Site icon Vistara News

ಪ್ರಧಾನಿ ಮೋದಿ ಮುಂಬೈಗೆ ಬಂದಾಗ ಆದಿತ್ಯ ಠಾಕ್ರೆ, ಅಜಿತ್‌ ಪವಾರ್‌ಗೆ ಅವಮಾನ; ಶಿವಸೇನೆ ಆರೋಪ

Aaditya Thackeray, Ajit Pawar

ಮುಂಬೈ: ನಗರಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಆಗಮಿಸಿದ ವೇಳೆ ಮಹಾರಾಷ್ಟ್ರ ಸಚಿವರಾದ ಆದಿತ್ಯ ಠಾಕ್ರೆ ಮತ್ತು ಅಜಿತ್‌ ಪವಾರ್‌ಗೆ ಅವಮಾನವಾಗಿದೆ ಎಂದು ಶಿವಸೇನೆ ಮತ್ತು ಎನ್‌ಸಿಪಿ ಪಕ್ಷಗಳು ಆರೋಪಿಸಿವೆ. ಪ್ರಧಾನಿ ನರೇಂದ್ರ ಮೋದಿ ಜೂ.14ರಂದು ಮುಂಬೈಗೆ ತೆರಳಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ರಾಜಭವನದ ಜಲಭೂಷಣ್‌ ಕಟ್ಟಡ ಉದ್ಘಾಟಿಸಿದ್ದರೆ, ಪುಣೆ ಸಮೀಪದ ದೇಹುವಿನಲ್ಲಿರುವ ಸಂತ ತುಕಾರಾಮ ಮಂದಿರದಲ್ಲಿ ಶಿಲಾ ದೇಗುಲವನ್ನು ಉದ್ಘಾಟನೆ ಮಾಡಿದ್ದಾರೆ. ಈ ಎರಡೂ ಸಮಾರಂಭಗಳು ಅದ್ದೂರಿಯಾಗಿ ನಡೆದಿವೆ. ಆದರೆ ಶಿವಸೇನೆ ಕೇಂದ್ರ ಸರ್ಕಾರದ ವಿರುದ್ಧ ಅಪಸ್ವರ ಎತ್ತಿದೆ.

ಪ್ರಧಾನಿ ನರೇಂದ್ರ ಮೋದಿ ದೆಹಲಿಯಿಂದ ಬಂದು ಮುಂಬೈನ ಪಶ್ಚಿಮ ನೇವಲ್‌ ಕಮಾಂಡ್‌ನಲ್ಲಿರುವ ಐಎನ್‌ಎಸ್‌ ಶಿಕಾರಾ ಹೆಲಿಬೇಸ್‌ಗೆ ಬಂದು ಇಳಿದರು. ಅವರನ್ನು ಸ್ವಾಗತಿಸಲು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆಯವರ ಜತೆ ಅವರ ಪುತ್ರ, ಮಹಾರಾಷ್ಟ್ರ ಪರಿಸರ ಇಲಾಖೆ ಸಚಿವ ಆದಿತ್ಯ ಠಾಕ್ರೆ ಕೂಡ ಹೋಗಿದ್ದರು. ಆದರೆ ಪ್ರಧಾನಿಯನ್ನು ಸ್ವಾಗತಿಸಲು ಬರುವ ಗಣ್ಯರ ಹೆಸರಿನ ಪಟ್ಟಿಯಲ್ಲಿ ಆದಿತ್ಯ ಠಾಕ್ರೆ ಹೆಸರು ಇರಲಿಲ್ಲ. ಈ ಕಾರಣಕ್ಕೆ ಪ್ರಧಾನಿ ಭದ್ರತಾ ಸಿಬ್ಬಂದಿ (ವಿಶೇಷ ರಕ್ಷಣಾ ಗುಂಪು-SPG) ಆದಿತ್ಯ ಠಾಕ್ರೆಯವರನ್ನು ಆದಿತ್ಯ ಠಾಕ್ರೆ ಕಾರಿನಿಂದ ಇಳಿಯುವಂತೆ ಹೇಳಿದ್ದಾರೆ. ಹೆಲಿಬೇಸ್‌ನಿಂದ ರಾಜಭವನಕ್ಕೆ ಹೊರಡುವ ವೇಳೆ ಆದಿತ್ಯ ಠಾಕ್ರೆ ಕೂಡ ಉದ್ಧವ್‌ ಠಾಕ್ರೆ ಕಾರಿನಲ್ಲಿಯೇ ಹೊರಟಿದ್ದರು. ಆದರೆ ಎಸ್‌ಪಿಜಿ ಅವರನ್ನು ಕೆಳಗೆ ಇಳಿಯುವಂತೆ ಹೇಳಿದ್ದು ಅವಮಾನ ಎಂದು ಶಿವಸೇನೆ ಹೇಳಿದೆ.

ಇನ್ನೊಂದೆಡೆ ದೇಹುವಿನಲ್ಲಿ ನಡೆದ ಸಂತ ತುಕಾರಾಮ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎನ್‌ಸಿಪಿ ಮುಖಂಡ, ಸಚಿವ ಅಜಿತ್‌ ಪವಾರ್‌ಗೆ ಮಾತನಾಡಲು ಅವಕಾಶ ಸಿಗಲಿಲ್ಲ ಎಂದು ಎನ್‌ಸಿಪಿ ಮತ್ತು ಶಿವಸೇನೆ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ʼಅಜಿತ್‌ ಪವಾರ್‌ ಮಹಾರಾಷ್ಟ್ರದ ಉಪಮುಖ್ಯಮಂತ್ರಿ. ಪುಣೆಯ ಉಸ್ತುವಾರಿ ಮಂತ್ರಿ. ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುವ ಕಾರ್ಯಕ್ರಮದಲ್ಲಿ ಯಾರೆಲ್ಲ ಭಾಷಣ ಮಾಡುತ್ತಾರೋ ಅವರ ಹೆಸರನ್ನು ಮೊದಲೇ ಪ್ರಧಾನಿ ಕಾರ್ಯಾಲಯಕ್ಕೆ ಕಳಿಸಲಾಗುತ್ತದೆ. ಹಾಗೇ, ಈ ಪಟ್ಟಿಯಲ್ಲಿ ಅಜಿತ್‌ ಪವಾರ್‌ ಹೆಸರೂ ಕೂಡ ಇತ್ತು. ಹಾಗಿದ್ದಾಗ್ಯೂ ಪ್ರಧಾನಿ ಕಚೇರಿ ಅವರಿಗೆ ಮಾತನಾಡಲು ಅವಕಾಶ ಕೊಡಲಿಲ್ಲ. ಇದು ಅವರಿಗಷ್ಟೇ ಅಲ್ಲ, ಇಡೀ ಮಹಾರಾಷ್ಟ್ರದ ಜನರಿಗೆ ಮಾಡಿದ ಅವಮಾನʼ ಎಂದು ಎನ್‌ಸಿಪಿ ಸಂಸದೆ ಸುಪ್ರಿಯಾ ಸುಲೆ ಆರೋಪಿಸಿದ್ದಾರೆ.

ಇದನ್ನೂ ಓದಿ: ರಾಜ್ಯಸಭೆ ಚುನಾವಣೆ: ಬಿಜೆಪಿ, ಕಾಂಗ್ರೆಸ್‌ಗೆ ಎರಡು ರಾಜ್ಯಗಳಲ್ಲಿ ತಲಾ ನಾಲ್ಕು ಸ್ಥಾನ, ಹರಿಯಾಣ, ಮಹಾರಾಷ್ಟ್ರ ಫಲಿತಾಂಶ ವಿಳಂಬ

ಎರಡೂ ಘಟನೆಗಳ ಬಗ್ಗೆ ಶಿವಸೇನೆ ಸಂಸದ ಸಂಜಯ್‌ ರಾವತ್‌ ಅಸಮಾಧಾನ ವ್ಯಕ್ತಪಡಿಸಿದ್ದು, ʼಪುಣೆಯಲ್ಲಿ ಅಜಿತ್‌ ಪವಾರ್‌ಗೆ ಮಾತನಾಡಲು ಅವಕಾಶ ಸಿಗಲಿಲ್ಲ. ಹೆಲಿಬೇಸ್‌ನಿಂದ ರಾಜಭವನದವರೆಗೆ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಪ್ರಯಾಣಿಸಲು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆಗೆ ಸಾಧ್ಯವಾಗಲಿಲ್ಲ. ಭದ್ರತಾ ಸಿಬ್ಬಂದಿ ಆದಿತ್ಯ ಠಾಕ್ರೆಯನ್ನು ಕಾರಿನಿಂದ ಕೆಳಗೆ ಇಳಿಯುವಂತೆ ಹೇಳಿರುವುದು ಅವಮಾನ. ಈ ಬಗ್ಗೆ ಮುಂದೇನು ಮಾಡಬೇಕೋ ಅದನ್ನು ಮಾಡಲು ಸಿಎಂ ಉದ್ಧವ್‌ ಠಾಕ್ರೆ ಸಿದ್ಧತೆ ನಡೆಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚಿಸಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ರಾಜ್ಯಸಭೆ ಚುನಾವಣೆ: ಮಹಾರಾಷ್ಟ್ರದಲ್ಲಿ ಬಿಜೆಪಿಯ ಎಲ್ಲ ಮೂರು ಅಭ್ಯರ್ಥಿಗಳ ಜಯಭೇರಿ, ಎಂವಿಎಗೆ 3 ಸೀಟು

Exit mobile version