Site icon Vistara News

Gujarat Election | ಗುಜರಾತ್​​ನಲ್ಲಿ ಆಪ್​​ಗೆ ಸಂಕಷ್ಟ? ಗೆದ್ದ ಶಾಸಕರೆಲ್ಲ ಬಿಜೆಪಿ ಸಂಪರ್ಕದಲ್ಲಿ?

AAP

ಗಾಂಧಿನಗರ: ಗುಜರಾತ್​​ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 156 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ದಾಖಲೆಯ ಜಯ ಸಾಧಿಸಿದ್ದರೆ, ಆಮ್​ ಆದ್ಮಿ ಪಕ್ಷ ಖಾತೆ ತೆರೆಯುವ ಜತೆ 5 ಸ್ಥಾನಗಳನ್ನು ಗೆದ್ದುಕೊಂಡಿದೆ. ಇಲ್ಲೀಗ ಆಪ್​ ಪಕ್ಷದ ಶಾಸಕರು ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಗುಜರಾತ್​​ನ ಜುನಾಗಢ್​ ಜಿಲ್ಲೆಯ ವಿಸಾವಧರ್​ ವಿಧಾನಸಭಾ ಕ್ಷೇತ್ರದಿಂದ ಗೆದ್ದಿರುವ ಆಮ್​ ಆದ್ಮಿ ಪಕ್ಷದ ಶಾಸಕ ಭೂಪತ್​ ಭಯಾನಿ ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ ಎಂದೂ ಹೇಳಲಾಗುತ್ತಿದೆ. ಭೂಪತ್​ ಭಯಾನಿ ಬಿಜೆಪಿ ಸೇರುವುದಿಲ್ಲ, ಬದಲಿಗೆ ಹೊರಗಡೆಯಿಂದ ಆ ಪಕ್ಷಕ್ಕೆ ಬೆಂಬಲ ನೀಡಲಿದ್ದಾರೆ ಎಂದು ಇನ್ನೊಂದು ವರದಿ ಉಲ್ಲೇಖಿಸಿದೆ.

ಆದರೆ ಇವೆರಡೂ ವರದಿಯನ್ನು ಭೂಪತ್​ ಭಯಾನಿ ಅಲ್ಲಗಳೆದಿದ್ದಾರೆ. ನಾನು ಆಪ್​ ಬಿಟ್ಟು ಬಿಜೆಪಿಗೆ ಸೇರ್ಪಡೆಯಾಗುತ್ತಿಲ್ಲ ಎಂದು ಹೇಳಿದ್ದಾರೆ. ಭಯಾನಿ 2017ರವರೆಗೂ ಬಿಜೆಪಿಯಲ್ಲೇ ಇದ್ದರು. ಆ ವರ್ಷದ ಗುಜರಾತ್​ ವಿಧಾನಸಭೆ ಚುನಾವಣೆ ಹೊತ್ತಲ್ಲಿ ಆಮ್​ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರು.

ಗುಜರಾತ್​​ನಲ್ಲಿ ಯಾವುದೇ ಪಕ್ಷ ಸರ್ಕಾರ ರಚನೆ ಮಾಡಬೇಕು ಎಂದರೆ ಕನಿಷ್ಠ 92 ಕ್ಷೇತ್ರಗಳನ್ನು ಗೆಲ್ಲಬೇಕು. ಅದಕ್ಕೂ ಕಡಿಮೆ ಸೀಟ್​ ಗೆದ್ದಾಗ ಮಾತ್ರ ಬೇರೆ ಪಕ್ಷಗಳ ಶಾಸಕರಿಗೆ ಗಾಳ ಹಾಕುವುದು, ಮತ್ತೊಂದು ಪಕ್ಷದ ಶಾಸಕರನ್ನು ತಮ್ಮೆಡೆಗೆ ಸೆಳೆಯುವ ಅಗತ್ಯ ಇರುತ್ತದೆ. ಆದರೆ ಗುಜರಾತ್​​ನಲ್ಲಿ ಈ ಸಲ ಬಿಜೆಪಿಗೆ ಆ ಪ್ರಮೇಯವೇ ಇಲ್ಲದೆ ಇರುವುದರಿಂದ ಆಮ್​ ಆದ್ಮಿ ಪಕ್ಷದ ಶಾಸಕರು ಬಂದರೂ-ಬಾರದಿದ್ದರೂ ಯಾವುದೇ ವ್ಯತ್ಯಾಸವೂ ಆಗುವುದಿಲ್ಲ.

ಆಮ್​ ಆದ್ಮಿ ಪಕ್ಷ ಈ ವಿಧಾನಸಭೆ ಚುನಾವಣೆಯಲ್ಲಿ 5 ಕ್ಷೇತ್ರಗಳನ್ನು ಗೆದ್ದಿದ್ದು, ಒಟ್ಟಾರೆ ಶೇ.12.92ರಷ್ಟು ಮತ ಗಳಿಸಿದೆ. ವಿಸಾವಧರ್ ಕ್ಷೇತ್ರದಿಂದ ಭೂಪತ್ ಭಾಯ್, ​ ಜಮ್​​ಜೋಧಪುರದಿಂದ ಅಹೀರ್​ ಹೇಮಂತ್​ಭಾಯ್​ ಹರ್ದಾಸ್​ಭಾಯ್​, ಬೋಟಾಡ್​ ವಿಧಾನಸಭಾ ಕ್ಷೇತ್ರದಿಂದ ಉಮೇಶ್​ಭಾಯ್​ ನರನ್​ಭಾಯ್​, ಗರಿಯಾಧರ್​ ಕ್ಷೇತ್ರದಿಂದ ಸುಧೀರಭಾಯಿ ವಘಾನಿ ಮತ್ತು ದೇಡಿಯಾಪಾದ ಕ್ಷೇತ್ರದಿಂದ ಚೈತಾರಾಭಾಯಿ ದಾಮ್ಜಿಭಾಯಿ ಗೆದ್ದಿದ್ದಾರೆ.

ಇದನ್ನೂ ಓದಿ: Ravindra Jadeja | ಗುಜರಾತ್​ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಪತ್ನಿ ರಿವಾಬಾಗೆ ವಿಶೇಷ ರೀತಿಯಲ್ಲಿ ಶುಭ ಕೋರಿದ ರವೀಂದ್ರ ಜಡೇಜಾ

Exit mobile version