ಭೋಪಾಲ್: ಮಧ್ಯಪ್ರದೇಶ ರಾಜ್ಯ ಸರ್ಕಾರಿ ನೌಕರನ ಮನೆಯಲ್ಲಿದ್ದ, ದಾಖಲೆಗಳೇ ಇಲ್ಲದ 85 ಲಕ್ಷ ರೂಪಾಯಿಯನ್ನು ಮಧ್ಯಪ್ರದೇಶ ಆರ್ಥಿಕ ಅಪರಾಧಗಳ ತಡೆ ದಳ ( EOW) ವಶಪಡಿಸಿಕೊಂಡಿದೆ. ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಮೇಲ್ದರ್ಜೆ ಗುಮಾಸ್ತ (Upper Division Clerk)ನಾಗಿದ್ದ ಕೇಸ್ವಾನಿ ಭೋಪಾಲ್ನ ಬೈರಾಗರ್ ಪ್ರದೇಶದ ನಿವಾಸಿ. ಪ್ರಾರಂಭದಲ್ಲಿ ತಿಂಗಳಿಗೆ 4 ಸಾವಿರ ರೂಪಾಯಿ ವೇತನ ಪಡೆಯುತ್ತಿದ್ದ ಈತನೀಗ ತಿಂಗಳಿಗೆ 50 ಸಾವಿರಕ್ಕೂ ಅಧಿಕ ಹಣ ಸಂಪಾದನೆ ಮಾಡುತ್ತಿದ್ದ. ಕೇಸ್ವಾನಿ ಅಕ್ರಮ ಹಣ, ಆಸ್ತಿ ಸಂಪಾದನೆ ಮಾಡಿದ್ದಾನೆ ಎಂದು ದೂರು ದಾಖಲಾದ ಹಿನ್ನೆಲೆಯಲ್ಲಿ ಇಒಡಬ್ಲ್ಯೂ ಅಧಿಕಾರಿಗಳು ದಾಳಿ ನಡೆಸಿ, ಮನೆಯನ್ನು ಶೋಧಿಸಿದ್ದರು. ಈ ವೇಳೆ 85 ಲಕ್ಷ ರೂಪಾಯಿ ನಗದು ಪತ್ತೆಯಾಗಿದೆ.
ವಿಷ ಕುಡಿದ ಕೇಸ್ವಾನಿ
ಆರ್ಥಿಕ ಅಪರಾಧಗಳ ತಡೆ ದಳದ ಅಧಿಕಾರಿಗಳು ಮನೆಯನ್ನು ರೇಡ್ ಮಾಡಿ, ಹಣ ಪತ್ತೆ ಮಾಡುತ್ತಿದ್ದಂತೆ ಕೇಸ್ವಾನಿ ವಿಷ ಸೇವನೆ ಮಾಡಿದ್ದಾನೆ. ಅದಕ್ಕೂ ಮೊದಲು ಅಧಿಕಾರಿಗಳು ಮನೆ ಪ್ರವೇಶ ಮಾಡದಂತೆ ತಡೆಯಲು ಇವನು ಪ್ರಯತ್ನ ಮಾಡಿದ್ದ. ಮನೆ ಬಾಗಿಲಿಗೆ ಬಂದ ಇವರನ್ನು ನೂಕಿ, ರಾದ್ಧಾಂತ ಸೃಷ್ಟಿಸಿದ್ದ.
ಕೇಸ್ವಾನಿ ವಿಷ ಸೇವನೆ ಮಾಡಿದಾಕ್ಷಣ ಅಧಿಕಾರಿಗಳೇನು ಶೋಧ ಕಾರ್ಯ ನಿಲ್ಲಿಸಲಿಲ್ಲ. ಅಸ್ವಸ್ಥಗೊಂಡಿದ್ದ ಅವನನ್ನು ಆಸ್ಪತ್ರೆಗೆ ದಾಖಲು ಮಾಡಿ, ತಮ್ಮ ಕೆಲಸ ಮುಂದುವರಿಸಿದ್ದಾರೆ. ಕೇಸ್ವಾನಿ ಕೋಟ್ಯಂತರ ರೂಪಾಯಿ ಅಸ್ತಿ ಗಳಿಕೆ ಮಾಡಿದ್ದಕ್ಕೆ ಸಂಬಂಧಪಟ್ಟ ದಾಖಲೆಗಳೂ ಕೂಡ ಸಿಕ್ಕಿವೆ ಎಂದು ಹೇಳಲಾಗಿದೆ. ಬುಧವಾರ ರಾತ್ರಿವರೆಗೂ ಇಒಡಬ್ಲ್ಯೂ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಕಂತೆಕಂತೆ ಹಣವನ್ನು ನೋಡಿ, ಅದನ್ನು ಲೆಕ್ಕ ಹಾಕಲು ಮಷಿನ್ ಕೂಡ ತರಿಸಿಕೊಂಡಿದ್ದರು. ಕೇಸ್ವಾನಿ ವಿರುದ್ಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಪಾರ್ಥ ಚಟರ್ಜಿ ಆಪ್ತೆ ಅರ್ಪಿತಾ ಮನೆಯಲ್ಲಿ ಹಣದ ಹೊಳೆ; ಇಂದು ಮತ್ತೆ 20 ಕೋಟಿ ರೂ. ನಗದು ಪತ್ತೆ !