ಕೇರಳದ ಕೊಯಿಕ್ಕೋಡ್ನ ಮಾವೂರ್ ರಸ್ತೆಯಲ್ಲಿರುವ ನ್ಯಾಶನಲ್ ಆಸ್ಪತ್ರೆ ವೈದ್ಯರು ಮಹಾನ್ ಅವಾಂತರವೊಂದರನ್ನು (Medical Negligence) ಮಾಡಿದ್ದಾಗಿ ವರದಿಯಾಗಿದೆ. ಎಡಗಾಲು ಹಿಮ್ಮಡಿ ನೋವೆಂದು ದಾಖಲಾಗಿದ್ದ 60ವಯಸ್ಸಿನ ಮಹಿಳೆಗೆ ಬಲಗಾಲಿಗೆ ಸರ್ಜರಿ ಮಾಡಿದ್ದಾರೆ. ಈ ಬಗ್ಗೆ ರೋಗಿ ಸಜಿನಾ ಸುಕುಮಾರನ್ ಅವರೇ ಆರೋಪ ಮಾಡಿದ್ದಾರೆ. ಡಾ. ಬೆಹಿರ್ಷನ್ ಎಂಬ ಸರ್ಜನ್ ನೇತೃತ್ವದಲ್ಲಿ ನನಗೆ ಶಸ್ತ್ರಚಿಕಿತ್ಸೆ ಮಾಡಲಾಯಿತು. ನನಗೆ ನೋವಿದ್ದಿದ್ದು ಎಡಗಾಲಿಗೆ ಆದರೆ, ಅವರು ಸರ್ಜರಿ ಮಾಡಿದ್ದು ಬಲಗಾಲಿಗೆ ಎಂದು ಸಜಿನಾ ಹೇಳಿಕೊಂಡಿದ್ದಾರೆ.
‘ವರ್ಷದ ಹಿಂದೆ ನನ್ನ ಎಡಗಡೆಯ ಕಾಲು ಬಾಗಿಲ ಸಂದಿಯಲ್ಲಿ ಸಿಲುಕಿ ಗಾಯಗೊಂಡಿತ್ತು. ಹಿಮ್ಮಡಿ ಅಪಾರ ನೋವಾಗಿತ್ತು. ಒಂದು ವರ್ಷ ಕಳೆದರೂ ನನಗೆ ನೋವು ಹೋಗಲಿಲ್ಲ. ಹೀಗಾಗಿ ಅದನ್ನು ತೋರಿಸಲು ನಾನು ಮೊದಲು ಸರ್ಜನ್ ಡಾ. ಬೆಹಿರ್ಷನ್ ಅವರನ್ನು ಅವರದ್ದೇ ಖಾಸಗಿ ಕ್ಲಿನಿಕ್ನಲ್ಲಿ ಭೇಟಿ ಮಾಡಿದೆ. ಅವರು ಸರ್ಜರಿ ಮಾಡಬೇಕು ಎಂದು ಹೇಳಿದರು. ಹಾಗೇ, ವೈದ್ಯರ ಸೂಚನೆಯಂತೆ ಅವರು ಪ್ರ್ಯಾಕ್ಟೀಸ್ ಮಾಡುತ್ತಿರುವ ಆಸ್ಪತ್ರೆಗೆ ಫೆ.20ರಂದು ಅಡ್ಮಿಟ್ ಆದೆ. ಮರುದಿನ ನನಗೆ ಸರ್ಜರಿ ಮಾಡಲಾಯಿತು. ಆದರೆ ಎಚ್ಚರವಾದಾಗ ಬಲಗಾಲಿನಲ್ಲಿ ನೋವಾಗುತ್ತಿತ್ತು. ಏನೆಂದು ನೋಡಿದರೆ ನನ್ನ ಎಡಗಾಲನ್ನು ಬಿಟ್ಟು, ಬಲಗಾಲಿಗೆ ಸರ್ಜರಿ ಮಾಡಿದ್ದರು. ನನಗೆ ಶಾಕ್ ಆಯಿತು. ಕೂಡಲೇ ನರ್ಸ್ ಕರೆದೆ. ಅವಳ ಬಳಿ ವಿಷಯ ಹೇಳಿ, ಸರ್ಜನ್ನನ್ನು ಕರೆಯುವಂತೆ ಹೇಳಿದೆ. ಅವರು ಬಂದ ಮೇಲೆ ವಿಷಯ ತಿಳಿಸಿದೆ’ ಎಂದು ಸಜಿನಾ ಆರೋಪಿಸಿದ್ದಾರೆ.
ಇದನ್ನೂ ಓದಿ: Kerala Farmer Missing: ಕೃಷಿ ಅಧ್ಯಯನಕ್ಕಾಗಿ ಇಸ್ರೇಲ್‌ಗೆ ತೆರಳಿದ ನಿಯೋಗದಲ್ಲಿದ್ದ ಕೇರಳ ರೈತ ನಾಪತ್ತೆ, ಬೇಕಂತಲೇ ಪರಾರಿ?
ಇನ್ನು ಬಲಗಾಲಿಗೆ ಯಾಕೆ ಸರ್ಜರಿ ಮಾಡಿದಿರಿ ಎಂದು ಕೇಳಿದ್ದಕ್ಕೆ ವೈದ್ಯರು ‘ಬಲಗಾಲಿನಲ್ಲೂ ನರದಲ್ಲಿ ಬ್ಲಾಕ್ ಇತ್ತು ಎಂದು ಹೇಳಿದ್ದಾರೆ. ಆದರೆ ಅವರೇನೂ ಎಕ್ಸ್-ರೇ ಮಾಡಿರಲಿಲ್ಲ. ತಮ್ಮ ತಪ್ಪು ಮುಚ್ಚಿಕೊಳ್ಳಲಷ್ಟೇ ಅವರು ಹೀಗೊಂದು ನೆಪ ಹೇಳುತ್ತಿದ್ದಾರೆ’ ಎಂದು ಸಜಿನಾ ಅವರ ಪುತ್ರಿ ಹೇಳಿದ್ದಾರೆ. ಸಜಿನಾ ಕುಟುಂಬದವರು ಈಗಾಗಲೇ ಹಿರಿಯ ವೈದ್ಯಾಧಿಕಾರಿ ಮತ್ತು ಆರೋಗ್ಯ ಸಚಿವರಿಗೆ ದೂರು ನೀಡಿದ್ದಾರೆ. ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಆಸ್ಪತ್ರೆ ಎಂಡಿ ಡಾ. ಕೆ.ಎಂ.ಆಶಿಕ್, ‘ಸಜಿನಾ ಅವರ ಎರಡೂ ಕಾಲುಗಳಲ್ಲೂ ಸಮಸ್ಯೆ ಇದೆ ಎಂದು ನಾವು ಸರ್ಜರಿಗೂ ಮೊದಲೇ ಅವರಿಗೆ ತಿಳಿಸಿದ್ದೇವೆ. ನಾವು ಇದನ್ನು ಹೇಳುವಾಗ ಆಕೆಯ ಪತಿ ಕೂಡ ಇದ್ದರು’ ಎಂದಿದ್ದಾರೆ.