ಪ್ರಧಾನಿ ನರೇಂದ್ರ ಮೋದಿಯವರು ಇಂದು ತಮ್ಮ ತಿಂಗಳ ರೇಡಿಯೋ ಕಾರ್ಯಕ್ರಮ ಮನ್ ಕೀ ಬಾತ್‌ನಲ್ಲಿ ಮಾತನಾಡುತ್ತಿದ್ದಾರೆ. ಇದು ಅವರು ನಡೆಸಿಕೊಡುತ್ತಿರುವ 99ನೇ ಆವೃತ್ತಿಯ ಮನ್ ಕೀ ಬಾತ್ ಆಗಿದೆ. 2014ರ ಅಕ್ಟೋಬರ್ 3ರಂದು ಅಂದರೆ ವಿಜಯದಶಮಿಯಿಂದ ಪ್ರಾರಂಭವಾದ ಈ ವಿನೂತನ ಕಾರ್ಯಕ್ರಮವನ್ನು ಪ್ರಧಾನಿ ಮೋದಿ ಚಾಚೂತಪ್ಪದೆ ನಡೆಸಿಕೊಂಡು ಬಂದಿದ್ದಾರೆ. ಇಂದಿನ ಮನ್ ಕೀ ಬಾತ್ ಸಮಗ್ರ ಮಾಹಿತಿ ಇಲ್ಲಿದೆ.
ಕೆಲ ದಿನಗಳ ಹಿಂದೆ ಕಾಶ್ಮೀರದ ಕುಪ್ವಾರದಲ್ಲಿ ತಾಯಿ ಶಾರದಾ ದೇವಿಯ ಭವ್ಯ ಮಂದಿರವನ್ನು ಲೋಕಾರ್ಪಣೆಗೊಳಿಸಲಾಗಿದೆ. ಈ ಶುಭ ಕಾರ್ಯಕ್ಕಾಗಿ ಜಮ್ಮು ಕಾಶ್ಮೀರದ ಜನತೆಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಮನ್ ಕಿ ಬಾತ್‌ನಲ್ಲಿ ಹೇಳಿದ್ದಾರೆ.
ವೀರ ಲಾಚಿತ್ ಬರ್‌ಫುಕನ್ ಅವರ 400ನೇ ಜಯಂತಿಯನ್ನು ಆಚರಿಸುತ್ತಿದ್ದೇವೆ. ಮೊಘಲದ ಅತಿಕ್ರಮಣದಿಂದ ಗುವಾಹಟಿಯನ್ನು ರಕ್ಷಿಸಿದ ಕೀರ್ತಿ ಮಹಾನ್ ಯೋಧ ಲಾಚಿತ್ ಬರ್ ಫುಕನ್ ಅವರದ್ದಾಗಿದೆ. ಅವರ ಕುರಿತ ಲೇಖನ ಅಭಿಯಾನವೊಂದರಲ್ಲಿ 45 ಲಕ್ಷ ಮಂದಿ ಭಾಗವಹಿಸಿದ್ದರು. ಇದು ಗಿನ್ನಿಸ್ ದಾಖಲೆಯಾಗಿದೆ.
ಏಕ್ ಭಾರತ್ ಶ್ರೇಷ್ಠ್ ಭಾರತ್ ಭಾವನೆಯು ಇಡೀ ದೇಶವನ್ನು ಒಂದುಗೂಡಿಸುತ್ತಿದೆ. ಏಪ್ರಿಲ್ 17-30ರಂದು ಗುಜರಾತ್ ನ ನಾನಾ ಕಡೆಗಳಲ್ಲಿ ಸೌರಾಷ್ಟ್ರ-ತಮಿಳು ಸಂಗಮ್ ಕಾರ್ಯಕ್ರಮ ನಡೆಯಲಿದೆ. ಗುಜರಾತ್-ತಮಿಳುನಾಡು ನಡುವಣ ಐತಿಹಾಸಿಕ ಸಂಬಂಧವನ್ನು ಇದು ಬಿಂಬಿಸಲಿದೆ.
100ನೇ ಮನ್ ಕಿ ಬಾತ್ ಸಲುವಾಗಿ ದೇಶಾದ್ಯಂತ ಜನತೆ ಸಲಹೆಗಳನ್ನು ನೀಡುತ್ತಿದ್ದಾರೆ. ನಾನೂ ಅಷ್ಟೇ ಕಾತರದಲ್ಲಿ ಎದುರು ನೋಡುತ್ತಿದ್ದೇನೆ. ಏಪ್ರಿಲ್ 30ರ ನೂರನೇ ಕಂತನ್ನು ಸ್ಮರಣೀಯಗೊಳಿಸೋಣ.
ದೇಶದ ಕೆಲವು ಕಡೆಗಳಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಜನತೆ ಮುಂಜಾಗರೂಕತಾ ಕ್ರಮ ವಹಿಸಬೇಕು. ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಎಂದು ಪ್ರಧಾನಿ ಮೋದಿ ಮನ್ ಕಿ ಬಾತ್‌ನಲ್ಲಿ ಮನವಿ ಮಾಡಿದ್ದಾರೆ.