ಭೋಪಾಲ್: ತರಬೇತಿ ಪಡೆಯುತ್ತಿದ್ದ ಮಹಿಳಾ ಪೈಲೆಟ್ ಹಾರಿಸುತ್ತಿದ್ದ ವಿಮಾನವೊಂದು ಮಧ್ಯಪ್ರದೇಶದ ಬಾಲಾಘಾಟ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ (Plane Crash) ಪತನಗೊಂಡಿದೆ. ಘಟನೆಯಲ್ಲಿ ಪೈಲೆಟ್ ಹಾಗೂ ಇನ್ಸ್ಟ್ರಕ್ಟರ್ ಮೃತಪಟ್ಟಿದ್ದಾರೆ. ಕಾಡಿನ ನಡುವೆ ವಿಮಾನ ಹೊತ್ತಿ ಉರಿಯುತ್ತಿರುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಅದೇ ರೀತಿ ಕಾಡಿನ ಮಧ್ಯೆ ಸುಟ್ಟು ಹೋಗಿರುವ ಒಬ್ಬರ ಮೃತದೇಹವೂ ಪತ್ತೆಯಾಗಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ಘಟನೆ ಪ್ರದೇಶದ ವಿಡಿಯೊವನ್ನು ಟ್ವೀಟ್ನಲ್ಲಿ ಶೇರ್ ಮಾಡಲಾಗಿದೆ
ಪೊಲೀಸರ ಪ್ರಕಾರ ಪತನಗೊಂಡಿರುವುದು ಪೈಲೆಟ್ಗೆ ತರಬೇತಿ ನೀಡುತ್ತಿದ್ದ ಖಾಸಗಿ ವಿಮಾನ. ಇದು ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯ ಬಿರ್ಸಿ ಏರ್ಪೋರ್ಟ್ನಿಂದ ಟೇಕ್ಆಫ್ ಆಗಿತ್ತು. ಬಾಲಾಘಾಟ್ ಅರಣ್ಯ ಪ್ರದೇಶ ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ರಾಜ್ಯದ ಗಡಿಭಾಗದಲ್ಲಿದೆ. ಇದರ ಮೇಲಿನಿಂದ ವಿಮಾನ ಹಾರುವ ವೇಳೆ ಪತನಗೊಂಡಿತು ಎಂದು ಹೇಳಲಾಗಿದೆ. ತಾಂತ್ರಿಕ ದೋಷ ಕಾಣಿಸಿಕೊಂಡಿರುವ ಜತೆಗೆ ತರಬೇತಿ ಪಡೆಯುತ್ತಿದ್ದ ಪೈಲೆಟ್ಗೆ ವಿಮಾನವನ್ನು ನಿಯಂತ್ರಿಸಲು ಸಾಧ್ಯವಾಗದೇ ಘಟನೆ ನಡೆದಿರಬಹುದು ಎಂದು ಹೇಳಲಾಗಿದೆ.
ವಿಮಾನ ಬಿದ್ದಿರುವ ಸ್ಥಳಕ್ಕೆ ಸ್ಥಳೀಯ ಕಿರಣ್ಪುರ ಪೊಲೀಸರು ಧಾವಿಸಿದ್ದಾರೆ. ಸ್ಥಳದಲ್ಲಿ ಜಮಾಯಿಸಿದ್ದ ಜನರನ್ನು ನಿಯಂತ್ರಿಸಿ ಆ ಪ್ರದೇಶವನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳುತ್ತಿದ್ದಾರೆ.
ಮಹಿಳಾ ಪೈಲೆಟ್ಗೆ ಒಬ್ಬರಿಗೆ ತರಬೇತಿ ನೀಡುತ್ತಿದ್ದ ವಿಮಾನ ಅದಾಗಿತ್ತು. ಬಿರ್ಸಿ ಏರ್ಪೋರ್ಟ್ನಿಂದ ಹಾರಿದ ವಿಮಾನ 40 ಕಿಲೋ ಮೀಟರ್ ದೂರಕ್ಕೆ ಸಾಗುವಷ್ಟರಲ್ಲೇ ಪತನಗೊಂಡಿದೆ. ವಿಮಾನವು ದಟ್ಟ ಅರಣ್ಯದ ನಡುವೆ ಬಿದ್ದಿದೆ. ಹೀಗಾಗಿ ಸ್ಥಳೀಯರಿಗೆ ಹಾನಿ ಉಂಟಾಗಿಲ್ಲ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.
ಸ್ಥಳೀಯರು ಘಟನೆ ನಡೆದ ಸ್ಥಳದಲ್ಲಿ ವಿಡಿಯೊ ಮಾಡಿದ್ದಾರೆ. ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸುಟ್ಟು ಕರಕಲಾಗಿರುವ ಮೃತದೇಹ ಹಾಗೂ ವಿಮಾನದ ಅವಶೇಷಗಳು ವಿಡಿಯೊದಲ್ಲಿ ಕಾಣುತ್ತಿವೆ.
ಸ್ಥಳೀಯರು ಘಟನೆ ನಡೆದ ಪ್ರದೇಶದಲ್ಲಿ ಜಮಾಯಿಸಿ ವಿಡಿಯೊ ಹಾಗೂ ಫೋಟೋ ತೆಗೆಯಲು ಪ್ರಯತ್ನಿಸುತ್ತಿದ್ದಾರೆ. ಪೊಲೀಸರು ಅವರನ್ನು ಅವಶೇಷಗಳ ಬಳಿ ಬರದಂತೆ ತಡೆಯಲು ಯತ್ನಿಸುತ್ತಿದ್ದಾರೆ. ಜತೆಗೆ ಘಟನೆ ಸ್ಥಳದಲ್ಲಿ ಮಹಜರು ಕೂಡ ಮಾಡುತ್ತಿದ್ದಾರೆ.
ಘಟನೆ ನಡೆದಿರುವ ಪ್ರದೇಶದ ಸಮೀಪವಿರುವ ಪ್ರದೇಶಕ್ಕೆ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಮಾರ್ಚ್ 20ರಂದು ಭೇಟಿ ನೀಡಲಿದ್ದಾರೆ. ಘಟನೆ ನಡೆದ ಬಳಿಕ ಈ ಬಗ್ಗೆಯೂ ಕಿರಣ್ಪುರ ಪೊಲೀಸರು ಹೆಚ್ಚು ಗಮನ ಹರಿಸುತ್ತಿದ್ದಾರೆ.