ಮುಂಬಯಿ: ಬಾಲಿವುಡ್ ಕಿರುತೆರೆ ನಟಿ ತುನಿಶಾ ಶರ್ಮಾ ಅವರು ಆತ್ಮಹತ್ಯೆ ಮಾಡಿಕೊಂಡ ಕೊಠಡಿಯಲ್ಲಿ ಈಗೊಂದು ಚಿಕ್ಕ ಪತ್ರ ಸಿಕ್ಕಿದೆ. ನಟಿ ತುನಿಶಾ ಆತ್ಮಹತ್ಯೆ ಕೇಸ್ನಲ್ಲಿ ಈಗಾಗಲೇ ಆಕೆಯ ಪ್ರಿಯಕರ ಶಿಜಾನ್ ಖಾನ್ ಬಂಧಿತನಾಗಿದ್ದಾನೆ. ತುನಿಶಾ ಜತೆ ಪ್ರೀತಿಯಲ್ಲಿದ್ದಿದ್ದ ಶಿಜಾನ್ ಬ್ರೇಕಪ್ ಮಾಡಿಕೊಂಡಿದ್ದ. ಇದೇ ಕಾರಣಕ್ಕೆ ನೊಂದು ಅವಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಾಯಿ ದೂರು ನೀಡಿದ್ದರಿಂದಲೇ ಪೊಲೀಸರು ಎಫ್ಐಆರ್ ದಾಖಲು ಮಾಡಿದ್ದಾರೆ.
ಅಲಿಬಾಬಾ ದಾಸ್ತಾನ್ ಇ ಕಾಬೂಲ್ ಟಿವಿ ಸೀರಿಸ್ನಲ್ಲಿ ತುನಿಶಾ ಶರ್ಮಾ ಮತ್ತು ಶಿಜಾನ್ ಖಾನ್ ಒಟ್ಟಿಗೆ ನಟಿಸುತ್ತಿದ್ದು, ಡಿಸೆಂಬರ್ 24ರಂದು ಅದೇ ಸೆಟ್ನಲ್ಲಿರುವ ಶಿಜಾನ್ ಮೇಕಪ್ ಕೋಣೆಯ ಶೌಚಗೃಹದಲ್ಲಿ ತುನಿಶಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಂದು ಶಿಜಾನ್ ಕೂಡ ಅಲ್ಲಿಯೇ ಇದ್ದ. ಮಧ್ಯಾಹ್ನ ಇವರಿಬ್ಬರೂ ಒಟ್ಟಿಗೇ ಕುಳಿತು ಊಟವನ್ನೂ ಮಾಡಿದ್ದರು. ತುನಿಶಾ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸುವಾಗ, ಶಿಜಾನ್ ಸ್ವತಃ ಎತ್ತಿಕೊಂಡು ಆ್ಯಂಬುಲೆನ್ಸ್ಗೆ ಹಾಕಿದ್ದ ಎಂಬಿತ್ಯಾದಿ ವಿಷಯಗಳು ಈಗಾಗಲೇ ಬಹಿರಂಗಗೊಂಡಿವೆ.
ತುನಿಶಾ ಮೃತಪಟ್ಟ ಕೋಣೆಯಲ್ಲಿ ಈಗ ಒಂದು ಸಣ್ಣ ಪತ್ರ ಲಭ್ಯವಾಗಿದೆ. ಅದರಲ್ಲಿ ಒಂದೇ ಸಾಲು ಇದೆ. ‘ಅವನು ನನ್ನಂಥವಳನ್ನು ಆತನ ಸಹನಟಿಯನ್ನಾಗಿ ಪಡೆಯಲು ಪುಣ್ಯ ಮಾಡಿದ್ದ.. ವುಹೂ..(Woohooo)’ ಎಂಬ ಸಾಲುಗಳು ನೋಟ್ನಲ್ಲಿ ಇವೆ. ಅಷ್ಟೇ ಅಲ್ಲ, ‘ತುನಿಶಾ ಮತ್ತು ಶಿಜಾನ್’ ಎಂದೂ ಬರೆಯಲಾಗಿದೆ.
ಡಿ.24ರಂದು ಮಧ್ಯಾಹ್ನ ಊಟದ ಬಳಿಕ ತುನಿಶಾ ಮತ್ತು ಶಿಜಾನ್ ಮಧ್ಯೆ ಮೇಕಪ್ ಕೋಣೆಯಲ್ಲಿ ಸುಮಾರು 15 ನಿಮಿಷಗಳ ಕಾಲ ಮಾತುಕತೆ ನಡೆದಿದೆ. ಅದಾದ ಬಳಿಕ ಇಬ್ಬರೂ ಸ್ವಲ್ಪ ಕ್ರೋಧಗೊಂಡಂತೆ ಕಂಡಿದ್ದರು ಎಂದು ಸೆಟ್ನಲ್ಲಿ ಇದ್ದವರೆಲ್ಲ ಹೇಳಿದ್ದಾಗಿ ಪೊಲೀಸರು ಕೋರ್ಟ್ಗೆ ವರದಿ ಸಲ್ಲಿಸಿದ್ದಾರೆ. ಹಾಗೇ, ಇದೊಂದು ಗಂಭೀರ ಸ್ವರೂಪದ ಪ್ರಕರಣವಾಗಿದೆ. ಶಿಜಾನ್ಗೆ ಇನ್ನೊಬ್ಬಳು ಹುಡುಗಿಯೊಂದಿಗೆ ವಾಟ್ಸ್ಆ್ಯಪ್ನಲ್ಲಿ ನಡೆಸಿದ ಚಾಟ್ಗಳನ್ನು ಡಿಲೀಟ್ ಮಾಡಿದ್ದಾನೆ. ಅದನ್ನು ಮರಳಿ ಪಡೆಯುವ ಪ್ರಯತ್ನ ಮಾಡುತ್ತಿದ್ದೇವೆ. ತನಿಖೆಗೆ ಶಿಜಾನ್ ಸರಿಯಾಗಿ ಸಹಕರಿಸುತ್ತಿಲ್ಲ ಎಂದೂ ಪೊಲೀಸರು ಕೋರ್ಟ್ನಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: Tunisha Sharma Funeral | ಪ್ರೇಮಪಾಶಕ್ಕೆ ಸಿಲುಕಿ ಜೀವ ಕಳೆದುಕೊಂಡ ತುನಿಶಾ ಶರ್ಮಾ ಅಂತ್ಯಕ್ರಿಯೆ, ಕುಸಿದು ಬಿದ್ದ ನಟಿಯ ತಾಯಿ