ಭೋಪಾಲ್: ಮಧ್ಯಪ್ರದೇಶದಲ್ಲಿ 8 ವರ್ಷದ ಬಾಲಕನೊಬ್ಬ ತೆರೆದ ಕೊಳವೆಬಾವಿಯಲ್ಲಿ ಬಿದ್ದಿದ್ದು, ಅವನ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಬೇತುಲ್ ಜಿಲ್ಲೆಯ ಮಾಂಡ್ವಿ ಗ್ರಾಮದಲ್ಲಿ ಮಂಗಳವಾರ ಸಂಜೆ 5ಗಂಟೆಗೆ ಈ ದುರಂತ ನಡೆದಿದೆ. ಮನೆ ಸಮೀಪದ ಹೊಲದಲ್ಲಿ ಆಟವಾಡುತ್ತಿದ್ದ ಬಾಲಕ, 55 ಅಡಿ ಆಳದ ಕೊಳವೆಬಾವಿಗೆ ಬಿದ್ದಿದ್ದಾನೆ. ನಿನ್ನೆ ತಡರಾತ್ರಿಯಿಂದಲೂ ನಿರಂತರವಾಗಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಕೊಳವೆ ಬಾವಿಗೆ ಬಿದ್ದ ಬಾಲಕನನ್ನು ಹೊರತೆಗೆಯಲು ಭೋಪಾಲ್ ಮತ್ತು ಹೋಶಂಗಾಬಾದ್ನಿಂದ ಎಸ್ಡಿಆರ್ಎಫ್ (ರಾಜ್ಯ ವಿಪತ್ತು ನಿರ್ವಹಣಾ ಪಡೆ) ಸಿಬ್ಬಂದಿ ಮಾಂಡ್ವಿ ಗ್ರಾಮಕ್ಕೆ ತೆರಳಿ, ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆತ ಸಂಜೆ 5ಗಂಟೆಗೇ ಬೋರ್‌ವೆಲ್‌ಗೆ ಬಿದ್ದಿದ್ದರೂ, ರಕ್ಷಣಾ ಕಾರ್ಯಾಚರಣೆ ಶುರುವಾಗಿದ್ದು ತಡರಾತ್ರಿ 2.30ರಿಂದ. ಸ್ಥಳದಲ್ಲಿ ಪೊಲೀಸರು, ಹೋಮ್ ಗಾರ್ಡ್ಸ್ ಸಿಬ್ಬಂದಿ ಅನೇಕರು ನೆರೆದಿದ್ದಾರೆ. ಸ್ಥಳೀಯರೂ ಸಹ ರಕ್ಷಣಾ ಸಿಬ್ಬಂದಿಯೊಂದಿಗೆ ಕೈಜೋಡಿಸಿದ್ದಾರೆ. ತುಂಬ ಆಳದಲ್ಲಿ ಬಾಲಕ ಸಿಲುಕಿದ್ದರಿಂದ ಇನ್ನೂ ಇನ್ನೂ ಕೆಲವು ಗಂಟೆಗಳು ಬೇಕಾಗಬಹುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಶ್ಯಾಮೇಂದ್ರ ಜೈಸ್ವಾಲ್ ತಿಳಿಸಿದ್ದಾರೆ. ಹಾಗೇ, ‘ಕೊಳವೆ ಬಾವಿಯ ಒಳಗೆ ಇರುವ ಬಾಲಕ ಎಚ್ಚರವಾಗಿಲ್ಲ ಎನ್ನಿಸುತ್ತಿದೆ. ಆತ ನಮ್ಮ ಕೂಗಿಗೆ ಸ್ಪಂದಿಸುತ್ತಿಲ್ಲ’ ಎಂದೂ ಹೇಳಿದ್ದಾರೆ.
ಈ ದುರಂತದ ಬಗ್ಗೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಪ್ರತಿಕ್ರಿಯೆ ನೀಡಿದ್ದಾರೆ. ಟ್ವೀಟ್ ಮಾಡಿರುವ ಅವರು ‘ಬಾಲಕನನ್ನು ರಕ್ಷಿಸಲು ಎಲ್ಲ ರೀತಿಯ ಕ್ರಮಗಳನ್ನೂ ಕೈಗೊಳ್ಳುವಂತೆ ಬೇತುಲ್ ಜಿಲ್ಲಾಡಳಿತಕ್ಕೆ ಸೂಚಿಸಿದ್ದೇನೆ. ಅಲ್ಲಿನ ಕ್ಷಣಕ್ಷಣದ ಮಾಹಿತಿಯನ್ನೂ ಪಡೆಯುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಛತ್ತೀಸ್‌ಗಢದಲ್ಲಿ ಬೋರ್‌ವೆಲ್‌ಗೆ ಬಿದ್ದಿದ್ದ 11 ವರ್ಷದ ಬಾಲಕನ ರಕ್ಷಣೆ, 110 ಗಂಟೆಗಳ ಯಶಸ್ವಿ ಕಾರ್ಯಾಚರಣೆ