Site icon Vistara News

ಹಸೆಮಣೆ ಏರಲು ಸಜ್ಜಾಗಿದ್ದಾರಂತೆ ಆಪ್​ ನಾಯಕ ರಾಘವ್ ಚಡ್ಡಾ- ನಟಿ ಪರಿಣೀತಿ ಚೋಪ್ರಾ; ಅಕ್ಟೋಬರ್​ ಅಂತ್ಯಕ್ಕೆ ಮದುವೆ?

AAP Leader Raghav Chadha And Actor Parineeti Chopra will get married Soon

#image_title

ಬಾಲಿವುಡ್​ ನಟಿ ಪರಿಣೀತಿ ಚೋಪ್ರಾ ಮತ್ತು ಆಮ್​ ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯ ರಾಘವ್​ ಚಡ್ಡಾ (Raghav Chadha) ಪ್ರೀತಿಯಲ್ಲಿ ಬಿದ್ದಿದ್ದಾರೆ. ಇವರಿಬ್ಬರೂ ಡೇಟಿಂಗ್​ ಮಾಡ್ತಿದ್ದಾರೆ ಎಂಬ ಗುಮಾನಿ ಕಾಡುತ್ತಿದೆ. ಅವರು ಪದೇಪದೆ ಒಟ್ಟಿಗೆ ಕಾಣಿಸಿಕೊಂಡಿದ್ದೇ ಹೀಗೊಂದು ಸುದ್ದಿ ಹುಟ್ಟಲು ಕಾರಣ. ಕಳೆದ ಚೋಪ್ರಾ ಮತ್ತು ಚಡ್ಡಾ ಕಳೆದ ತಿಂಗಳು ಎರಡ್ಮೂರು ಬಾರಿ ಒಟ್ಟೊಟ್ಟಿಗೆ ರೆಸ್ಟೋರೆಂಟ್​ಗೆ ಹೋಗಿದ್ದರು. ಅವರು ಒಂದೇ ಕಾರಿನಲ್ಲಿ ಹೋಗಿ ಹೋಟೆಲ್​ ಮುಂದೆ ಇಳಿಯುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಹೀಗೆ ಈ ಜೋಡಿ ಬಗ್ಗೆ ಇಂಟರ್​ನೆಟ್​​ನಲ್ಲಿ ಬಿಸಿಬಿಸಿ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಈಗೊಂದು ಹೊಸ ಸುದ್ದಿ ಎದ್ದಿದೆ. ‘ಪರಿಣೀತಿ ಚೋಪ್ರಾ ಮತ್ತು ರಾಘವ್​ ಚಡ್ಡಾ ಅವರ ಕುಟುಂಬದವರು ಈಗಾಗಲೇ ರೋಕಾ ಆಚರಣೆ ಮಾಡಿ ಮುಗಿಸಿದ್ದಾರೆ. ಇದೇ ವರ್ಷ ಅಕ್ಟೋಬರ್​ ಕೊನೆಯಲ್ಲಿ ಇವರಿಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ’ ಎಂದು ಹೇಳಲಾಗಿದೆ.

ಪರಿಣೀತಿ ಮತ್ತು ರಾಘವ್​ ಚಡ್ಡಾ ಇವರಿಬ್ಬರಿಗೂ 34 ವರ್ಷ. ಪರಿಣೀತಿ ಬಾಲಿವುಡ್​​ ನಟಿ, ರಾಘವ್​ ಚಡ್ಡಾ ರಾಜಕೀಯದಲ್ಲಿ ಚಾಪು ಮೂಡಿಸಿದವರು. ಇತ್ತೀಚೆಗೆ ಪರಿಣಿತಿ ಚೋಪ್ರಾ ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಅವರ ಎಡಗೈ ಉಂಗುರದ ಬೆರಳಿಗೆ ಬೆಳ್ಳಿಯ ಬ್ಯಾಂಡ್​ ಇತ್ತು. ಇದೇ ಕಾರಣಕ್ಕೆ ರೋಕಾ ಆಚರಣೆ ನಡೆದಿರುವ ಬಗ್ಗೆ ಚರ್ಚೆ ನಡೆಯುತ್ತಿದೆ. ಪರಿಣೀತಿ ಮೂಲತಃ ಹರ್ಯಾಣದವರು ಆಗಿದ್ದರಿಂದ ಅಲ್ಲಿನ ಸಂಪ್ರದಾಯದ ಪ್ರಕಾರ ಮದುವೆ ಗೊತ್ತಾದ ಬಳಿಕ ನಿಶ್ಚಿತಾರ್ಥಕ್ಕೂ ಪೂರ್ವ ವಧು ಮತ್ತು ವರನ ಕುಟುಂಬದವರು ಸೇರಿಕೊಂಡು ಈ ರೋಕಾ ಆಚರಣೆ ಮಾಡುತ್ತಾರೆ. ಹುಡುಗಿ-ಹುಡುಗ ಇಬ್ಬರಿಗೂ ತಿಲಕ ಇಡಲಾಗುತ್ತದೆ. ಅಲಂಕಾರ ಮಾಡಲಾಗುತ್ತದೆ. ಎರಡೂ ಕುಟುಂಬದವರೂ ಪರಸ್ಪರರಿಗೆ ಉಡುಗೊರೆ ಕೊಡುತ್ತಾರೆ. ಇದು ಮದುವೆಯಾಗಲು ಒಪ್ಪಿದ್ದಕ್ಕೆ ಮೊದಲ ಸಮಾರಂಭವಾಗಿದೆ.

ಇದನ್ನೂ ಓದಿ: Raghav Chadha: ಆಪ್‌ ನಾಯಕ ರಾಘವ್‌ ಚಡ್ಡಾ, ಪರಿಣೀತಿ ಚೋಪ್ರಾ ಈಗ ಜೋಡಿ ಹಕ್ಕಿ? ಜತೆಗೇ ಸುತ್ತಿ ಚಡ್ಡಾ ಹೇಳಿದ್ದೇನು?

ಪರಿಣೀತಿ ಚೋಪ್ರಾ ಆಗಲೀ, ರಾಘವ್ ಚಡ್ಡಾ ಆಗಲೀ ಇದುವರೆಗೆ ತಮ್ಮ ಸಂಬಂಧದ ಬಗ್ಗೆ ಬಹಿರಂಗವಾಗಿ ಏನೂ ಹೇಳಿಲ್ಲ. ಪರಿಣೀತಿ ಅವರನ್ನಂತೂ ಮಾಧ್ಯಮದವರು ಸಿಕ್ಕಸಿಕ್ಕಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ. ಇತ್ತೀಚೆಗೆ ಅವರನ್ನು ಮಾಧ್ಯಮಗಳು ಮದುವೆ ಬಗ್ಗೆ ಪ್ರಶ್ನೆ ಮಾಡಿದಾಗ ‘ಮಾಧ್ಯಮಗಳು ಕೆಲವೊಮ್ಮೆ ತಮ್ಮ ಗಡಿಯನ್ನೂ ಮೀರಿ ತೀರ ಖಾಸಗಿ ವಿಷಯದ ಬಗ್ಗೆ ಕೇಳುತ್ತವೆ. ಎಲ್ಲದಕ್ಕೂ ಉತ್ತರ ಕೊಡುವುದಿಲ್ಲ. ನನ್ನ ಜೀವನದ ಬಗ್ಗೆ ಏನಾದರೂ ತಪ್ಪು ಕಲ್ಪನೆಗಳಾದಾಗ, ಅದಕ್ಕೆ ಸ್ಪಷ್ಟನೆ ಕೊಡುವ ಅನಿವಾರ್ಯತೆ ಕಂಡುಬಂದರೆ ಖಂಡಿತ ಕೊಡುತ್ತೇನೆ. ಸದ್ಯಕ್ಕೆ ಏನೂ ಹೇಳುವುದಿಲ್ಲ’ ಎಂದು ಉತ್ತರಿಸಿದ್ದರು.

‘ಪರಿಣಿತಿ ಮತ್ತು ರಾಘವ್ ಚಡ್ಡಾ ಅವರ ರೋಕಾ ಸಮಾರಂಭ ಮುಗಿದಿದೆ. ಅವರು ಮತ್ತು ಅವರ ಕುಟುಂಬದವರು ತುಂಬ ಸಂತೋಷವಾಗಿದ್ದಾರೆ. ಅಕ್ಟೋಬರ್ ಅಂತ್ಯದಲ್ಲಿ ಇವರ ವಿವಾಹ ನೆರವೇರಲಿದೆ. ರಾಘವ್​ ಮತ್ತು ಪರಿಣೀತಿಗೆ ಅವರದ್ದೇ ಆದ ಕೆಲಸಗಳು-ಬದ್ಧತೆ ಇದೆ. ತಮ್ಮ ಮದುವೆ ವಿಷಯವನ್ನು ಬಹಿರಂಗಗೊಳಿಸುವ ಆತುರದಲ್ಲಿ ಅವರಿಲ್ಲ’ ಎಂದು ಅವರ ಆಪ್ತರೊಬ್ಬರು ತಿಳಿಸಿದ್ದಾಗಿ ಇಂಡಿಯಾ ಟುಡೆ ವರದಿ ಮಾಡಿದೆ.

Exit mobile version