Site icon Vistara News

ಹಿರಿಯ ಅಧಿಕಾರಿಯಿಂದ ಅವಮಾನ; ಠಾಣೆಯಲ್ಲೇ ಗುಂಡು ಹೊಡೆದುಕೊಂಡು ಮೃತಪಟ್ಟ ಎಎಸ್​ಐ

Punjab Police

ಚಂಡಿಗಢ್​: ಹೋಶಿಯಾರ್​​ಪುರ ಜಿಲ್ಲೆಯ ಸಹಾಯಕ ಸಬ್​ ಇನ್​ಸ್ಪೆಕ್ಟರ್​ (ASI) ಸತೀಶ್​ ಕುಮಾರ್ (52) ಎಂಬುವರು ಇಂದು ಬೆಳಗ್ಗೆ 10ಗಂಟೆ ಹೊತ್ತಿಗೆ ಠಾಣೆಯಲ್ಲೇ ತಮ್ಮ ಸರ್ವೀಸ್​ ರಿವಾಲ್ವರ್​​ನಿಂದ ಗುಂಡು ಹೊಡೆದುಕೊಂಡು ಮೃತಪಟ್ಟಿದ್ದಾರೆ. ‘ತಮ್ಮ ಸಾವಿಗೆ ಟಂಡಾ ಪೊಲೀಸ್​ ಠಾಣೆಯ ಅಧಿಕಾರಿ (SHO) ಓಂಕಾರ್ ಸಿಂಗ್​ ಎಂಬುವರೇ ಕಾರಣ. ಅವರ ಕಿರುಕುಳ ಸಹಿಸಲು ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ಅವರು ಹೇಳಿರುವ ವಿಡಿಯೋ ಕೂಡ ವೈರಲ್ ಆಗುತ್ತಿದೆ.

‘ಸೆಪ್ಟೆಂಬರ್​ 8ರಂದು ಟಂಡಾ ಪೊಲೀಸ್​ ಠಾಣೆಯ ಅಧಿಕಾರಿ ಓಂಕಾರ್ ಸಿಂಗ್ ಬ್ರಾರ್​ ಅವರು ನಮ್ಮ ಹರಿಯಾನಾ ಪೊಲೀಸ್​ ಠಾಣೆಗೆ ಕರ್ತವ್ಯದ ನಿಮಿತ್ತ ಬಂದಿದ್ದರು. ಈ ಠಾಣೆಯಲ್ಲಿ ದಾಖಲಾಗಿರುವ ಎಷ್ಟು ಪ್ರಕರಣಗಳ ವಿಚಾರಣೆ ಪಂಜಾಬ್​ ಮತ್ತು ಹರ್ಯಾಣ ಹೈಕೋರ್ಟ್​​ನಲ್ಲಿ ಸೆ.9ರಂದು ನಡೆಯಲಿದೆ ಎಂದು ಪ್ರಶ್ನಿಸಿದರು. ಅದಕ್ಕೆ, ‘ನಾನು ತನಿಖೆ ನಡೆಸುತ್ತಿರುವ ಒಂದೇ ಕೇಸ್ ವಿಚಾರಣೆ ಸೆ.9ರಂದು ನಡೆಯಲಿದೆ. ಉಳಿದ ಕೇಸ್​ಗಳ ಬಗ್ಗೆ ಆಯಾಯಾ ತನಿಖಾಧಿಕಾರಿಗಳ ಬಳಿ ಕೇಳಿ’ ಎಂದೆ. ನಾನೇನೋ ಗೌರವಯುತವಾಗಿ, ಸಹಜವಾಗಿ ಹೇಳಿದೆ. ಆದರೆ ಅಷ್ಟಕ್ಕೇ ಓಂಕಾರ್​ ಸಿಂಗ್​ ತನ್ನ ಮೇಲೆ ಕೋಪಗೊಂಡು, ನನ್ನ ವಿರುದ್ಧ ದೂರು ಕೂಡ ಬರೆದರು. ಇದು ನನಗೆ ತುಂಬ ನೋವು ಕೊಟ್ಟಿದೆ. ನನ್ನನ್ನು ಅದೆಷ್ಟು ನಿಂದಿಸಿದರು ಅಂದರೆ, ನೀವು ಹೀಗೆ ನನ್ನ ಮೇಲೆ ಕೂಗಾಡುವ ಬದಲು ಒಂದೇ ಸಲ ಶೂಟ್ ಮಾಡಿಬಿಡಿ ಎಂದು ನಾನೇ ಅವರಿಗೆ ಬಾಯ್ಬಿಟ್ಟು ಹೇಳಿದೆ. ಇಷ್ಟೆಲ್ಲ ಅವಮಾನ ಆದ ನಂತರ ನನಗೆ ಬದುಕಿ ಉಳಿಯಲು ಸಾಧ್ಯವಾಗುತ್ತಿಲ್ಲ’ ಎಂದು ಎಎಸ್​ಐ ಸತೀಶ್ ಕುಮಾರ್​ ಆರೋಪಿಸಿದ್ದಾರೆ.

ಈ ಘಟನೆಯ ಬಗ್ಗೆ ತನಿಖೆ ಪ್ರಾರಂಭವಾಗಿದೆ. ಓಂಕಾರ್ ಸಿಂಗ್​ ಬ್ರಾರ್​​ರನ್ನು ಇಲ್ಲಿಂದ ವರ್ಗಾವಣೆ ಮಾಡಲಾಗಿದೆ. ಆರೋಪ ಸಾಬೀತಾದರೆ ತಕ್ಷಣ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಕಿರಿಯ ಅಧಿಕಾರಿಗಳು ಯಾವುದೇ ಸಮಸ್ಯೆ ಇದ್ದರೂ ನೇರವಾಗಿ ನಮ್ಮಲ್ಲಿಗೇ ಬಂದು ಹೇಳಿಕೊಳ್ಳಿ ಎಂದು ಹೋಶಿಯಾರ್​​ಪುರ ಜಿಲ್ಲಾ ವರಿಷ್ಠಾಧಿಕಾರಿ ಸರ್ತಾಜ್ ಸಿಂಗ್ ಚಾಹಲ್ ಹೇಳಿದ್ದಾರೆ.

ಇದನ್ನೂ ಓದಿ: Viral Video | ಪಂಜಾಬ್​ ಆಮ್​ ಆದ್ಮಿ ಪಕ್ಷದ ಶಾಸಕಿಗೆ ಪತಿಯಿಂದಲೇ ಥಳಿತ

Exit mobile version