ನವದೆಹಲಿ: ದೆಹಲಿಯಲ್ಲಿ ಮುನ್ಸಿಪಲ್ ಕಾರ್ಪೋರೇಶನ್ ಚುನಾವಣೆ ಸಮೀಪಿಸುತ್ತಿದ್ದು, ಆಪ್ ಮತ್ತು ಬಿಜೆಪಿ ನಾಯಕರು ಈಗಾಗಲೇ ಪ್ರಚಾರ ಪ್ರಾರಂಭಿಸಿದ್ದಾರೆ. ಆಮ್ ಆದ್ಮಿ ಪಕ್ಷ ಭ್ರಷ್ಟರಿಂದಲೇ ತುಂಬಿಹೋಗಿದೆ ಎಂದು ಬಿಜೆಪಿ ಜನರೆದುರು ಆರೋಪ ಮಾಡುತ್ತಿದ್ದರೆ, ಇತ್ತ ಆಪ್ ಪಕ್ಷ, ಬಿಜೆಪಿ ವಿರುದ್ಧ ಹತ್ತು ಹಲವು ಆರೋಪಗಳನ್ನು ಮಾಡುತ್ತಿದೆ. ದೆಹಲಿಯಲ್ಲಿ ಮುನ್ಸಿಪಲ್ ಕಾರ್ಪೋರೇಶನ್ನಲ್ಲಿ ಬಿಜೆಪಿ ಆಡಳಿತವಿದ್ದು, ಈ ಸಲ ಡಿಸೆಂಬರ್ 4ರಂದು ನಡೆಯಲಿರುವ ಚುನಾವಣೆಯಲ್ಲಿ ಗೆಲ್ಲಲು ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ಭರ್ಜರಿ ಪ್ರಯತ್ನದಲ್ಲಿ ತೊಡಗಿದೆ. ಈ ಮಧ್ಯೆ ಆಪ್ ಶಾಸಕರೊಬ್ಬರು ಮತದಾರರಿಗೆ ಬಹಿರಂಗವಾಗಿ ಬೆದರಿಕೆ ಹಾಕಿ, ಮತ ಕೇಳಿದ್ದಾರೆ ಎಂಬ ಆರೋಪವನ್ನು ಬಿಜೆಪಿ ಮಾಡಿದೆ.
ಬಿಜೆಪಿ ನಾಯಕ ತಜೀಂದರ್ ಪಾಲ್ ಸಿಂಗ್ ಬಗ್ಗಾ ಅವರು ವಿಕಾಸ್ ಪುರಿ ಕ್ಷೇತ್ರದ ಆಪ್ ಶಾಸಕ ಮಹೇಂದರ್ ಯಾದವ್ ಅವರ ಭಾಷಣದ ವಿಡಿಯೊವೊಂದನ್ನು ಶೇರ್ ಮಾಡಿಕೊಂಡು ‘ಇಲ್ಲಿ ನೋಡಿ, ಇವರು ಆಪ್ ಶಾಸಕ. ಮುನ್ಸಿಪಲ್ ಚುನಾವಣೆ ಪ್ರಚಾರದ ವೇಳೆ ಮತದಾರರಿಗೆ ಬೆದರಿಕೆ ಹಾಕಿದ್ದಾರೆ. ಇದೇ ಅರವಿಂದ್ ಕೇಜ್ರಿವಾಲ್ ಮಾದರಿ ಆಡಳಿತ’ ಎಂದು ವ್ಯಂಗ್ಯಮಾಡಿದ್ದಾರೆ. ಅಷ್ಟೇ ಅಲ್ಲ, ಅರವಿಂದ್ ಕೇಜ್ರಿವಾಲ್ರನ್ನು ಟ್ಯಾಗ್ ಕೂಡ ಮಾಡಿದ್ದಾರೆ.
ವಿಡಿಯೊದಲ್ಲಿ ಏನಿದೆ?
ಆಪ್ ಶಾಸಕ ಮಹೀಂದರ್ ಯಾದವ್ ತಮ್ಮ ಕ್ಷೇತ್ರದಲ್ಲಿ ಭಾಷಣ ಮಾಡುತ್ತ, ‘ನೀವೆಲ್ಲ ಮುನ್ಸಿಪಲ್ ಚುನಾವಣೆಯಲ್ಲಿ ಆಪ್ಗೆ ಮತ ಹಾಕದೆ ಇದ್ದರೆ, ಈ ಪ್ರದೇಶದಲ್ಲಿ ಒಳಚರಂಡಿಗಳು ಸ್ವಚ್ಛಗೊಳ್ಳುವುದಿಲ್ಲ. ಅವು ಎಷ್ಟೇ ಗಲೀಜಾಗಲಿ, ತುಂಬಿ ಹರಿಯಲಿ ಅವುಗಳನ್ನು ಸ್ವಚ್ಛಗೊಳಿಸುವ ಕೆಲಸವನ್ನು ನಾನು ಮಾಡಿಸಿಕೊಡುವುದಿಲ್ಲ. ನನ್ನ ಬಳಿ ಯಾರಾದರೂ ಕೇಳಿದರೆ, ಅದು ನನ್ನ ಕೆಲಸವೇ ಅಲ್ಲ ಎನ್ನುತ್ತೇನೆ. ಇದು ಮಾತ್ರ ಸ್ಪಷ್ಟ’ ಎಂದು ಹೇಳಿದ್ದನ್ನು ವಿಡಿಯೊದಲ್ಲಿ ಕೇಳಬಹುದು. ಅಂದರೆ ಒಳಚರಂಡಿ ಸ್ವಚ್ಛತಾ ಕೆಲಸವೆಲ್ಲ ಮುನ್ಸಿಪಲ್ ಆಡಳಿತದ ಅಡಿಯಲ್ಲಿ ಬರುತ್ತದೆ. ಆಪ್ಗೆ ಮತವನ್ನೇ ಹಾಕದೆ, ಆ ಕೆಲಸ ಆಗಿಲ್ಲ ಎಂದು ನನ್ನ ಬಳಿ ದೂರಲು ಬರಬೇಡಿ ಎಂದು ಯಾದವ್ ತಿಳಿಸಿದ್ದಾರೆ. ಶಾಸಕರ ಈ ಭಾಷಣ ಕೇಳಿ ಅಲ್ಲಿ ನೆರೆದಿದ್ದ ಜನರೆಲ್ಲ ದೊಡ್ಡದಾಗಿ ಚಪ್ಪಾಳೆ ಹೊಡೆದು, ಶಿಳ್ಳೆ ಹಾಕಿದ್ದಾರೆ. ಈ ವಿಡಿಯೊ ವೈರಲ್ ಆಗುತ್ತಿದೆ. ದೆಹಲಿ ಮುನ್ಸಿಪಲ್ ಕಾರ್ಪೋರೇಶನ್ನ 250 ವಾರ್ಡ್ಗಳಿಗೆ ಡಿಸೆಂಬರ್ 4ರಂದು ಚುನಾವಣೆ ನಡೆಯಲಿದು 1416 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಡಿಸೆಂಬರ್ 7ರಂದು ಮತ ಎಣಿಕೆ ನಡೆಯಲಿದೆ.
ಇದನ್ನೂ ಓದಿ: Gujarat Election | ಪತ್ರಕರ್ತ ಇಸುದಾನ್ ಗಢವಿ ಆಮ್ ಆದ್ಮಿ ಪಕ್ಷದ ಸಿಎಂ ಅಭ್ಯರ್ಥಿ