ದೌಸಾ: ರಾಜಸ್ಥಾನದ ದೌಸಾ ಜಿಲ್ಲೆಯ ಡಾ. ಅರ್ಚನಾ ಶರ್ಮಾ ಎಂಬ ವೈದ್ಯೆ ವಿರುದ್ಧ ಗರ್ಭಿಣಿಯನ್ನು ಹತ್ಯೆ ಮಾಡಿದ ಆರೋಪ ಕೇಳಿ ಬಂದಿತ್ತು. ಹೆರಿಗೆ ಸಮಯದಲ್ಲಿ ತೀವ್ರ ರಕ್ತಸ್ರಾವವಾಗಿ ಗರ್ಭಿಣಿ ಮೃತಪಟ್ಟಿದ್ದರು. ಇದರಿಂದ ಕೋಪಗೊಂಡ ಕುಟುಂಬಸ್ಥರು ವೈದ್ಯರ ನಿರ್ಲಕ್ಷ್ಯದಿಂದಲೇ ಗರ್ಭಿಣಿ ಸಾವನ್ನಪ್ಪಿದ್ದಾರೆ ಎಂದು ಡಾ.ಅರ್ಚನಾ ಶರ್ಮಾ ವಿರುದ್ಧ ದೂರು ದಾಖಲಿಸಿದ್ದರು.
ವೈದ್ಯೆ ಅರ್ಚನಾ ಶರ್ಮಾ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ , ಮರಣದಂಡನೆಯನ್ನೂ ವಿಧಿಸಬಹುದಾದ ಕಠಿಣ ನಿಯಮದಡಿ (ಐಪಿಸಿ ಸೆಕ್ಷನ್ 302) ದೂರು ದಾಖಲಾಗಿತ್ತು. ಇದರಿಂದ ಮನನೊಂದ ಡಾ.ಅರ್ಚನಾ ಶರ್ಮಾ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಡೆತ್‌ನೋಟ್‌ನಲ್ಲಿ ಏನಿದೆ..?
ʻನಾನು ಯಾವುದೇ ತಪ್ಪು ಮಾಡಿಲ್ಲ. ನಾನು ಯಾರನ್ನೂ ಹತ್ಯೆ ಮಾಡಿಲ್ಲ. ಪಿಪಿಹೆಚ್ ಎಂಬುದು ಎಲ್ಲರಿಗೂ ತಿಳಿದಿರುವಂತಹ ಕಷ್ಟಕರವಾದ ಸಂಗತಿ. ವೈದ್ಯರನ್ನು ಶೋಷಣೆ ಮಾಡುವುದನ್ನು ನಿಲ್ಲಿಸಿ. ನನ್ನ ಸಾವು ನನ್ನ ಅಮಾಯಕತೆಯನ್ನು ಸಾಬೀತುಪಡಿಸುತ್ತದೆ. ದಯವಿಟ್ಟು ಅಮಾಯಕ ವೈದ್ಯರ ವಿರುದ್ಧ ಶೋಷಣೆ ಮಾಡಬೇಡಿ. ನಾನು ನನ್ನ ಕುಟುಂಬದವರನ್ನು ಪ್ರೀತಿಸುತ್ತೇನೆ. ನನ್ನ ಮರಣದ ಬಳಿಕ ನನ್ನ ಪತಿ ಹಾಗೂ ಮಕ್ಕಳಿಗೆ ದಯವಿಟ್ಟು ಏನೂ ತೊಂದರೆ ಮಾಡಬೇಡಿ. ಕಿರುಕುಳ ನೀಡಬೇಡಿ. ನನ್ನ ಮಕ್ಕಳಿಗೆ ತಾಯಿಯ ಕೊರತೆ ಆಗದಂತೆ ನೋಡಿಕೊಳ್ಳಿ.ʼ
ತನಿಖೆಗೆ ಸಿಎಂ ಗೆಹ್ಲೋಟ್ ಸೂಚನೆ
ಇನ್ನು, ವೈದ್ಯೆ ಡಾ.ಅರ್ಚನಾ ಶರ್ಮಾ ಆತ್ಮಹತ್ಯೆ ಪ್ರಕರಣ ಸಂಬಂಧ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಪ್ರತಿಕ್ರಿಯಿಸಿದ್ದಾರೆ. ವೈದ್ಯರ ಮೇಲೆ ನಡೆಯುತ್ತಿರುವ ಶೋಷಣೆ ಬಗ್ಗೆ ಗಂಭೀರ ಚಿಂತನೆ ನಡೆಸಬೇಕು. ಈ ರೀತಿಯ ಅಮಾನವೀಯ ಘಟನೆಗಳು ಕೂಡಲೇ ನಿಲ್ಲಬೇಕು. ಹಾಗೂ ಅಮಾಯಕ ವೈದ್ಯರು ಆತ್ಮಹತ್ಯೆ ಮಾಡಿಕೊಳ್ಳುವಂತೆ ಸಮಾಜ ಮಾಡಬಾರದು. ಕೊರೊನಾ ಸಂದರ್ಭದಲ್ಲಿ ವೈದ್ಯರು ತಮ್ಮ ಜೀವವನ್ನು ಒತ್ತೆ ಇಟ್ಟು ಹೋರಾಡಿದ್ದಾರೆ. ವೈದ್ಯರನ್ನು ನಾವು ಗೌರವಿಸಬೇಕು. ಅರ್ಚನಾ ಶರ್ಮಾ ಆತ್ಮಹತ್ಯೆ ಪ್ರಕರಣದ ಸೂಕ್ತ ತನಿಖೆ ನಡೆಸಿ ವರದಿ ನೀಡುವಂತೆ ಪೋಲಿಸ್ ಮಹಾ ನಿರ್ದೇಶಕರಿಗೆ ಸಿಎಂ ಅಶೋಕ್ ಗೆಹ್ಲೋಟ್ ಸೂಚನೆ ನೀಡಿದ್ದಾರೆ.