ರಾಂಚಿ (ಜಾರ್ಖಂಡ್) : ಆತ ಬೀಡಿ ಕಾರ್ಮಿಕ. ಆತನ ಅಕೌಂಟ್ಗೆ (Bank account) 2019ರಲ್ಲಿ ಏಕಾಏಕಿ ಒಂದು ಲಕ್ಷ ರೂಪಾಯಿ. ಅದಾಗಲೇ ಕೊರೊನಾ ಪೀಡೆ ದೇಶಕ್ಕೆ ವಕ್ಕರಿಸಿಕೊಂಡು ಬಡವರ ಬಾಳು ಬೀದಿ ಪಾಲಾಗಿತ್ತು. ಆರು ಮಕ್ಕಳ ತಂದೆಯಾಗಿರುವ ಆತನಿಗೂ ದುಡ್ಡಿನ ಅವಶ್ಯಕತೆ ಇತ್ತು. ಕಷ್ಟ ಕಾಲಕ್ಕೆ ಪ್ರಧಾನಿ ಮೋದಿ ಕೊಟ್ಟ ಕಾಸು ಎಂದು ಅಂದುಕೊಂಡು ಚೆನ್ನಾಗಿ ಖರ್ಚು ಮಾಡಿದ. ಒಂದು ದಿನ ಬ್ಯಾಂಕ್ ಮ್ಯಾನೇಜರ್ನಿಂದ ಆತನಿಗೆ ಕರೆ ಬಂತು. ಅಲ್ಲಿ ಹೋದಾಗ ಅವರು ಹೇಳಿದ ವಿಷಯ ಕೇಳಿ ಎದೆಯೇ ಒಡೆದು ಹೋದಂತಾಯಿತು. ಯಾಕೆಂದರೆ ಆತನ ಅಕೌಂಟ್ಗೆ ಬಿದ್ದ ದುಡ್ಡು ಮೋದಿ ಕೊಟ್ಟಿದ್ದಲ್ಲ! ಕಾರ್ಮಿಕ ಮಹಿಳೆಯೊಬ್ಬರ ದುಡ್ಡು. ಬ್ಯಾಂಕ್ನವರು ಆಧಾರ್ ಕಾರ್ಡ್ ತಪ್ಪಾಗಿ ನಮೂದಿಸಿದ ಕಾರಣ ಯೋಜನೆಯೊಂದರಲ್ಲಿ ಬಿಡುಗಡೆಯಾದ ದುಡ್ಡು ಬೀಡಿ ಕಾರ್ಮಿಕನ ಅಕೌಂಟ್ಗೆ ಬಿದ್ದಿತ್ತು. ಬ್ಯಾಂಕ್ ಮ್ಯಾನೇಜರ್ ದುಡ್ಡು ವಾಪಸ್ ಕೊಡುವಂತೆ ತಾಕೀತು ಮಾಡಿದ್ದರು. ಬಡ ಕಾರ್ಮಿಕನಿಗೆ ಕೊಡಲಾಗಲಿಲ್ಲ. ಇದೀಗ 420 ಕೇಸ್ ಹಾಕಿಸಿಕೊಂಡು ಜೈಲು ಸೇರಿದ್ದಾನೆ.
ಈ ಘಟನೆ ನಡೆದಿರುವುದು ಜಾರ್ಖಂಡ್ನಲ್ಲಿ. ಕಾರ್ಮಿಕನ ಹೆಸರು ಜೀತ್ರಾಯಿ ಸಾಮಂತ್. 42 ವರ್ಷದ ಅವರು ಪಶ್ಚಿಮ ಸಿಂಗ್ಭುಮ್ ಜಿಲ್ಲೆಯವರು. ದುಡ್ಡು ಶ್ರೀಮತಿ ಲಗೂರಿ ಎಂಬುವ ಮಹಿಳೆಗೆ ಸೇರಿದ್ದರು. ತಮ್ಮ ಒಂದು ಲಕ್ಷ ರೂಪಾಯಿ ಎಲ್ಲಿಗೆ ಹೋಯಿತು ಎಂದು ತಿಳಿಯದೇ ಅವರು ಸಾಕಷ್ಟು ದಿನಗಳ ಬಳಿಕ ಬ್ಯಾಂಕ್ನಲ್ಲಿ ದೂರು ನೀಡಿದ್ದರು. ಅಷ್ಟರಲ್ಲಿ ಜೀತ್ರಾಯಿ ದುಡ್ಡ ಖರ್ಚು ಮಾಡಿದ್ದರು.
ಹಣ ಮರಳಿಸದೇ ಇರುವುದು ಜೀತ್ರಾಯಿ ತಪ್ಪು ಮಾಡಿದ್ದರು, ಅವರಿಗೆ ದುಡ್ಡು ಹೋಗಿದ್ದರಲ್ಲಿ ಬ್ಯಾಂಕ್ ಅಧಿಕಾರಿಗಳ ಪ್ರಮಾದವೂ ಇದೆ. ಯಾಕೆಂದರೆ ಜಿತ್ರಾಯಿ ಅವರು ಖಾತೆ ಹೊಂದಿರುವ ರಾಜ್ಯ ಗ್ರಾಮೀಣ್ ಬ್ಯಾಂಕ್ ಅಧಿಕಾರಿಗಳು ಮಹಿಳೆಯ ಖಾತೆಗೆ ಜೀತ್ರಾಯಿಯ ಆಧಾರ್ ಕಾರ್ಡ್ ಸಂಖ್ಯೆಯನ್ನು ತಪ್ಪಾಗಿ ಲಿಂಕ್ ಮಾಡಿದ್ದರು.
ರಾಜ್ಯ ಗ್ರಾಮೀಣ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾದ ಅಡಿಯಲ್ಲಿ ಕಾರ್ಯಾಚರಿಸುತ್ತಿತ್ತು. ಇದೀಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಡಿಯಲ್ಲಿದೆ. ಬದಲಾವಣೆ ಪ್ರಕ್ರಿಯೆ ವೇಳೆ ಜೀತ್ರಾಯಿ ಆಧಾರ್ ಸಂಖ್ಯೆಯನ್ನು ತಪ್ಪಾಗಿ ಜೋಡಿಸಿದ್ದರು ಬ್ಯಾಂಕ್ ಅಧಿಕಾರಿಗಳು.
ಗೊತ್ತಾಗಿದ್ದರೂ ವಾಪಸ್ ಕೊಡಲಿಲ್ಲ ಎಂದಿದ್ದಾರೆ ಪೊಲೀಸರು
ದುಡ್ಡು ವಾಪಸ್ ಕೊಡುವಂತೆ ತಾಕೀತು ಮಾಡಿದ ಗ್ರಾಮೀಣ ಬ್ಯಾಂಕ್ ಮ್ಯಾನೇಜರ್ ಸಾಕಷ್ಟು ಸಮಯ ಕಾದಿದ್ದಾರೆ. ಆದರೆ, ಜೀತ್ರಾಯಿಗೆ ಅಷ್ಟೊಂದು ದುಡ್ಡು ಒಟ್ಟು ಹಾಕಲು ಸಾಧ್ಯವಾಗಲಿಲ್ಲ. ಆದರೆ, ಪೊಲೀಸರು ಹೇಳುವ ಪ್ರಕಾರ, ಜೀತ್ರಾಯಿ ತನ್ನದಲ್ಲ ಎಂದು ಗೊತ್ತಾದ ಮೇಲೂ ದುಡ್ಡು ಖರ್ಚು ಮಾಡಿ ಮಜಾ ಮಾಡಿದ್ದಾರೆ. ಯಾಕೆಂದರೆ ಗ್ರಾಮೀಣ್ ಬ್ಯಾಂಕ್ಗೆ ಬಂದು ಫಿಂಗರ್ ಪ್ರಿಂಟ್ ದಾಖಲಿಸಿದಾಗ ಅವರ ಅಕೌಂಟ್ನಲ್ಲಿ ಹೆಚ್ಚುವರಿ ಒಂದು ಲಕ್ಷ ರೂಪಾಯಿ ಬಿದ್ದಿರುವುದು ಗೊತ್ತಾಗಿತ್ತು. ಅದನ್ನು ಯಾರಿಗೂ ಹೇಳದಂತೆ ಹೇಳಿ, ಅಲ್ಲಿನ ಅಕೌಂಟೆಂಟ್ಗೆ ಲಂಚ ಕೊಟ್ಟು ದುಡ್ಡು ಬಿಡಿಸಿಕೊಂಡು ಹೋಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ : Supreme Court : ಖಾತೆಯನ್ನು ಕಪ್ಪುಪಟ್ಟಿಗೆ ಸೇರಿಸುವುದಕ್ಕೆ ಮುನ್ನ ಸಾಲಗಾರರಿಗೆ ಬ್ಯಾಂಕ್ ತಿಳಿಸಬೇಕು: ಸುಪ್ರೀಂಕೋರ್ಟ್
ಜೀತ್ರಾಯಿಗೆ ಪೊಲೀಸರು ಮೊದಲ ನೋಟಿಸ್ ಕೊಟ್ಟರೂ ಆತ ಠಾಣೆ ಬಂದಿರಲಿಲ್ಲ. ಬಳಿಕ ಪೊಲೀಸರೇ ಹೋಗಿ ಹಿಡಿದುಕೊಂಡು ಬಂದು ಹಣ ವಾಪಸ್ ಕೊಡುವಂತೆ ಹೇಳಿದ್ದರು. ಆದರೂ ಅವರಿಗೆ ವಾಪಸ್ ಕೊಡಲು ಆಗಿರಲಿಲ್ಲ. ಇದು ನೈತಿಕತೆಯ ಪ್ರಕರಣ. ಅವರು ದುಡ್ಡು ವಾಪಸ್ ಕೊಡಬೇಕಿತ್ತು ಎಂಬುದು ಪೊಲೀಸರ ವಾದ.
ಆಧಾರ್ ಕೇಂದ್ರದ ಅಧಿಕಾರಿಗಳು ಇಲ್ಲಿ ಬ್ಯಾಂಕ್ನವರ ತಪ್ಪು ಇದೆ. ನಮ್ಮದೇನೂ ಇಲ್ಲ ಎಂದು ಹೇಳಿಕೊಂಡಿದ್ದಾರೆ. ಆದರೆ, ಪೊಲೀಸರು ಬಡಪಾಯಿ ಕಾರ್ಮಿಕನ ಮೇಲೆ ಲಾಠಿ ಬೀಸಿದ್ದಾರೆ. ಜೀತ್ರಾಯಿಗೆ ಎರಡು ವರ್ಷ ಜೈಲು ಶಿಕ್ಷೆಯಾಗಿದೆ. ದುಡ್ಡು ಸಿಗದಿದ್ದರೆ ಅಷ್ಟು ದಿನ ಜೈಲು ಗ್ಯಾರಂಟಿ.