Site icon Vistara News

ದೀದಿ ಸಂಪುಟ ಸೇರಿದ​​ ಮಾಜಿ ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ; 9 ಮಂದಿ ಪ್ರಮಾಣ ವಚನ ಸ್ವೀಕಾರ

9 Ministers took oath as ministers in the West Bengal Cabinet

ನವ ದೆಹಲಿ: ಪಶ್ಚಿಮ ಬಂಗಾಳ ಕ್ಯಾಬಿನೆಟ್​​ನಲ್ಲಿ ದೊಡ್ಡಮಟ್ಟದ ವಿಸ್ತರಣೆಯಾಗಿದೆ. 2011ರಲ್ಲಿ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಇಲ್ಲಿಯವರೆಗೆ ಒಮ್ಮೆ ಸಂಪುಟ ರಚನೆ ಆದ ಬಳಿಕ ಇಷ್ಟು ದೊಡ್ಡ ಮಟ್ಟದ ಬದಲಾವಣೆ ಆಗಿರಲಿಲ್ಲ ಎಂದೂ ಹೇಳಲಾಗಿದೆ. ಮಾಜಿ ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ಸೇರಿ 9 ಟಿಎಂಸಿ ಶಾಸಕರು ಇಂದು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಿದರು.

ಶಾಲಾ ನೇಮಕಾತಿ ಹಗರಣದಡಿ ಪಶ್ಚಿಮ ಬಂಗಾಳ ಸಚಿವ ಪಾರ್ಥ ಚಟರ್ಜಿ ಬಂಧಿತರಾದ ಮೇಲೆ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಹೀಗಾಗಿ ಅವರ ಉಸ್ತುವಾರಿಯಲ್ಲಿದ್ದ, ವಾಣಿಜ್ಯ ಮತ್ತು ಉದ್ಯಮ ಇಲಾಖೆ, ಸಂಸದೀಯ ವ್ಯವಹಾರಗಳ ಇಲಾಖೆ, ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್‌, ಸಾರ್ವಜನಿಕ ಉದ್ಯಮ ಮತ್ತು ಕೈಗಾರಿಕಾ ಪುನನಿರ್ಮಾಣ ಇಲಾಖೆಗಳು ಖಾಲಿಯಾಗಿವೆ. ಇನ್ನು 2021ರ ನವೆಂಬರ್​​ನಲ್ಲಿ ಸುಭ್ರತ್ ಮುಖರ್ಜಿ ಮೃತಪಟ್ಟಿದ್ದರು. ಇವರು ಪಶ್ಚಿಮ ಬಂಗಾಳದ ಪಂಚಾಯತ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದರು. ಹಾಗೇ, ಗ್ರಾಹಕ ವ್ಯವಹಾರಗಳು ಮತ್ತು ಸ್ವಸಹಾಯ ಗುಂಪು ಮತ್ತು ಸ್ವ-ಉದ್ಯೋಗ ಇಲಾಖೆ ಸಚಿವರಾಗಿದ್ದ ಸಾಧನ್​ ಪಾಂಡೆ 2022ರ ಫೆಬ್ರವರಿಯಲ್ಲಿ ಸಾವನ್ನಪ್ಪಿದ್ದಾರೆ. ಇವರಿಬ್ಬರೂ ನಿಭಾಯಿಸುತ್ತಿದ್ದ ಖಾತೆಗಳೂ ಇನ್ನೂ ಮಮತಾ ಬ್ಯಾನರ್ಜಿ ಸುಪರ್ದಿಯಲ್ಲೇ ಇದ್ದವು. ಈಗ ಒಟ್ಟಾರೆ ಎಲ್ಲ ಖಾತೆಗಳ ಹಂಚಿಕೆಗಾಗಿ 9 ಶಾಸಕರಿಗೆ ಪ್ರಮೋಶನ್​ ಕೊಡಲಾಗಿದೆ.

ಅಂದಹಾಗೇ, ಇಂದು ಬಾಬುಲ್ ಸುಪ್ರಿಯೋ, ಸ್ನೇಹಾಸಿಸ್​ ಚಕ್ರಬರ್ತಿ, ಪಾರ್ಥ ಭೌಮಿಕ್​, ಉದಯನ್ ಗುಹಾ, ಪ್ರದೀಪ್​ ಮಜುಮ್​​ದರ್​, ತಾಜ್​​ಮುಲ್​ ಹೊಸ್ಸೇನ್​, ಸತ್ಯಜಿತ್​ ಬರ್ಮನ್​, ಬಿರ್ಬಹಾ ಹನ್ಸ್ದಾ, ಬಿಪ್ಲಬ್​ ರಾಯ್​ ಚೌಧರಿ ಅವರು ಪಶ್ಚಿಮ ಬಂಗಾಳದ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಇವರಲ್ಲಿ ಬಾಬುಲ್ ಸುಪ್ರಿಯೋ ಬಿಜೆಪಿಯಿಂದ ಟಿಎಂಸಿಗೆ ಬಂದವರು. ಬಿಜೆಪಿಯಲ್ಲಿ ಕೇಂದ್ರ ಸಚಿವರೂ ಆಗಿದ್ದವರು. ಅವರನ್ನು ಕೇಂದ್ರ ಕ್ಯಾಬಿನೆಟ್​ ಸಚಿವ ಸ್ಥಾನದಿಂದ ತೆಗೆದ ಬಳಿಕ ಅಸಮಾಧಾನಗೊಂಡು, 2021ರಲ್ಲಿ ಬಿಜೆಪಿ ತೊರೆದು ಟಿಎಂಸಿ ಸೇರ್ಪಡೆಯಾಗಿದ್ದಾರೆ. 2022ರ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಬ್ಯಾಲಿಗಂಜ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು.

ಇಂದು ಪ್ರಮಾಣ ವಚನ ಸ್ವೀಕಾರ ಮಾಡಿದವರಲ್ಲಿ ಬಿರ್ಬಹಾ ಹನ್ಸ್ದಾ, ಬಿಪ್ಲಬ್​ ರಾಯ್​ ಚೌಧರಿ, ತಾಜ್​​ಮುಲ್​ ಹೊಸ್ಸೇನ್ ಮತ್ತು ಸತ್ಯಜಿತ್​ ಬರ್ಮನ್ ಅವರು ಸಹಾಯಕ ಸಚಿವರಾಗಲಿದ್ದು, ಬಿರ್ಬಹಾ ಹನ್ಸ್ದಾ ಹಾಗೂ ಬಿಪ್ಲಬ್​ ರಾಯ್​ ಚೌಧರಿ ಸ್ವತಂತ್ರ್ಯ ಖಾತೆ ನಿಭಾಯಿಸಲಿದ್ದಾರೆ.

ಇದನ್ನೂ ಓದಿ: ಪಶ್ಚಿಮ ಬಂಗಾಳದ ಬಂಧಿತ ಸಚಿವ ಪಾರ್ಥ ಚಟರ್ಜಿ ಉಚ್ಚಾಟನೆಗೆ ಸ್ವಪಕ್ಷೀಯರಿಂದಲೇ ಆಗ್ರಹ

Exit mobile version