Site icon Vistara News

Video| ಪಾದಯಾತ್ರೆ ಮಾಡುತ್ತಿರುವ ರಾಹುಲ್​ ಗಾಂಧಿಗೆ ಹಣ ದೇಣಿಗೆ ಕೊಟ್ಟ ಬಾಲಕ; ಇದು ಪಾಕೆಟ್​ ಮನಿ!

A Boy Gave his Piggy Bank to Rahul Gandhi in Bharat Jodo Yatra

ನವ ದೆಹಲಿ: ಕಾಂಗ್ರೆಸ್​ನ ಭಾರತ್​ ಜೋಡೋ ಯಾತ್ರೆ ಮಧ್ಯಪ್ರದೇಶಲ್ಲಿ ನಡೆಯುತ್ತಿದ್ದು, ಭಾನುವಾರ ರಾಹುಲ್ ಗಾಂಧಿ ಬುಲೆಟ್​ ಬೈಕ್​ ರೈಡ್​ ಮಾಡಿದ್ದರು. ಇಂದು ಬೆಳಗ್ಗೆ ಪಾದಯಾತ್ರೆ ಪ್ರಾರಂಭವಾಗುತ್ತಿದ್ದಂತೆ ಬಾಲಕನೊಬ್ಬ, ಕೈಯಲ್ಲಿ ತನ್ನ ‘ಪಿಗ್ಗಿ ಬ್ಯಾಂಕ್’ (ಮಕ್ಕಳು ಹಣ ಕೂಡಿಡಲು ಇರುವ ಬಾಕ್ಸ್​) ತಂದು ರಾಹುಲ್​ ಗಾಂಧಿ ಕೈಯಿಗೆ ಕೊಟ್ಟಿದ್ದಾನೆ. ‘ರಾಹುಲ್​ ಗಾಂಧಿಯವರು ಭಾರತ್ ಜೋಡೋ ಯಾತ್ರೆ ಮೂಲಕ ಎಲ್ಲ ವರ್ಗದವರನ್ನೂ, ಎಲ್ಲರನ್ನೂ ತಮ್ಮೊಂದಿಗೆ ಮುನ್ನಡೆಸುತ್ತಿದ್ದಾರೆ. ಎಲ್ಲರೂ ಸಮಾನರು ಎಂಬ ಸಂದೇಶ ಕೊಡುತ್ತಿದ್ದಾರೆ. ಇದರಿಂದ ನನಗೆ ಖುಷಿಯಾಗಿದೆ. ನಾನು ಈ ಯಾತ್ರೆ ಶುರುವಾದಾಗಿನಿಂದಲೂ ಕೂಡಿಟ್ಟಿದ್ದ ಹಣವನ್ನು ದೇಣಿಗೆ ರೂಪದಲ್ಲಿ ರಾಹುಲ್ ಗಾಂಧಿ ಅವರಿಗೆ ಕೊಡುತ್ತಿದ್ದೇನೆ. ಈ ಹಣ ನನ್ನ ಪಾಕೆಟ್​ ಮನಿಯಿಂದಲೇ ಸಂಗ್ರಹಿಸಿದ್ದು’ ಎಂದು ಆ ಹುಡುಗ ಹೇಳಿದ್ದಾನೆ.

ಬಾಲಕ ಮತ್ತು ಇತರ ಹುಡುಗರು ಪಾದಯಾತ್ರೆಗೆ ಸೇರಿ, ಅಲ್ಲಿ ಹಣ ದೇಣಿಗೆ ನೀಡಿದ ವಿಡಿಯೊವನ್ನು ರಾಹುಲ್​ ಗಾಂಧಿ​ ತಮ್ಮ ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ‘ತ್ಯಾಗ ಮತ್ತು ನಿಸ್ವಾರ್ಥ ಎಂಬ ಮೌಲ್ಯಗಳನ್ನು ಬಾಲ್ಯದಲ್ಲಿಯೇ ರೂಢಿಸಿಕೊಳ್ಳಬೇಕು. ಬಾಲಕ ಕೊಟ್ಟ ಈ ಪಿಗ್ಗಿ ಬ್ಯಾಂಕ್​ ನನ್ನ ಪಾಲಿಗೆ ಅನರ್ಘ್ಯ, ಅನಂತ ಪ್ರೀತಿಯ ನಿಧಿ’ ಎಂದು ಕ್ಯಾಪ್ಷನ್​ ಬರೆದಿದ್ದಾರೆ. ಬಾಲಕನಿಂದ ಆ ಹಣದ ಹುಂಡಿ ತೆಗೆದುಕೊಂಡ ರಾಹುಲ್​ ಗಾಂಧಿ ಅವನ ತಲೆಗೊಂದು ಮುತ್ತು ಕೊಟ್ಟಿದ್ದಾರೆ ಮತ್ತು ಧನ್ಯವಾದ ಸಲ್ಲಿಸಿದ್ದಾರೆ.

ಬಳಿಕ ಮಾತನಾಡಿದ ಬಾಲಕ ‘ಭಾರತ್​ ಜೋಡೋ ಯಾತ್ರೆ ಹಿಂದು-ಮತ್ತು ಮುಸ್ಲಿಮರ ನಡುವಿನ ವೈರತ್ವವನ್ನು ಹೋಗಲಾಡಿಸಿ, ಅವರ ಮಧ್ಯೆ ಸಾಮರಸ್ಯ ತರುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ನನಗೆ ಅನ್ನಿಸುತ್ತದೆ. ಇಲ್ಲಿ ಎಲ್ಲರೂ ಸಮಾನರೇ ಎಂಬುದು ಭಾರತ್ ಜೋಡೋ ಯಾತ್ರೆಯ ಅರ್ಥ’ ಎಂದು ಬಾಲಕ ಹೇಳಿದ್ದಾನೆ.

ಇದನ್ನೂ ಓದಿ: Video| ಭಾರತ್​ ಜೋಡೋ ಯಾತ್ರೆ ವೇಳೆ ನಾಯಿಯನ್ನು ಮುದ್ದಾಡಿ, ನೀಲಿ ಕಾರ್ಪೆಟ್​ ಮೇಲೆ ಬುಲೆಟ್​ ಬೈಕ್​ ರೈಡ್ ಮಾಡಿದ ರಾಹುಲ್​ ಗಾಂಧಿ​​

Exit mobile version