ಭೋಪಾಲ್: ನಮ್ಮ ದೇಶದಲ್ಲಿ ನಶಿಸುತ್ತಿರುವ ಚೀತಾಗಳ ಸಂತತಿಯನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ಚೀತಾಗಳನ್ನು ತರಲಾಗಿದೆ. ಆದರೆ ಈ ಯೋಜನೆಗೆ ಭಾರಿ ಹಿನ್ನಡೆಯಾಗುತ್ತಿದೆ. ಒಂದರ ಬೆನ್ನಿಗೆ ಒಂದರಂತೆ ಚೀತಾಗಳು ಸಾಯುತ್ತಿವೆ (Cheetah Dies). ಇಂದು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ (Kuno National Park) ಇನ್ನೊಂದು ಚೀತಾದ ಮೃತದೇಹ ಪತ್ತೆಯಾಗಿದೆ.
ಈ ಸಲ ಮೃತಪಟ್ಟಿದ್ದು ದಕ್ಷಿಣ ಆಫ್ರಿಕಾದಿಂದ ತರಲಾದ ಚೀತಾ. ಅಲ್ಲಿಂದ ತಂದ ಮೇಲೆ ಇದಕ್ಕೆ ಸೂರಜ್ ಎಂದು ಹೆಸರಿಡಲಾಗಿತ್ತು. ಇಂದು ಮುಂಜಾನೆ ಕುನೊ ರಾಷ್ಟ್ರೀಯ ಉದ್ಯಾನವನದ ಸಿಬ್ಬಂದಿ ಅರಣ್ಯದಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಇದರ ಮೃತದೇಹ ಸಿಕ್ಕಿದೆ. ಕಳೆದ 4 ದಿನಗಳ ಹಿಂದೆ ತೇಜಸ್ ಹೆಸರಿನ ಚೀತಾ ಮೃತಪಟ್ಟಿತ್ತು. ಅದರ ಕುತ್ತಿಗೆ ಮೇಲೆಲ್ಲ ಗಾಯದ ಗುರುತು ಇದ್ದವು. ಇದೀಗ ಕುನೊ ಉದ್ಯಾನವನದಲ್ಲಿ ಮೃತಪಟ್ಟ ಚೀತಾಗಳ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.
ಭಾರತಕ್ಕೆ ಇಲ್ಲಿಯವರೆಗೆ 20 ಚೀತಾಗಳನ್ನು ತರಲಾಗಿದೆ. ಅದರಲ್ಲಿ 8ನ್ನು ನಮೀಬಿಯಾದಿಂದ ಮತ್ತು 12ನ್ನು ದಕ್ಷಿಣ ಆಫ್ರಿಕಾದಿಂದ ತರಲಾಗಿತ್ತು. ಅದರಲ್ಲಿ ಚೀತಾವೊಂದು ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ಹೀಗೆ ಹುಟ್ಟಿದ ಮರಿಗಳಲ್ಲಿ ಮೂರು ಈಗಾಗಲೇ ಸತ್ತಿವೆ. ಇದೀಗ ಮೃತಪಟ್ಟ ಚೀತಾಗಳಲ್ಲಿ ಕೆಲವು ಅನಾರೋಗ್ಯದಿಂದ ಮೃತಪಟ್ಟಿದ್ದರೆ, ಇನ್ನೂ ಕೆಲವು ಪರಸ್ಪರ ಕಾಳಗ ಮಾಡಿಕೊಂಡು, ತೀವ್ರವಾಗಿ ಗಾಯಗೊಂಡು ಮೃತಪಟ್ಟಿವೆ. ಇತ್ತೀಚೆಗೆ ಮೃತಪಟ್ಟ ತೇಜಸ್ ಚೀತಾ ಕೂಡ ದಕ್ಷಿಣ ಆಫ್ರಿಕಾದಿಂದ ತಂದಿದ್ದೇ ಆಗಿತ್ತು.
ಇದನ್ನೂ ಓದಿ: Cheetah Dies: ಮತ್ತೊಂದು ಚೀತಾ ಸಾವು! 4 ತಿಂಗಳಲ್ಲಿ ಒಟ್ಟು 7 ಚೀತಾಗಳು ಮೃತ, ಏನು ಕಾರಣ?
ಮಧ್ಯಪ್ರದೇಶಕ್ಕೆ ಕರೆತರಲಾದ ಚೀತಾಗಳು ಒಂದರ ಬೆನ್ನಿಗೆ ಒಂದು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಪ್ರಾಣಿತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಚೀತಾಗಳನ್ನು ಬಿಡಲು ಮಧ್ಯಪ್ರದೇಶದ ರಾಷ್ಟ್ರೀಯ ಉದ್ಯಾನವನ ಸೂಕ್ತ ಸ್ಥಳವಲ್ಲ ಎಂಬ ಅಭಿಪ್ರಾಯವನ್ನೂ ಹಲವರು ವ್ಯಕ್ತಪಡಿಸಿದ್ದಾರೆ. ಸ್ಥಳಾವಕಾಶ ಕಡಿಮೆ ಇದ್ದಲ್ಲಿ ಹೀಗೆ ಪ್ರಾಣಿಗಳ ಕಾಳಗವೂ ಹೆಚ್ಚಿರುತ್ತದೆ ಎಂದೂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.