ವಿಶಾಖಪಟ್ಟಣಂ: ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳ (School Students Suicide) ಆತ್ಮಹತ್ಯೆ ಪ್ರಕರಣಗಳೂ ಹೆಚ್ಚುತ್ತವೆ. ಪರೀಕ್ಷೆ ಬರೆಯಲು ಭಯವಾಗಿ ಸಾಯುವವರು, ಬರೆದ ಮೇಲೆ ಫೇಲ್ ಆಗಬಹುದು ಎಂದು ಭಾವಿಸಿ ಆತ್ಮಹತ್ಯೆ ಮಾಡಿಕೊಳ್ಳುವವರು, ರಿಸಲ್ಟ್ ಬಂದ ಮೇಲೆ ಕಡಿಮೆ ಅಂಕ ಬಂತು ಎಂದು ಸಾಯುವವರು..ಒಟ್ನಲ್ಲಿ ಅನೇಕರು ತಮ್ಮ ಜೀವನವನ್ನು ಕೊನೆಗಾಣಿಸಿಕೊಳ್ಳುತ್ತಾರೆ. ಈಗ ಆಂಧ್ರಪ್ರದೇಶದಿಂದ ಒಂದು ಆತಂಕಕಾರಿ ವರದಿ ಹೊರಬಿದ್ದಿದೆ. ಬುಧವಾರ ಆಂಧ್ರಪ್ರದೇಶದಲ್ಲಿ 11 ಮತ್ತು 12ನೇ ತರಗತಿ ವಿದ್ಯಾರ್ಥಿಗಳ ಅಂತಿಮ ಪರೀಕ್ಷೆ ಫಲಿತಾಂಶ (Exams Result) ಹೊರಬಿದ್ದಿದ್ದು, ಶುಕ್ರವಾರದವರೆಗೆ ಒಟ್ಟು 9 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ (School Students Suicide In Andhra Pradesh). ಹಾಗೇ, ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಯತ್ನಿಸಿದವರನ್ನು ರಕ್ಷಿಸಲಾಗಿದೆ. ಅಂದಹಾಗೇ, ಆಂಧ್ರಪ್ರದೇಶದಲ್ಲಿ ಈ ಎರಡೂ ತರಗತಿಗಳಿಂದ 10 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು, 11ನೇ ತರಗತಿ ಫಲಿತಾಂಶ ಶೇ.61 ಮತ್ತು 12ನೇ ತರಗತಿ ಫಲಿತಾಂಶ ಶೇ.72ರಷ್ಟು ದಾಖಲಾಗಿದೆ.
ಬಿ ತರುಣ್ (17) ಎಂಬ ಹುಡುಗ 11ನೇ ತರಗತಿ ಪರೀಕ್ಷೆ ಬರೆದಿದ್ದ. ಮೂಲತಃ ಶ್ರೀಕುಲಂ ಜಿಲ್ಲೆಯ ದಂಡು ಗೋಪಾಲಪುರಂ ಗ್ರಾಮದವನಾದ ಇವನು ಮೂರ್ನಾಲ್ಕು ವಿಷಯದಲ್ಲಿ ಫೇಲ್ ಆಗಿದ್ದ. ಅವನು ಅದೇ ಜಿಲ್ಲೆಯ ರೈಲ್ವೆ ಮಾರ್ಗವೊಂದಕ್ಕೆ ಹೋಗಿ, ಸಂಚರಿಸುತ್ತಿದ್ದ ರೈಲಿನ ಎದುರು ಹಾರಿ ಪ್ರಾಣಬಿಟ್ಟಿದ್ದಾನೆ. ವಿಶಾಖಪಟ್ಟಣಂ ಜಿಲ್ಲೆಯ ತ್ರಿನಾಧಪುರಂ ನಿವಾಸಿಯಾಗಿದ್ದ 16ವರ್ಷದ ಬಾಲಕಿ ಅಖಿಲಶ್ರೀ ಎಂಬಾಕೆ ತನ್ನ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈಕೆ ಕೂಡ ಪಿಯುಸಿ ಮೊದಲ ವರ್ಷದ ಪರೀಕ್ಷೆ ಬರೆದು ಕೆಲವು ವಿಷಯಗಳಲ್ಲಿ ಫೇಲ್ ಆಗಿದ್ದಳು.
ಇನ್ನು ವಿಶಾಖಪಟ್ಟಣಂ ಜಿಲ್ಲೆಯ ಕಂಚರಪಾಲೆಂ ನಿವಾಸಿಯಾಗಿದ್ದ 18ವರ್ಷದ ಹುಡುಗ ಪಿಯುಸಿ ಎರಡನೇ ವರ್ಷದ ಪರೀಕ್ಷೆಯಲ್ಲಿ ಫೇಲ್ ಆದ ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಚಿತ್ತೂರ್ ಜಿಲ್ಲೆಯಲ್ಲಿಯೇ ಇಬ್ಬರು 17ವರ್ಷದ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿದ್ಯಾರ್ಥಿನಿ ನದಿಗೆ ಹಾರಿ ಜೀವ ಬಿಟ್ಟಿದ್ದರೆ, ವಿದ್ಯಾರ್ಥಿಯೊಬ್ಬ ಕೀಟನಾಶಕ ಸೇವನೆ ಮಾಡಿ ಮೃತಪಟ್ಟಿದ್ದಾನೆ. ಹಾಗೇ, ಅಂಕಪಲ್ಲಿ ಎಂಬಲ್ಲಿ 17ವರ್ಷದ ವಿದ್ಯಾರ್ಥಿಯೊಬ್ಬ ಕಡಿಮೆ ಅಂಕ ಬಂದಿದ್ದಕ್ಕೆ ಮನನೊಂದು ನೇಣುಬಿಗಿದುಕೊಂಡು ಮೃತಪಟ್ಟಿದ್ದಾನೆ. ಇನ್ನೂ ಇಬ್ಬರ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಮಕ್ಕಳ ಬಗ್ಗೆ ಪಾಲಕರು ಇನ್ನಷ್ಟು ಎಚ್ಚರಿಕೆ ವಹಿಸಬೇಕು ಎಂದು ಪೊಲೀಸರು ಹೇಳಿದ್ದಾರೆ.