ರಾಂಚಿ: ದೆಹಲಿಯಲ್ಲಿ ಶ್ರದ್ಧಾ ವಾಳ್ಕರ್ ಹತ್ಯೆಯಾದ ಬೆನ್ನಲ್ಲೇ ಅಂಥದ್ದೇ ಮಾದರಿಯ ಹತ್ಯೆಗಳು ಹೆಚ್ಚೆಚ್ಚು ವರದಿಯಾಗುತ್ತಿವೆ. ಅಫ್ತಾಬ್ ತನ್ನ ಲಿವ್ ಇನ್ ಪಾರ್ಟ್ನರ್ ಶ್ರದ್ಧಾಳನ್ನು ಕೊಲೆ ಮಾಡಿ, 35 ತುಂಡುಗಳನ್ನಾಗಿ ಕತ್ತರಿಸಿ ಎಸೆದ ಪ್ರಕರಣದ ತನಿಖೆ ನಡೆಯುತ್ತದೆ. ಇದೀಗ ಅಂಥದ್ದೇ ಮಾದರಿಯ ಹತ್ಯೆಯೊಂದು ಜಾರ್ಖಂಡ್ನ ಸಾಹೀಬ್ಗಂಜ್ನಿಂದ ವರದಿಯಾಗಿದೆ (Jharkhand Man Kills Wife). ಇಲ್ಲಿ ಕಿರಾತಕ ಪತಿಯೊಬ್ಬ ತನ್ನ ಪತ್ನಿಯನ್ನು ಕೊಂದು, ಆಕೆಯ ಶವವನ್ನು ಹಲವು ತುಂಡುಗಳನ್ನಾಗಿ ಕತ್ತರಿಸಿ ಎಸೆದಿದ್ದಾನೆ. ಇಲ್ಲಿಯವರೆಗೆ ಆಕೆಯ ದೇಹ 12 ತುಂಡುಗಳು ಪತ್ತೆಯಾಗಿದ್ದಾಗಿ ಸಾಹೀಬ್ಗಂಜ್ ಪೊಲೀಸರು ತಿಳಿಸಿದ್ದಾರೆ.
ನಾಯಿಗಳು ತಿನ್ನುತ್ತಿದ್ದವು!
ಆರೋಪಿ ದಿಲ್ದಾರ್ ಅನ್ಸಾರಿ ತನ್ನ ಪತ್ನಿ 22 ವರ್ಷದ ರಬಿತಾ ಪಹಾಡಿನ್ಳನ್ನು ಕೊಂದು, ದೇಹವನ್ನು ಹಲವು ಭಾಗಗಳನ್ನಾಗಿ ಕತ್ತರಿಸಿ ಗೋಣಿಚೀಲದಲ್ಲಿ ತುಂಬಿ ಮನೆಯಲ್ಲೇ ಇಟ್ಟುಕೊಂಡಿದ್ದ. ಬಳಿಕ ಬೋರಿಯೋ ಬ್ಲಾಕ್ ಎಂಬಲ್ಲಿ ಹೊಸದಾಗಿ ಕಟ್ಟಲಾದ ಅಂಗನವಾಡಿ ಕೇಂದ್ರದ ಹಿಂಭಾಗದಲ್ಲಿ, ಹುಲ್ಲು -ಪೊದೆ ಬೆಳೆದಿದ್ದ ಜಾಗದಲ್ಲಿ ಒಂದಷ್ಟು ತುಂಡುಗಳನ್ನು ಎಸೆದಿದ್ದ. ಇನ್ನೂ ಒಂದಷ್ಟನ್ನು ಮನೆಯಲ್ಲೇ ಇಟ್ಟುಕೊಂಡಿದ್ದ. ಹೀಗೆ ಅಂಗನವಾಡಿ ಕೇಂದ್ರದ ಹಿಂದೆ ಆತ ಎಸೆದಿದ್ದ ಶವದ ಪೀಸ್ಗಳನ್ನು ಬೀದಿನಾಯಿಗಳು ತಿನ್ನುತ್ತಿದ್ದವು. ಅವುಗಳನ್ನು ಎಳೆದು ರಸ್ತೆ ಬಳಿಯೂ ತಂದಿಟ್ಟುಕೊಂಡಿದ್ದವು. ದಾರಿಹೋಕರು ಒಂದಿಬ್ಬರಿಗೆ ನಾಯಿಗಳು ತಿನ್ನುತ್ತಿರುವ ಮಾಂಸದ ತುಂಡು ನೋಡಿ ಅದು ಮನುಷ್ಯರ ದೇಹದ ಭಾಗದಂತೆ ಕಂಡಿದೆ. ಅನುಮಾನಗೊಂಡ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಹೋದ ಪೊಲೀಸರು ಅಲ್ಲೆಲ್ಲ ಹುಡುಕಿದಾಗ ರಬಿತಾಳ ದೇಹದ ಹಲವು ತುಂಡುಗಳು ಪತ್ತೆಯಾಗಿದೆ. ಆ ಮೃತದೇಹದ ತುಂಡುಗಳನ್ನು ಪರೀಕ್ಷೆಗೆ ಒಳಪಡಿಸಿ, ತನಿಖೆ ಪ್ರಾರಂಭ ಮಾಡಿದ ಪೊಲೀಸರಿಗೆ ಆ ಮಹಿಳೆಯ ಗುರುತು ಸಿಕ್ಕಿದೆ. ಹಾಗೇ, ಆಕೆಯ ಪತಿಯ ಮನೆಗೂ ಹೋಗಿ ಶೋಧಿಸಿದಾಗ ಇನ್ನಷ್ಟು ಪೀಸ್ಗಳು ಪತ್ತೆಯಾಗಿವೆ. ಆದರೆ ಇನ್ನೂ ಒಂದಷ್ಟು ತುಂಡುಗಳು ನಾಪತ್ತೆಯಾಗಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿ ದಿಲ್ದಾರ್ನನ್ನು ಪೊಲೀಸರು ಬಂಧಿಸಿ, ಮತ್ತಷ್ಟು ವಿಚಾರಣೆಗೆ ಒಳಪಡಿಸಿದ್ದಾರೆ.
ದಿಲ್ದಾರ್ ಅನ್ಸಾರಿಯ ತಾಯಿ ಮರಿಯಾಮ್ ಖಾಟೂನ್ ಅವರು ರಬಿತಾಳನ್ನು ಶುಕ್ರವಾರ ಬೋರಿಯೊ ಮಂಜ್ ತೋಲಾದಲ್ಲಿರುವ ಆಕೆಯ ಅಣ್ಣನ ಮನೆಗೆ ಕರೆದುಕೊಂಡು ಹೋಗಿದ್ದರು. ಅಲ್ಲೇ ರಬಿತಾಳ ಹತ್ಯೆಯಾಗಿದೆ. ಹತ್ಯೆಯ ಬಳಿಕ ಕಬ್ಬಿಣ ಕತ್ತರಿಸುವ ಮಶಿನ್ನಿಂದ ರಬಿತಾಳ ದೇಹವನ್ನು ತುಂಡರಿಸಲಾಗಿದೆ. ಅದೆಷ್ಟು ತುಂಡು ಮಾಡಿದ್ದಾರೆ ಗೊತ್ತಿಲ್ಲ. ವಿವಿಧ ಭಾಗಗಳಲ್ಲಿ ಎಸೆದಿದ್ದಾರೆ. ಸದ್ಯ ಹೊಟ್ಟೆಯ ಭಾಗ, ಎರಡು ಕೈಬೆರಳುಗಳು ಸೇರಿ 12 ತುಂಡುಗಳಷ್ಟೇ ಪತ್ತೆಯಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ದಂಪತಿ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಪ್ರತಿದಿನವೂ ಜಗಳವಾಡುತ್ತಿದ್ದರು. ಆತ ಯಾಕೆ ಪತ್ನಿಯ ಕೊಲೆ ಮಾಡಿದ ಎಂಬುದಕ್ಕೆ ಈಗಲೂ ಕಾರಣ ಗೊತ್ತಾಗುತ್ತಿಲ್ಲ. ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದೇವೆ ಎಂದು ಹೇಳಿದ್ದಾರೆ.