ನವ ದೆಹಲಿ: ಆಮ್ ಆದ್ಮಿ ಪಕ್ಷಕ್ಕೀಗ ಕಚೇರಿಯೇ ಮುಟ್ಟುಗೋಲಾಗುವ ಆತಂಕ ಎದುರಾಗಿದೆ. 2015-2016ನೇ ಆರ್ಥಿಕ ವರ್ಷದಲ್ಲಿ ಆಮ್ ಆದ್ಮಿ ಪಕ್ಷವು ತನ್ನ ರಾಜಕೀಯ ಜಾಹೀರಾತನ್ನು, ಸರ್ಕಾರಿ ಜಾಹೀರಾತು ಎಂಬಂತೆ ಪ್ರಕಟಿಸಿದ್ದಕ್ಕೆ ಪ್ರತಿಯಾಗಿ 164 ಕೋಟಿ ರೂಪಾಯಿ ಪಾವತಿಸುವಂತೆ ಮಾಹಿತಿ ಮತ್ತು ಪ್ರಚಾರ ನಿರ್ದೇಶನಾಲಯ (DIP) ಆಮ್ ಆದ್ಮಿ ಪಕ್ಷಕ್ಕೆ ವಸೂಲಾತಿ ನೋಟಿಸ್ ನೀಡಿದೆ. ಅಷ್ಟೇ ಅಲ್ಲ, 10 ದಿನಗಳ ಒಳಗೆ ಹಣ ಪಾವತಿ ಮಾಡದೆ ಇದ್ದರೆ, ಆಪ್ ಕಚೇರಿಯನ್ನೇ ಸೀಲ್ ಮಾಡುವುದಾಗಿಯೂ ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ.
ಯಾವುದೇ ಆಡಳಿತ ಪಕ್ಷ ಚುನಾವಣೆ ಸಂದರ್ಭದಲ್ಲಿ ತನ್ನ ವೈಯಕ್ತಿಕ ಲಾಭಕ್ಕಾಗಿ ಜಾಹೀರಾತುಗಳನ್ನು ಪ್ರಕಟಿಸಲು ಸರ್ಕಾರದ ಹಣವನ್ನು ದುರ್ಬಳಕೆ ಮಾಡಿಕೊಳ್ಳಬಾರದು ಎಂಬ ಕಾರಣಕ್ಕೆ ಸುಪ್ರೀಂಕೋರ್ಟ್ ಕೆಲವು ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಆದರೆ ಆಪ್ ಪಕ್ಷ 2015-2016ರಲ್ಲಿ ಜಾಹೀರಾತು ಪ್ರಕಟಿಸುವಾಗ ಎಲ್ಲ ನಿಯಮಗಳನ್ನೂ ಉಲ್ಲಂಘಿಸಿದೆ. ಸರ್ಕಾರಿ ಹಣ ದುರ್ಬಳಕೆ ಮಾಡಿದೆ ಎಂದು ಕಾಂಗ್ರೆಸ್ ಮುಖಂಡ ಅಜಯ್ ಮಾಕನ್ ಆರೋಪಿಸಿದ್ದರು. ಅದರಂತೆ ಸುಪ್ರೀಂಕೋರ್ಟ್ ಮಾರ್ಗಸೂಚಿಗಳಿಗೆ ವಿರುದ್ಧವಾಗಿ, ಖರ್ಚು ಮಾಡಿದ ಮೊತ್ತವನ್ನು ಆಪ್ನಿಂದ ಮರುಪಡೆಯಲು 3 ಸದಸ್ಯರ ಒಂದು ಸಮಿತಿಯನ್ನೂ ರಚಿಸಲಾಗಿತ್ತು.
ಕಳೆದ ಒಂದು ತಿಂಗಳ ಹಿಂದೆ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅವರೂ ಇದೇ ವಿಷಯವನ್ನು ಹೇಳಿದ್ದರು. ಜಾಹೀರಾತಿನ ಹೆಸರಲ್ಲಿ ಸರ್ಕಾರದ ಹಣ ದುರ್ಬಳಕೆ ಮಾಡಿಕೊಂಡಿರುವ ಆಪ್ನಿಂದ 97 ಕೋಟಿ ರೂಪಾಯಿ ವಸೂಲಿ ಮಾಡುವಂತೆ ಮುಖ್ಯಕಾರ್ಯದರ್ಶಿಗೆ ಸೂಚಿಸಿದ್ದರು. ಅದರ ಬೆನ್ನಲ್ಲೇ ಡಿಐಪಿ ನೋಟಿಸ್ ಹೋಗಿದೆ. ಡಿಐಪಿ ಬಡ್ಡಿಯ ಹಣವನ್ನೂ ಸೇರಿಸಿ, ನೋಟಿಸ್ನಲ್ಲಿ ಉಲ್ಲೇಖಿಸಿದೆ.
ಇದನ್ನೂ ಓದಿ: ಮುಖ್ಯಮಂತ್ರಿ ಚಂದ್ರುಗೆ ಆಮ್ ಆದ್ಮಿ ಪಕ್ಷದ ರಾಜ್ಯಮಟ್ಟದ ಹೊಣೆಗಾರಿಕೆ