Site icon Vistara News

5 ಲಕ್ಷಕ್ಕೆ ಕೈಚಾಚಿದ ಪಂಜಾಬ್​ ಆಪ್​ ಶಾಸಕ ಅರೆಸ್ಟ್​; ಭ್ರಷ್ಟಾಚಾರ ಆರೋಪದಡಿ ಬಂಧಿತನಾಗುತ್ತಿರುವ 2ನೇ ಎಂಎಲ್​ಎ ಇವರು!

AAP MLA Amit Rattan Kotfatta Arrested In Bribery case

#image_title

ಪಂಜಾಬ್​ ಆಡಳಿತ ಪಕ್ಷ ಆಮ್​ ಆದ್ಮಿ ಪಾರ್ಟಿ (Aam Aadmi Party) ಶಾಸಕ ಅಮಿತ್ ರತ್ತನ್​ ಕೋಟ್ಫಟ್ಟಾ ಅವರು ಲಂಚ ಪಡೆದಿದ್ದಾರೆ ಎಂಬ ಆರೋಪದಡಿ ಬಂಧಿತರಾಗಿದ್ದಾರೆ. ಬಟಿಂಡಾ ಗ್ರಾಮಾಂತರ ಕ್ಷೇತ್ರದ ಶಾಸಕರಾಗಿರುವ ಅಮಿತ್​ ರತ್ತನ್​ ಅವರನ್ನು ಗುರುವಾರ ಪಂಜಾಬ್​​ನ ವಿಜಿಲೆನ್ಸ್​ ಬ್ಯೂರೋ ಅಧಿಕಾರಿಗಳು ರಾಜ್​ಪುರದಲ್ಲಿ ಬಂಧಿಸಿದ್ದಾರೆ. ಈಗೆರಡು ದಿನಗಳ ಹಿಂದೆ ಭ್ರಷ್ಟಾಚಾರ ಪ್ರಕರಣದಡಿ ಶಾಸಕ ಅಮಿತ್​ ಅವರ ನಿಕಟ ಸಹಾಯಕ ರಶೀಮ್ ಗಾರ್ಗ್​ ಬಂಧಿತನಾಗಿದ್ದ. ಅದರ ಬೆನ್ನಲ್ಲೇ ಶಾಸಕರೂ ಅರೆಸ್ಟ್ ಆಗಿದ್ದಾರೆ.

ಭ್ರಷ್ಟಾಚಾರವನ್ನು ಯಾವ ಕಾರಣಕ್ಕೂ ಸಹಿಸುವುದಿಲ್ಲ ಎಂದು ಪಂಜಾಬ್​ ಮುಖ್ಯಮಂತ್ರಿ ಭಗವಂತ್ ಮಾನ್​ ಅವರು ಈಗಾಗಲೇ ಹೇಳಿದ್ದಾರೆ. ಅದರಂತೆ ಅವರದ್ದೇ ಪಕ್ಷದ ಶಾಸಕರು, ಕಾರ್ಯಕರ್ತರನ್ನೂ ಕೂಡ ಬಚಾವ್ ಮಾಡುವ ಪ್ರಯತ್ನ ಮಾಡುತ್ತಿಲ್ಲ. ಕಳೆದ ವರ್ಷ ಆರೋಗ್ಯ ಸಚಿವ ವಿಜಯ್​ ಸಿಂಗ್ಲಾ ವಿರುದ್ಧ ಲಂಚ ಪಡೆದ ಆರೋಪ ಕೇಳಿಬಂದಿತ್ತು. ತಕ್ಷಣವೇ ಅವರನ್ನು ಕ್ಯಾಬಿನೆಟ್​ನಿಂದ ಉಚ್ಚಾಟನೆ ಮಾಡಿ, ಭಗವಂತ್ ಮಾನ್​ ಆದೇಶ ಹೊರಡಿಸಿದ್ದರು. ಹೀಗೆ ಉಚ್ಚಾಟನೆಗೊಂಡ ಕೆಲವೇ ಹೊತ್ತಲ್ಲಿ, ವಿಜಯ್​ ಸಿಂಗ್ಲಾ ಅರೆಸ್ಟ್ ಆಗಿದ್ದರು.

ಇದೀಗ ಶಾಸಕ ಅಮಿತ್ ರತ್ತನ್​​ ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದಾರೆ. ಬಟಿಂಡಾದ ಘುಡ್ಡಾ ಗ್ರಾಮಕ್ಕೆ ಸರ್ಕಾರದಿಂದ ಬಿಡುಗಡೆಯಾದ 25 ಲಕ್ಷ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಲು ಶಾಸಕ ಅಮಿತ್​ ಅವರ ಆಪ್ತ ಸಹಾಯಕ ರಶೀಮ್ ಗಾರ್ಗ್ 5 ಲಕ್ಷ ರೂಪಾಯಿ ಲಂಚ ಕೇಳುತ್ತಿದ್ದಾನೆ ಎಂದು ಗ್ರಾಮದ ಸರ್​ಪಂಚ್ ಆಗಿರುವ ಸೀಮಾ ರಾನ್​ ಆರೋಪಿಸಿದ್ದರು. ಆಕೆಯ ಪರವಾಗಿ ಅವರ ಪತಿ ಪ್ರೀತ್​ಪಾಲ್​ ಕುಮಾರ್ ಅವರು ಪೊಲೀಸರಿಗೆ ದೂರು ನೀಡಿದ್ದರು. ಅದರ ಅನ್ವಯ ತನಿಖೆ ಶುರುವಾಗಿತ್ತು. ಅದರಂತೆ ಪ್ಲ್ಯಾನ್​ ಸಿದ್ಧಾವಾಗಿ ಬಟಿಂಡಾದ ಸರ್ಕಿಟ್​​ ಹೌಸ್​ಗೆ ಬರುವಂತೆ ಗಾರ್ಗ್​​ನನ್ನು ಕರೆಯಲಾಗಿತ್ತು. ಅಲ್ಲಿ ಆತ ಸರ್​ಪಂಚ್ ಪತಿ ಪ್ರೀತ್​ಪಾಲ್​ ಕುಮಾರ್​​ ಅವರಿಂದ 4 ಲಕ್ಷ ರೂಪಾಯಿ ಪಡೆಯುವಾಗ ಪಂಜಾಬ್ ವಿಜಿಲಿನ್ಸ್​ ಬ್ಯೂರೋ ಅಧಿಕಾರಿಗಳ ಕೈಯಲ್ಲಿ ರೆಡ್​​ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ.

ಇದನ್ನೂ ಓದಿ: Viral Video | ಪಂಜಾಬ್​ ಆಮ್​ ಆದ್ಮಿ ಪಕ್ಷದ ಶಾಸಕಿಗೆ ಪತಿಯಿಂದಲೇ ಥಳಿತ

ಇಲ್ಲಿ ಮೊದಲು ವಿಜಿಲಿನ್ಸ್​ ಬ್ಯೂರೋ ಅಧಿಕಾರಿಗಳು ಸರ್ಕಿಟ್​ ಹೌಸ್​ ಹೊರಗೇ ಇದ್ದರು. ಪ್ರೀತ್​ಪಾಲ್​ ಕುಮಾರ್ ಒಳಗೆ ಹೋದರೆ ಗಾರ್ಗ್ ಜತೆ ಶಾಸಕ ಅಮಿತ್ ರತ್ತನ್​ ಕೋಟ್ಫಟ್ಟಾ ಕೂಡ ಇದ್ದರು. ಈ ಮೂರು ಜನ ಹಣದ ಬಗ್ಗೆ ಮಾತುಕತೆ ನಡೆಸಿದ್ದಾರೆ. ಅದರ ಆಡಿಯೊ ಕೂಡ ವೈರಲ್ ಆಗಿದೆ. ಇಷ್ಟೆಲ್ಲ ಆಗಿದ್ದು ಫೆ.16ರಂದು. ಆದರೆ ಅಂದು ಶಾಸಕರು ತಮ್ಮ ಪಾತ್ರ ಇಲ್ಲ ಎಂದು ನುಣುಚಿಕೊಂಡಿದ್ದರಿಂದ ಅರೆಸ್ಟ್ ಮಾಡಿರಲಿಲ್ಲ. ಆದರೆ ಈಗ ಅವರ ಕೈವಾಡ ಇರುವುದು ಸ್ಪಷ್ಟವಾಗಿದ್ದರಿಂದ ಬಂಧಿಸಲಾಗಿದೆ.

Exit mobile version