Site icon Vistara News

ಗುಜರಾತ್​ ಮುಖ್ಯಮಂತ್ರಿ ಅಭ್ಯರ್ಥಿ ಹೆಸರು ಘೋಷಿಸಿದ ಆಮ್​ ಆದ್ಮಿ ಪಾರ್ಟಿ; ಶ್ರೀಕೃಷ್ಣನ ಕೃಪೆಯಿದೆ ಎಂದ ಅರವಿಂದ್ ಕೇಜ್ರಿವಾಲ್​

AAP Announce Gujarat Chief Minister candidate

ನವ ದೆಹಲಿ: ಆಮ್​ ಆದ್ಮಿ ಪಕ್ಷ ಗುಜರಾತ್​ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿಕೊಂಡಿದ್ದು, ಅಲ್ಲಿ ಈಗ ಆಡಳಿತದಲ್ಲಿರುವ ಬಿಜೆಪಿಯನ್ನು ಹೇಗಾದರೂ ಸೋಲಿಸಿ, ಅಧಿಕಾರಕ್ಕೆ ಏರುವ ನಿಟ್ಟಿನಲ್ಲಿ ಆಪ್​ ತಂತ್ರ ಹೂಡುತ್ತಿದೆ. ಡಿ.1 ಮತ್ತು 5ರಂದು ಎರಡು ಹಂತದಲ್ಲಿ ಗುಜರಾತ್ ಚುನಾವಣೆ ನಡೆಯಲಿದ್ದು, ಡಿ.8ಕ್ಕೆ ಮತ ಎಣಿಕೆ ನಡೆಯಲಿದೆ. ಆಪ್​ ಮುಖ್ಯಸ್ಥ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ ಈಗಾಗಲೇ ಐದಾರು ಬಾರಿ ಗುಜರಾತ್​ಗೆ ಭೇಟಿ ನೀಡಿ, ಅಲ್ಲಿನ ಜನರಿಗೆ ವಿವಿಧ ಭರವಸೆಗಳನ್ನು ನೀಡಿದ್ದಾರೆ. ಹಾಗೇ, ಇಂದು ಗುಜರಾತ್​ನಲ್ಲಿ ತಮ್ಮ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂಬುದನ್ನೂ ಘೋಷಿಸಿದ್ದಾರೆ.

ಈ ಹಿಂದೆ ಪಂಜಾಬ್​ ಚುನಾವಣೆ ಸಂದರ್ಭದಲ್ಲಿ, ಅಲ್ಲಿನ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆಯನ್ನು ಜನರಿಗೇ ಬಿಟ್ಟಿದ್ದರು. ಒಂದು ಫೋನ್​ ನಂಬರ್​ ಕೊಟ್ಟು, ಎಸ್​ಎಂಎಸ್​ ಮೂಲಕ ನಿಮ್ಮ ಸಿಎಂ ಅಭ್ಯರ್ಥಿಯನ್ನು ನೀವೇ ಆಯ್ಕೆ ಮಾಡಿಕೊಳ್ಳಿ ಎಂಬ ವಿಶೇಷ ಪ್ರಯೋಗ ಮಾಡಿದ್ದರು. ಜನರೇ ಆಯ್ಕೆ ಮಾಡಿದ್ದ ಭಗವಂತ್​ ಮಾನ್​ರನ್ನೇ ಸಿಎಂ ಅಭ್ಯರ್ಥಿಯನ್ನಾಗಿ ಘೋಷಿಸಿದ್ದರು. ಅದೇ ಪ್ರಯೋಗವನ್ನು ಅರವಿಂದ್​ ಕೇಜ್ರಿವಾಲ್​ ಗುಜರಾತ್​​ನಲ್ಲೂ ಅನುಷ್ಠಾನಕ್ಕೆ ತಂದಿದ್ದರು. ಇಲ್ಲಿಯೂ ಸಿಎಂ ಅಭ್ಯರ್ಥಿ ಆಯ್ಕೆಯನ್ನು ಜನರಿಗೆ ಬಿಟ್ಟಿದ್ದರು. ಹೀಗೆ ಜನರ ಆಯ್ಕೆ ಪ್ರಕ್ರಿಯೆ ಮುಕ್ತಾಯವಾಗಿದ್ದು, ‘ಇಸುಧಾನ್ ಗಢವಿ’ ಅವರನ್ನು ಗುಜರಾತ್​ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಇಂದು ಕೇಜ್ರಿವಾಲ್ ಘೋಷಿಸಿದ್ದಾರೆ. ಇಸುಧಾನ್​ ಗಢವಿ ಅವರು ಶ್ರೀಕೃಷ್ಣನ ಭೂಮಿಯಾದ ‘ದ್ವಾರಕಾ’ ದಿಂದ ಚುನಾವಣೆಯಲ್ಲಿ ಸ್ಪರ್ಧೆಗೆ ಇಳಿಯಲಿದ್ದಾರೆ.

ಇಸುಧಾನ್​ ಗಢವಿ ಅವರು ಹಲವು ವರ್ಷಗಳಿಂದಲೂ ನಿರುದ್ಯೋಗ ಸಮಸ್ಯೆ ವಿರುದ್ಧ, ರೈತರ ಅಭಿವೃದ್ಧಿಗಾಗಿ ಹೋರಾಟ ಮಾಡುತ್ತಲೇ ಬಂದಿದ್ದಾರೆ. ಇವರು ದ್ವಾರಕಾ ಜಿಲ್ಲೆಯ ಕಂಭಾಲಿಯಾದಿಂದ ಈ ಸಲ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಅದು ಭಗವಾನ್​ ಶ್ರೀಕೃಷ್ಣ ನೆಲೆಸಿದ್ದ ಭೂಮಿ. ಇವರು ಖಂಡಿತ ಗೆಲ್ಲುತ್ತಾರೆ ಮತ್ತು ಗುಜರಾತ್​ಗೆ ಒಬ್ಬ ಸಮರ್ಥ ಮುಖ್ಯಮಂತ್ರಿ ಸಿಗುತ್ತಾರೆ ಎಂದು ಅರವಿಂದ್ ಕೇಜ್ರಿವಾಲ್​ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಹಿಮಾಚಲ ಪ್ರದೇಶ, ಗುಜರಾತ್​​ನಲ್ಲಿ​ ಚುನಾವಣೋತ್ತರ ಸಮೀಕ್ಷೆ ನಡೆಸುವಂತಿಲ್ಲ: ಚುನಾವಣಾ ಆಯೋಗದ ಆದೇಶ

Exit mobile version