ಬೆಂಗಳೂರು: ದೇಶದಲ್ಲಿ ಆಧಾರ್ ಕಾರ್ಡ್ (Aadhaar Card) ಅನ್ನು ಪ್ರಮುಖ ದಾಖಲೆಯಾಗಿ ಪರಿಗಣಿಸಲಾಗುತ್ತದೆ. ಸರ್ಕಾರಿ ಸೌಲಭ್ಯಗಳನ್ನು ಪಡೆಯುವುದರಿಂದ ಹಿಡಿದು ಬ್ಯಾಂಕ್ ವ್ಯವಹಾರಗಳವರೆಗೆ ಆಧಾರ್ ಕಾರ್ಡ್ ಬೇಕೇ ಬೇಕು. ಇಂತಹ ಆಧಾರ್ ಕಾರ್ಡ್ನಲ್ಲಿ ನಮ್ಮ ಜನ್ಮ ದಿನಾಂಕ ತಪ್ಪಾಗಿ ನಮೂದಾಗಿದ್ದರೆ ಅದನ್ನು ಬದಲಾಯಿಸಲು ಸಾಧ್ಯವೇ? ಹೇಗೆ? ಮುಂತಾದ ನಿಮ್ಮ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ಆಧಾರ್ ಕಾರ್ಡ್ನಲ್ಲಿ ಜನ್ಮ ದಿನಾಂಕ ತಪ್ಪಾಗಿದ್ದರೆ ಒಮ್ಮೆ ಅದನ್ನು ಸರಿಪಡಿಸಬಹುದಾದ ಆಯ್ಕೆ ಇದೆ. ನಿಮ್ಮ ಆಧಾರ್ ಕಾರ್ಡ್ ವಿವರಗಳನ್ನು ಆನ್ಲೈನ್ ಮೂಲಕ ಅಥವಾ ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ನವೀಕರಿಸಬಹುದು. ನಿಮ್ಮ ವಿವರಗಳನ್ನು ಆನ್ಲೈನ್ನಲ್ಲಿ ನವೀಕರಿಸಲು, ನಿಮ್ಮ ಆಧಾರ್ ಕಾರ್ಡ್ಗೆ ನೋಂದಾಯಿತ ಮೊಬೈಲ್ ಸಂಖ್ಯೆ ಲಿಂಕ್ ಆಗಿರುವುದು ಅಗತ್ಯ. ನಂತರ ನೀವು ಯುಐಡಿಎಐ (UIDAI) ವೆಬ್ಸೈಟ್ಗೆ ಭೇಟಿ ನೀಡಬೇಕು.
ನಿಮ್ಮ ಆಧಾರ್ ಕಾರ್ಡ್ ಅನ್ನು ನವೀಕರಿಸುವುದರಿಂದ ನಿಮ್ಮ ಕಾರ್ಡ್ನಲ್ಲಿರುವ ಮಾಹಿತಿಯು ನಿಖರ ಎನ್ನುವುದನ್ನು ಖಚಿತವಾಗುತ್ತದೆ. ಅದೇ ರೀತಿ ಆಧಾರ್ ಕಾರ್ಡ್ನಲ್ಲಿರುವ ಹುಟ್ಟಿದ ದಿನಾಂಕ ತಪ್ಪಾಗಿದ್ದರೆ ಅದನ್ನು ನವೀಕರಿಸಬಹುದು. ಇದಕ್ಕೆ ಹುಟ್ಟಿದ ದಿನಾಂಕದ ಅಧಿಕೃತ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.
ಆಧಾರ್ ಕಾರ್ಡ್ನಲ್ಲಿ ನೀವು ಹುಟ್ಟಿದ ದಿನಾಂಕವನ್ನು ಒಮ್ಮೆ ಮಾತ್ರ ನವೀಕರಿಸಬಹುದು. ನೀವು ಹುಟ್ಟಿದ ದಿನಾಂಕವನ್ನು ಮತ್ತೆ ನವೀಕರಿಸುವ ಅನಿವಾರ್ಯತೆ ಹೊಂದಿದ್ದರೆ ಈ ಪ್ರಕ್ರಿಯೆಯನ್ನು ಅನುಸರಿಸಬೇಕು:
- ಸೂಕ್ತ ದಾಖಲೆಗಳೊಂದಿಗೆ ನಿಮ್ಮ ಸಮೀಪದ ಆಧಾರ್ ಕೇಂದ್ರಕ್ಕೆ ಭೇಟಿ ನೀಡಿ.
- ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
- ಈ ವಿನಂತಿ ತಿರಸ್ಕೃತವಾದರೆ, 1947ಕ್ಕೆ ಕರೆ ಮಾಡಿ ಅಥವಾ help@uidai.gov.inಗೆ ಮನವಿ ಸಲ್ಲಿಸಿ. ನಿಮ್ಮ ಇತ್ತೀಚಿನ ನವೀಕರಣ ವಿನಂತಿ ಸಂಖ್ಯೆ ಮತ್ತು ಸಂಪರ್ಕ ವಿವರಗಳನ್ನು ಒದಗಿಸಿ.
ನೀವು ಮೊದಲ ಬಾರಿಗೆ ಹುಟ್ಟಿದ ದಿನಾಂಕವನ್ನು ನವೀಕರಿಸುತ್ತಿದ್ದರೆ ಆಗ ಮನವಿ ತಿರಸ್ಕೃತಗೊಂಡರೆ 1947 ನಂಬರ್ಗೆ ಕರೆ ಮಾಡುವ ಮೂಲಕ ಕಾರಣವನ್ನು ಪರಿಶೀಲಿಸಬಹುದು. ಗಮನಿಸಿ, ಮೊದಲೇ ಹೇಳಿದಂತೆ ನಿಮ್ಮ ಆಧಾರ್ ಕಾರ್ಡ್ನಲ್ಲಿ ಹುಟ್ಟಿದ ದಿನಾಂಕವನ್ನು ಒಮ್ಮೆ ಮಾತ್ರ ಸರಿಪಡಿಸಬಹುದು. ನೀವು ಅದನ್ನು ಮತ್ತೆ ಸರಿಪಡಿಸಬೇಕಾದರೆ ವಿನಾಯಿತಿ ಪ್ರಕ್ರಿಯೆಯನ್ನು ಅನುಸರಿಸಬೇಕಾಗುತ್ತದೆ. ಈ ಪ್ರಕ್ರಿಯೆಯು ಸೂಕ್ತ ದಾಖಲೆ ಪುರಾವೆಗಳನ್ನು ಯುಐಡಿಎಐಗೆ ಸಲ್ಲಿಸುವುದನ್ನು ಒಳಗೊಂಡಿರುತ್ತದೆ. ಯುಐಡಿಎಐ ನಿಮ್ಮ ವಿನಂತಿಯನ್ನು ಪರಿಶೀಲಿಸಿ ಮತ್ತು ಅದಕ್ಕೆ ಅನುಮತಿ ನೀಡಬೇಕೇ ಅಥವಾ ಬೇಡವೇ ಎಂದು ನಿರ್ಧರಿಸುತ್ತದೆ. ಸೂಕ್ತ ಕಾರಣ ಇದ್ದರೆ ಜನ್ಮ ದಿನಾಂಕ ಸರಿಪಡಿಸಲು ಅನುಮತಿ ಸಿಗುತ್ತದೆ. ಹೀಗಾಗಿ ಸಾಕಷ್ಟು ಬಾರಿ ಪರಿಶೀಲನೆ ನಡೆಸಿಯೇ ಮಾಹಿತಿ ಒದಗಿಸಲು ಗಮನ ಹರಿಸಿ.
ಇದನ್ನೂ ಓದಿ: ಜೀವನ ಪ್ರಮಾಣ ಪತ್ರ ಇನ್ನೂ ಸಲ್ಲಿಸಿಲ್ಲವೇ? ನಾಳೆಯೇ ಕೊನೇ ದಿನ! ಇಲ್ದಿದ್ರೆ ಸಿಗಲ್ಲ ಪೆನ್ಶನ್
ಆಧಾರ್ ಕಾರ್ಡ್ಗೆ ಲಿಂಕ್ ಆಗಿರುವ ಬ್ಯಾಂಕ್ ಅಕೌಂಟ್ ಪರಿಶೀಲಿಸುವ ವಿಧಾನ
ಪ್ರಸ್ತುತ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯ. ಲಿಂಕ್ ಆಗಿದ್ದರೆ ಮಾತ್ರ ಸರ್ಕಾರದ ವಿವಿಧ ಯೋಜನೆಗಳು ಮತ್ತು ವಿದ್ಯಾರ್ಥಿ ವೇತನಗಳು ಪಡೆಯಲು ಸಾಧ್ಯ. ಹೀಗಾಗಿ ನಿಮ್ಮ ಆಧಾರ್ ಕಾರ್ಡ್ ಬ್ಯಾಂಕ್ ಅಕೌಂಟ್ ಜತೆ ಲಿಂಕ್ ಆಗಿದೆಯಾ ಎನ್ನುವುದನ್ನು ಆನ್ಲೈನ್ ಮೂಲಕ ಪರಿಶೀಲಿಸಬಹುದು. ಅದು ಹೇಗೆ ಎನ್ನುವುದರ ವಿವರ ಇಲ್ಲಿದೆ.
- ‘myAadhaar’ ವೆಬ್ಸೈಟ್ಗೆ ಭೇಟಿ ನೀಡಿ
- Login ಕ್ಲಿಕ್ ಮಾಡಿ.
- ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು ಕ್ಯಾಪ್ಚಾ ಭರ್ತಿ ಮಾಡಿ.
- ‘Send OTP’ ಆಯ್ಕೆ ಕ್ಲಿಕ್ ಮಾಡಿ.
- ಒಟಿಪಿ ನಮೂದಿಸಿ Login ಕ್ಲಿಕ್ ಮಾಡಿ.
- ಈಗ ಹೊಸ ಪೇಜ್ ತೆರೆಯುತ್ತದೆ. ಅದರಲ್ಲಿನ Bank Seeding Status ಬಟನ್ ಆಯ್ಕೆ ಮಾಡಿ.
- ಈಗ ನಿಮ್ಮ ಯಾವ ಬ್ಯಾಂಕ್ ಖಾತೆಯು ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಆಗಿದೆ ಎಂದು ತಿಳಿಯುತ್ತದೆ.