Site icon Vistara News

Adipurush Movie: ’ಆದಿಪುರುಷ’ನ ವಿವಾದದಲ್ಲಿ ಸಿಲುಕಿದ ಬಿಜೆಪಿ; ಹನುಮ ದೇವರಲ್ಲ ಎಂದಿದ್ದಕ್ಕೆ ಆಪ್​, ಕಾಂಗ್ರೆಸ್ ಕಿಡಿ!

Adipurush Poster And BJP Flag

#image_title

ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ, ರಾಮಾಯಣದ ಕಥೆಯನ್ನಾಧರಿಸಿರುವ ಆದಿಪುರುಷ್​ ಸಿನಿಮಾ (Adipurush Movie)ಒಂದಲ್ಲ ಒಂದು ಕಾರಣಕ್ಕೆ ವಿವಾದವಾಗುತ್ತಲೇ ಇದೆ. ಸಿನಿಮಾ ನೋಡಿದ ಅನೇಕಾನೇಕರು ಆದಿಪುರುಷ್​​ನ್ನು ಟೀಕಿಸುತ್ತಿದ್ದಾರೆ. ಇಡಿ ರಾಮಾಯಣ ಮಹಾಕಾವ್ಯಕ್ಕೆ ಸಿನಿಮಾದಲ್ಲಿ ಅಪಮಾನ ಮಾಡಲಾಗಿದೆ. ಇಂಥ ಸಿನಿಮಾ ನೋಡಲೇಬಾರದು ಎಂದು ಹೇಳುತ್ತಿದ್ದಾರೆ. ಈ ಮಧ್ಯೆ ಆದಿಪುರುಷ್​ಗೆ ಚಿತ್ರಕಥೆ ಬರೆದ ಮನೋಜ್ ಮುಂಟಶೀರ್ (Manoj Muntashir)ಅವರು ನೀಡಿದ ಹೇಳಿಕೆಯೊಂದು ವಿವಾದಕ್ಕೆ ಕಾರಣವಾಗಿದೆ. ಇದೇ ವಿಷಯ ಇಟ್ಟುಕೊಂಡು ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್​ನವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.

ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಮಾತನಾಡಿದ್ದ ಮನೋಜ್ ಮುಂಟಶೀರ್​ ‘ಆಂಜನೇಯ ದೇವರಲ್ಲ. ಅವನು ಮಹಾನ್ ಭಕ್ತ’ ಎಂದು ಹೇಳಿದ್ದರು. ‘ಭಗವಂತ ಹನುಮಾನ್​​ನನ್ನು ನಾವೆಲ್ಲ ಶಕ್ತಿ, ಬುದ್ಧಿವಂತಿಕೆ ಮತ್ತು ಜ್ಞಾನದ ದೇವರೆಂದು ಪೂಜಿಸುತ್ತೇವೆ. ಆದರೆ ವಾಸ್ತವದಲ್ಲಿ ಬಜರಂಗ ಬಲಿ ದೇವರಲ್ಲ. ಹನುಮಂತ ಎಂದಿಗೂ ತತ್ವಶಾಸ್ತ್ರಗಳನ್ನು ಮಾತನಾಡಿಲ್ಲ. ಅವನೊಬ್ಬ ಮಹಾನ್ ಭಕ್ತ. ಅವನ ಭಕ್ತಿಯ ಪರಾಕಾಷ್ಠೆಯ ಕಾರಣಕ್ಕೆ ನಾವು ಅವನನ್ನು ದೇವರ ಸ್ಥಾನದಲ್ಲಿ ಇಟ್ಟು ಪೂಜಿಸುತ್ತೇವೆ’ ಎಂದು ತಮ್ಮ ಅಭಿಪ್ರಾಯ ಹೇಳಿದ್ದರು. ಆಂಜನೇಯ ದೇವರಲ್ಲ ಎಂದು ಮನೋಜ್ ಮುಂಟಶೀರ್ ಹೇಳಿದ್ದು ಈಗ ದೊಡ್ಡಮಟ್ಟದ ವಿವಾದಕ್ಕೆ ಕಾರಣವಾಗಿದೆ.

ಇದನ್ನೂ ಓದಿ: Adipurush Movie Collection: ವಾರಾಂತ್ಯದಲ್ಲಿ ವಿಶ್ವಾದ್ಯಂತ 300 ಕೋಟಿ ರೂ. ಗಳಿಕೆ ಕಂಡ ಆದಿಪುರುಷ್‌!

ಮನೋಜ್​ ಹೇಳಿಕೆಯನ್ನು ಬಿಜೆಪಿ ನಾಯಕರ ಜತೆಗೆ ಲಿಂಕ್ ಮಾಡಿ ಮಾತನಾಡಿದ ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಅವರು ‘ರಾಮಾಯಣ ಕಥೆಯಾಧಾರಿತ ಆದಿಪುರುಷ್ ಸಿನಿಮಾವನ್ನು ಬಿಜೆಪಿ ನಾಯಕರು, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಸ್ವಾಗತಿಸಿದ್ದಾರೆ/ಬೆಂಬಲಿಸಿದ್ದಾರೆ. ಆದರೆ ಈಗ ಸಿನಿಮಾದ ಸ್ಕ್ರಿಪ್ಟ್​ ರೈಟರ್​​ ಮನೋಜ್​ ಅವರು ಬಜರಂಗ ಬಲಿ ದೇವರೇ ಅಲ್ಲ ಎನ್ನುತ್ತಿದ್ದಾರೆ. ಅಂದರೆ ಅರ್ಥವೇನು? ಬಿಜೆಪಿಯೂ ಆಂಜನೇಯನನ್ನು ದೇವರೆಂದು ಒಪ್ಪಿಕೊಳ್ಳುವುದಿಲ್ಲವೇ? ಹನುಮಾನ್ ಚಾಲೀಸಾವನ್ನು ನಿಷೇಧ ಮಾಡುತ್ತದೆಯೇ?’ ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ, ‘ಹನುಮಂತ ದೇವರಲ್ಲ ಎಂದಾದಮೇಲೆ, ಅದೆಷ್ಟೋ ಹಿಂದುಗಳು ಯಾಕೆ ಮಂಗಳವಾರ ಆಂಜನೇಯನ ಪೂಜೆ ಮಾಡುತ್ತಾರೆ, ಅವನ ಆಶೀರ್ವಾದಕ್ಕಾಗಿ ಉಪವಾಸ ಮಾಡುತ್ತಾರೆ? ಯಾಕೆ ಕೋಟ್ಯಂತರ ಹಿಂದೂಗಳು ಹನುಮಾನ್ ಚಾಲೀಸಾವನ್ನು ಪಠಿಸುತ್ತಾರೆ? ಆಂಜನೇಯನ ದೇಗುಲಗಳಿಗೇಕೆ ಭೇಟಿ ಕೊಡುತ್ತಾರೆ?’ ಎಂದೂ ಕೇಳಿದ್ದಾರೆ.

ಹಾಗೇ, ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್​ ಅವರು ಟ್ವೀಟ್ ಮಾಡಿ ‘ಶ್ರೀರಾಮನನ್ನು ದೇವರು ಎಂದು ಆರ್​ಎಸ್​ಎಸ್​ನವರು ಪರಿಗಣಿಸುವುದಿಲ್ಲ. ಶ್ರೀರಾಮನೆಂದರೆ ಮೇರು ವ್ಯಕ್ತಿತ್ವದ, ಮರ್ಯಾದಾ ಪುರುಷ ಎಂದು ಅವರು ಭಾವಿಸುತ್ತಾರೆ. ಈ ಮನೋಜ್ ಮುಂತಾಶಿರ್​ ಹೇಳಿಕೆ ನೋಡಿದರೆ, ಅದೇ ಆರ್​ಎಸ್​ಎಸ್ ಶಾಲೆಯಲ್ಲೇ ಪಳಗಿದವರು ಎಂದು ತೋಚುತ್ತದೆ’ ಎಂದು ವ್ಯಂಗ್ಯವಾಗಿ ಟೀಕೆ ಮಾಡಿದ್ದಾರೆ. ಹಾಗಂತ ಬಿಜೆಪಿಯ ಯಾವುದೇ ನಾಯಕೂ ಮನೋಜ್​ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. ಹನುಮ ದೇವರಲ್ಲ ಎಂದು ಮನೋಜ್ ನೀಡಿದ ಹೇಳಿಕೆಯನ್ನು ಅನುಮೋದಿಸಿಯೂ ಇಲ್ಲ.

Exit mobile version