ಮುಂಬಯಿ: ಅಪ್ಪ-ಅಮ್ಮಂಗೆ ಚಾಕು ತೋರಿಸಿ, ಅವರಿಂದ 1.14 ಕೋಟಿ ರೂಪಾಯಿ ದೋಚಿದ್ದ 24 ವರ್ಷದ ರಾಹುಲ್ ದೌಂಡ್ಕರ್ ಎಂಬಾತನನ್ನು ಪೊಲೀಸರು ಬಂಧಿಸಿದ ಘಟನೆ ಮುಂಬಯಿಯ ಪಶ್ಚಿಮ ಬಾಂದ್ರಾದಲ್ಲಿ ನಡೆದಿದೆ. ರಾಹುಲ್ ದೌಂಡ್ಕರ್ ತಂದೆ ಮಾರುತಿ ದೌಂಡ್ಕರ್ ಒಬ್ಬರು ಉದ್ಯಮಿ. ಈಗ ಅವರಿಗೆ 66 ವರ್ಷ. ಇವರು ನೀಡಿದ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಇದೀಗ ಆರೋಪಿ ರಾಹುಲ್ನನ್ನು ಅರೆಸ್ಟ್ ಮಾಡಿದ್ದಾರೆ.
ರಾಹುಲ್ ದೌಂಡ್ಕರ್ ತಾನೂ ಉದ್ಯಮ ಪ್ರಾರಂಭಿಸುತ್ತೇನೆ ಎಂದು ಅಪಾರ ಹಣ ಸುರಿದು ಬಳಿಕ ಕೈ ಸುಟ್ಟುಕೊಂಡಿದ್ದ. ಇರುವ ಹಣವನ್ನೆಲ್ಲ ಕಳೆದುಕೊಂಡಿದ್ದ. ಆಗಿನಿಂದಲೂ ಮನೆಯಿಂದ ಹಣ-ಬಂಗಾರದ ಒಡವೆ ತೆಗೆದುಕೊಂಡು ಹೋಗುವುದನ್ನೇ ಕಾಯಕ ಮಾಡಿಕೊಂಡಿದ್ದ ಎಂದು ಆತನ ಪಾಲಕರು ತಿಳಿಸಿದ್ದಾರೆ ಎಂಬುದಾಗಿ ಪಶ್ಚಿಮ ಬಾಂದ್ರಾದ 9ನೇ ವಯಲಯದ ಉಪ ಆಯುಕ್ತ ಅನಿಲ್ ಪರಸ್ಕಾರ್ ತಿಳಿಸಿದ್ದಾರೆ.
ಈ ಹಿಂದೆಯೂ ಒಮ್ಮೆ ರಾಹುಲ್ ದೌಂಡ್ಕರ್ ಹೀಗೇ ಮಾಡಿದ್ದ. ಪಾಲಕರಿಗೆ ಜೀವ ಬೆದರಿಕೆಯೊಡ್ಡಿ, ತಾಯಿಯ 12 ಚಿನ್ನದ ಬಳೆಗಳನ್ನು, ಮನೆಯಲ್ಲಿರುವ ಗಣೇಶನ ವಿಗ್ರಹದ ಚಿನ್ನದ ಕಿರೀಟವನ್ನು, ನಗದನ್ನು ತೆಗೆದುಕೊಂಡಿದ್ದ. ಅಷ್ಟೇ ಅಲ್ಲ, ಪಾಲಕರ ಅಕೌಂಟ್ನಿಂದ 1 ಕೋಟಿ ರೂಪಾಯಿಗಳಷ್ಟನ್ನು ತನ್ನ ಅಕೌಂಟ್ಗೆ ಟ್ರಾನ್ಸ್ಫರ್ ಮಾಡಿಸಿಕೊಂಡಿದ್ದ. ಮಂಗಳವಾರ (ಜನವರಿ 10) ಮತ್ತೆ ಇದೇ ಮರುಕಳಿಸಿತು. ಹಿಂದೆ ಮಗ ಹೀಗೆ ಮಾಡಿದಾಗ ಸುಮ್ಮನಿದ್ದ ಪಾಲಕರು ಈಗ ಅವರೇ ಮುಂದಾಗಿ ಬಂದು ದೂರು ಕೊಟ್ಟಿದ್ದಾರೆ. ನಾವು ಪ್ರಕರಣ ದಾಖಲು ಮಾಡಿಕೊಂಡಿದ್ದೇವೆ ಎಂದೂ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಇದನ್ನೂ ಓದಿ: Accident In Delhi | ದೆಹಲಿ ಯುವತಿ ಅಂಜಲಿಗೆ ಡಿಕ್ಕಿ ಹೊಡೆದ ಬಳಿಕ ಕಾರಿನಲ್ಲಿದ್ದವರು ಮಾಡಿದ್ದೇನು?-ಮತ್ತೊಂದು ವಿಡಿಯೊ ಲಭ್ಯ!