ಲಿವ್ ಇನ್ ಸಂಗಾತಿ ಮೇಲೆ ಅತ್ಯಾಚಾರ ಮಾಡಿದ್ದಲ್ಲದೆ ಮತಾಂತರಕ್ಕೆ ಒತ್ತಾಯಿಸಿದ ಆರೋಪದಡಿ 23ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಹುಡುಗಿ ಆತನೊಂದಿಗೆ ಲಿವ್ ಇನ್ ರಿಲೇಶನ್ಶಿಪ್ನಲ್ಲಿ ಇದ್ದಳು. ಆದರೆ ಇತ್ತೀಚೆಗೆ ದಿ ಕೇರಳ ಸ್ಟೋರಿ (The Kerala Story) ಸಿನಿಮಾ ನೋಡಿದ್ದ ಆಕೆ ಪೊಲೀಸರಿಗೆ ದೂರು ನೀಡಿದ್ದಳು. ಮಧ್ಯಪ್ರದೇಶದ ಇಂದೋರ್ನಲ್ಲಿ ಘಟನೆ ನಡೆದಿದೆ. ಸದ್ಯ ಖಜ್ರಾನಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ವಿರುದ್ಧ ಮಧ್ಯಪ್ರದೇಶ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ 2021ರ ಮತ್ತು ಐಪಿಸಿ ಸೆಕ್ಷನ್ ಅಡಿಯಲ್ಲಿ ಕೇಸ್ ದಾಖಲಾಗಿದೆ ಎಂದು ಪೊಲೀಸ್ ಅಧಿಕಾರಿ ದಿನೇಶ್ ವರ್ಮಾ ತಿಳಿಸಿದ್ದಾರೆ.
‘ಆ ಹುಡುಗ ನನ್ನನ್ನು ಪ್ರೀತಿಸುವುದಾಗಿ ಹೇಳಿದ್ದ. ಮದುವೆಯಾಗುವುದಾಗಿಯೂ ತಿಳಿಸಿದ್ದ. ನಾನೂ ಅವನ ಪ್ರೀತಿ ಬಲೆಗೆ ಬಿದ್ದಿದ್ದೆ. ಒಟ್ಟಿಗೆ ವಾಸಿಸಲು ಶುರು ಮಾಡಿದೆವು. ಆದರೆ ದಿನದಿನ ನನ್ನನ್ನು ಮಾನಸಿಕವಾಗಿ ಹಿಂಸಿಸುತ್ತಿದ್ದ. ಮತಾಂತರ ಆಗಲು ಪೀಡಿಸುತ್ತಿದ್ದ. ಇತ್ತೀಚೆಗೆ ನಾನು ಮತ್ತು ಅವನು ಒಟ್ಟಾಗಿಯೇ ಹೋಗಿ ದಿ ಕೇರಳ ಸ್ಟೋರಿ ಸಿನಿಮಾ ನೋಡಿದೆವು. ಸಿನಿಮಾ ನೋಡಿದ ಬಳಿಕ ಇಬ್ಬರ ಮಧ್ಯೆ ಜಗಳವಾಯಿತು. ಆತ ನನಗೆ ಥಳಿಸಿದ. ಬಾಯಿಗೆ ಬಂದಂತೆ ಬೈದು ಹೋದ’ ಎಂದು ಆಕೆ ದೂರಿನಲ್ಲಿ ಹೇಳಿದ್ದಾಳೆ ಎಂದು ಪೊಲೀಸ್ ಅಧಿಕಾರಿ ದಿನೇಶ್ ವರ್ಮಾ ಮಾಹಿತಿ ನೀಡಿದ್ದಾರೆ.
ಆರೋಪಿ 12ನೇ ತರಗತಿವರೆಗೆ ಓದಿ ವಿದ್ಯಾಭ್ಯಾಸ ಬಿಟ್ಟವನು. ಯಾವುದೇ ಉದ್ಯೋಗ ಮಾಡುತ್ತಿರಲಿಲ್ಲ. ಆದರೆ ಯುವತಿ ಚೆನ್ನಾಗಿ ಓದಿಕೊಂಡವಳು ಮತ್ತು ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ನಾಲ್ಕುವರ್ಷಗಳ ಹಿಂದೆ ಒಂದು ಕೋಚಿಂಗ್ ಸೆಂಟರ್ನಲ್ಲಿ ಇವರಿಬ್ಬರ ಭೇಟಿಯಾಗಿತ್ತು. ಮೊದಲು ಮಾತು, ನಂತರ ಸ್ನೇಹ, ಬಳಿಕ ಪ್ರೀತಿ ಎಂದು ಹೆಸರು ಪಡೆದುಕೊಂಡ ಸಂಬಂಧ ಈಗ ದಿ ಕೇರಳ ಸ್ಟೋರಿ ಸಿನಿಮಾದೊಂದಿಗೆ ಮುಕ್ತಾಯವಾಗಿದೆ. ಸದ್ಯ ಈ ಕೇಸ್ನ್ನು ಎಲ್ಲ ಆಯಾಮಗಳಲ್ಲಿ ತನಿಖೆ ಮಾಡುತ್ತಿರುವುದಾಘಿ ಪೊಲೀಸ್ ಅಧಿಕಾರಿ ದಿನೇಶ್ ವರ್ಮಾ ತಿಳಿಳಿಸಿದ್ದಾರೆ.
ಇದನ್ನೂ ಓದಿ: ’ದಿ ಕೇರಳ ಸ್ಟೋರಿ ಸುಳ್ಳಲ್ಲ’; 26 ಸಂತ್ರಸ್ತ ಯುವತಿಯರನ್ನು ಮಾಧ್ಯಮದ ಎದುರು ಹಾಜರು ಪಡಿಸಿದ ಚಿತ್ರತಂಡ
ದಿ ಕೇರಳ ಸ್ಟೋರಿ ಸಿನಿಮಾ ಮೇ 5ರಂದು ದೇಶಾದ್ಯಂತ ಬಿಡುಗಡೆಯಾಗಿದೆ. ಇದು ಕೇರಳದ ಹಿಂದು/ಕ್ರಿಶ್ಚಿಯನ್ ಯುವತಿಯರನ್ನು ಇಸ್ಲಾಮ್ಗೆ ಮತಾಂತರ ಮಾಡುವ, ಐಸಿಸ್ ಭಯೋತ್ಪಾದನಾ ಸಂಘಟನೆಗಳಿಗೆ ಸೇರಿಸುವ, ಲವ್ ಜಿಹಾದ್ಗೆ ಗುರಿಪಡಿಸುವ ಕಥೆಯನ್ನು ಒಳಗೊಂಡಿದೆ. ಟ್ರೇಲರ್ ಬಿಡುಗಡೆ ಆದಾಗಲೇ ವಿವಾದ ಸೃಷ್ಟಿಸಿದ್ದ ಈ ಸಿನಿಮಾ ಪ್ರದರ್ಶನಕ್ಕೆ ತಡೆ ನೀಡಬೇಕು ಎಂದು ಅನೇಕರು ಕೋರ್ಟ್ಗಳ ಮೆಟ್ಟಿಲನ್ನೂ ಏರಿದ್ದರು. ಆದರೆ ಅದ್ಯಾವುದೂ ಪ್ರಯೋಜನವಾಗದೆ, ಮೇ 5ರಂದು ಬಿಡುಗಡೆಯಾಗಿ, ಇಂದಿಗೂ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ದಿ ಕೇರಳ ಸ್ಟೋರಿ ಬಿಡುಗಡೆಯಾದ ಬೆನ್ನಲ್ಲೇ ಹಲವು ಸಂತ್ರಸ್ತ ಹೆಣ್ಣುಮಕ್ಕಳು ಧೈರ್ಯದಿಂದ ಮುಂದೆ ಬಂದು ತಾವು ಇಸ್ಲಾಂಗೆ ಸೇರಿದ್ದು, ಅನುಭವಿಸಿದ ಕಷ್ಟಗಳನ್ನು ಹೇಳಿಕೊಳ್ಳುತ್ತಿದ್ದಾರೆ.