೈಲ್ ಬ್ಯಾಟರಿ ಸಿಕ್ಕಾಪಟೆ ಹೀಟ್ ಆಗಿ, ಸ್ಫೋಟವಾಗಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ. ವಿಧಿವಿಜ್ಞಾನ ಪರೀಕ್ಷೆ ನಂತರವೇ ಸ್ಪಷ್ಟ ಕಾರಣ ಗೊತ್ತಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಈ ಫೋನ್​​ನ್ನು ಮೂರು ವರ್ಷಗಳ ಹಿಂದೆ ಖರೀದಿ ಮಾಡಲಾಗಿತ್ತು. ಅದೂ ಕೂಡ ಆದಿತ್ಯಶ್ರೀಯ ಚಿಕ್ಕಪ್ಪ ಖರೀದಿ ಮಾಡಿ, ಅದನ್ನು ಆಕೆಯ ತಂದೆ ಅಶೋಕ್​ ಕುಮಾರ್ ಕುಮಾರ್​ಗೆ ಕೊಟ್ಟಿದ್ದರು. ಕಳೆದ ವರ್ಷ ಈ ಮೊಬೈಲ್ ಬ್ಯಾಟರಿಯನ್ನು ಬದಲಿಸಲಾಗಿತ್ತು. ಎಲ್ಲಿ ಮೊಬೈಲ್ ಖರೀದಿ ಮಾಡಲಾಗಿತ್ತೋ, ಅಲ್ಲೇ ಬ್ಯಾಟರಿಯನ್ನು ಬದಲು ಮಾಡಲಾಗಿತ್ತು ಎಂದು ಹೇಳಲಾಗಿದೆ.

ಇನ್ನು ಘಟನೆ ನಡೆದಾಗ ಮನೆಯಲ್ಲಿ ಆದಿತ್ಯಶ್ರೀ ಮತ್ತು ಆಕೆಯ ಅಜ್ಜಿ ಇಬ್ಬರೇ ಇದ್ದರು. ಅಜ್ಜಿ ಊಟಕ್ಕೆಂದು ಅಡಿಗೆ ಮನೆಗೆ ಹೋಗಿದ್ದಾಗ ಮೊಬೈಲ್​ ಸ್ಫೋಟವಾಗಿದೆ. ಬಾಲಕಿಯ ಮುಖಕ್ಕೆ ತೀವ್ರ ಗಾಯವಾಗಿತ್ತು. ಆಕೆಯ ಬಲಗೈ ಕೈಬೆರಳುಗಳು, ಅಂಗೈಯೆಲ್ಲ ತುಂಡಾಗಿತ್ತು’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಂದಹಾಗೇ, ಈ ಹುಡುಗಿ ಸ್ಥಳೀಯ ಕ್ರಿಸ್ಟ್​ ನ್ಯೂ ಲೈಫ್​ ಶಾಲೆಯಲ್ಲಿ ಮೂರನೇ ತರಗತಿ ಓದುತ್ತಿದ್ದಳು.

ಇದನ್ನೂ ಓದಿ: Shivamogga Blast | ಶಿವಮೊಗ್ಗದಲ್ಲಿ ರಸ್ತೆಬದಿ ನಿಲ್ಲಿಸಿದ್ದ ಕಾರಿನಲ್ಲಿ ಮೊಬೈಲ್‌ ಸ್ಫೋಟ

ಕಳೆದ ವರ್ಷ ಸೆಪ್ಟೆಂಬರ್​ನಲ್ಲಿ ಉತ್ತರ ಪ್ರದೇಶದ ಲಖನೌದಲ್ಲಿ ಇಂಥದ್ದೇ ಒಂದು ಘಟನೆ ನಡೆದಿತ್ತು. ಚಾರ್ಜ್​ಗೆ ಹಾಕಿದ್ದ ಮೊಬೈಲ್ ಸ್ಫೋಟಗೊಂಡು 8ತಿಂಗಳ ಮಗುವೊಂದು ಮರಣಹೊಂದಿತ್ತು. ಹೆಣ್ಣುಮಗುವನ್ನು ಮಂಚದ ಮೇಲೆ ಮಲಗಿಸಿ, ಆಕೆಯ ತಾಯಿ ಬಟ್ಟೆ ಒಣಗಿಹಾಕಲೆಂದು ಹೊರಹೋಗಿದ್ದಳು. ಅದೇ ಮಂಚದ ಪಕ್ಕದಲ್ಲಿ ಮೊಬೈಲ್ ಚಾರ್ಜ್​ಗೆ ಹಾಕಲಾಗಿತ್ತು. ಅದು ಸ್ಫೋಟವಾಗಿ ಮಗು ಸ್ಥಳದಲ್ಲೇ ಮೃತಪಟ್ಟಿತ್ತು.

Exit mobile version