ದೆಹಲಿ ಅಬಕಾರಿ ನೀತಿ ಅಕ್ರಮಕ್ಕೆ (Delhi Liquor scam) ಸಂಬಂಧಪಟ್ಟಂತೆ ಇಂದು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಸಿಬಿಐ ಮತ್ತೊಮ್ಮೆ ವಿಚಾರಣೆಗೆ ಒಳಪಡಿಸಿದೆ. ಬೆಳಗ್ಗೆಯಿಂದಲೂ ವಿಚಾರಣೆ ನಡೆಯುತ್ತಲೇ ಇದೆ. ಮನೀಶ್ ಸಿಸೋಡಿಯಾ ವಿಚಾರಣೆಯನ್ನು ಆಮ್ ಆದ್ಮಿ ಪಕ್ಷ ಕಟುವಾಗಿ ವಿರೋಧಿಸಿದೆ. ಪ್ರಧಾನಿ ಮೋದಿ-ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಯನ್ನು ಕೂಗಿದ ಆಪ್ ಕಾರ್ಯಕರ್ತರು, ನಾಯಕರು ‘mar ja Modi (ಮೋದಿ ನೀ ಸತ್ತು ಹೋಗು), Modi mar gaya (ಮೋದಿ ಸತ್ತಿದ್ದಾರೆ) ಎಂದು ಕೂಗಿದ್ದಾರೆ. ಆಪ್ನ ಈ ಘೋಷಣೆ ವಿರುದ್ಧ ಬಿಜೆಪಿ ಕಿಡಿಕಾರಿದೆ.
ದೆಹಲಿಯಲ್ಲಿ 2021ರಲ್ಲಿ ನೂತನ ಅಬಕಾರಿ ನೀತಿ ಜಾರಿಗೊಳಿಸಿದಾಗ, ಲೈಸೆನ್ಸ್ ಕೊಡುವಲ್ಲಿ ಕೋಟ್ಯಂತರ ರೂಪಾಯಿ ಹಗರಣವಾಗಿರುವ ಕೇಸ್ನ ತನಿಖೆಯನ್ನು ಇಡಿ ಮತ್ತು ಸಿಬಿಐಗಳು ನಡೆಸುತ್ತಿವೆ. ಹಿಂದೊಮ್ಮೆ ಮನೀಶ್ ಸಿಸೋಡಿಯಾ ಮನೆ, ಕಚೇರಿಗಳನ್ನು ಸಿಬಿಐ -ಇಡಿ ಶೋಧ ಮಾಡಿದ್ದವು. ಇಂದು ಮತ್ತೆ ಸಿಬಿಐ ವಿಚಾರಣೆಗೆ ಕರೆದಿತ್ತು. ಬೆಳಗ್ಗೆ 10ಗಂಟೆ ಹೊತ್ತಿಗೆ, ಮನೆಯಿಂದ ಹೊರಟ ಮನೀಶ್ ಸಿಸೋಡಿಯಾ ರೋಡ್ ಶೋ ಮಾಡಿಕೊಂಡು ಸಿಬಿಐ ಕಚೇರಿಗೆ ಹೋದರು. ಕಾರಿನಲ್ಲಿ ನಿಂತು, ಜನರತ್ತ ಕೈಬೀಸುತ್ತಿದ್ದರು. ದೊಡ್ಡ ಸಂಖ್ಯೆಯಲ್ಲಿ ಕಾರ್ಯಕರ್ತರು ಕೈಯಲ್ಲಿ ವಿವಿಧ ಘೋಷಣೆಗಳುಳ್ಳ ಫಲಕವನ್ನು ಹಿಡಿದು, ಬಾಯಲ್ಲಿ ಘೋಷಣೆಗಳನ್ನು ಕೂಗುತ್ತ ಸಿಸೋಡಿಯಾ ಜತೆ ಸಾಗಿದರು. ಬಳಿಕ ಮನೀಶ್ ಸಿಸೋಡಿಯಾ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಅವರೇನೂ ಚುನಾವಣಾ ಪ್ರಚಾರಕ್ಕೆ ಹೊರಟಿದ್ದಾರೋ, ವಿಜಯ ಯಾತ್ರೆ ನಡೆಸುತ್ತಿದ್ದಾರೋ ಅಥವಾ ಸಿಬಿಐ ವಿಚಾರಣೆಗೆ ತೆರಳುತ್ತಿದ್ದಾರೋ ಎಂದು ಗೊಂದಲ ಏರ್ಪಡುವ ಸನ್ನಿವೇಶ ಅಲ್ಲಿತ್ತು.
ನನ್ನ ಬಗ್ಗೆ ಹೆಮ್ಮೆ ಪಡಿ
ಮನೀಶ್ ಸಿಸೋಡಿಯಾ ಅವರು ಇಂದು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತ, ತಾನು ಜೈಲಿಗೆ ಹೋಗುವುದು ಗ್ಯಾರಂಟಿ ಎಂಬರ್ಥದಲ್ಲೇ ಮಾತನಾಡಿದರು. ‘ನಾನೊಮ್ಮೆ ಜೈಲಿಗೆ ಹೋದರೂ ನನ್ನ ಬಗ್ಗೆ ಯಾರೂ ವಿಷಾದಿಸಬೇಡಿ. ನಿಜಕ್ಕೂ ಹೆಮ್ಮೆ ಪಡಿ. ಪ್ರಧಾನಿ ನರೇಂದ್ರ ಮೋದಿಯವರಿಗೆ ಅರವಿಂದ್ ಕೇಜ್ರಿವಾಲ್ ಎಂದರೆ ಭಯ. ಅದೇ ಕಾರಣಕ್ಕೆ ಅವರು ನನ್ನನ್ನು ಸುಳ್ಳು ಕೇಸ್ನಲ್ಲಿ ಜೈಲಿಗೆ ಕಳಿಸಲು ನೋಡುತ್ತಿದ್ದಾರೆ. ನೀವೆಲ್ಲರೂ ನನ್ನ ಪರವಾಗಿ ಹೋರಾಡಿ. ಈ ಸಂಕಷ್ಟ ಬಂದದಿನದಿಂದಲೂ ನನಗೆ ಬೆಂಬಲವಾಗಿ, ಬೆನ್ನೆಲುಬಾಗಿ ನಿಂತ ನನ್ನ ಪತ್ನಿ ಈಗ ಅನಾರೋಗ್ಯಕ್ಕೀಡಾಗಿ ಮನೆಯಲ್ಲೇ ಇದ್ದಾಳೆ. ಅವಳ ಬಗ್ಗೆ ನೀವೇ ಕಾಳಜಿ ತೆಗೆದುಕೊಳ್ಳಬೇಕು. ನಾನು ಅತ್ಯಂತ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ನಾನು ಹೆದರುವುದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ನಾನು ದೆಹಲಿಯ ಮಕ್ಕಳಿಗೆ ಚೆನ್ನಾಗಿ ಓದಿ ಎಂದು ಹೇಳಲು ಇಷ್ಟಪಡುತ್ತೇನೆ. ನಿಮ್ಮ ಪಾಲಕರನ್ನು ಮಾತನ್ನು ಕೇಳಿ ಎಂದು ಸಲಹೆ ನೀಡುತ್ತೇನೆ’ ಎಂದು ಹೇಳಿದರು.
ಬಿಜೆಪಿ ಕಿಡಿ
ಇನ್ನು ಸಿಸೋಡಿಯಾ ಅವರು ಹೀಗೆ ರೋಡ್ ಶೋ ಮೂಲಕ ಸಿಬಿಐ ವಿಚಾರಣೆಗೆ ತೆರಳಿದ್ದನ್ನು ಬಿಜೆಪಿ ಕಟುವಾಗಿ ವಿರೋಧಿಸಿದೆ. ಅದರಲ್ಲೂ ಮೋದಿ ವಿರುದ್ಧ ಮಾಡಿದ ಘೋಷಣೆಯನ್ನು ತೀವ್ರವಾಗಿ ಟೀಕಿಸಿದ್ದಾರೆ. ಆಪ್ನವರು ಮೋದಿ ಸತ್ತು ಹೋಗು ಎಂದು ಘೋಷಣೆ ಕೂಗಿದ್ದು ನಿಜಕ್ಕೂ ದುರದೃಷ್ಟಕರ. ಅವರು ಏನು ಹೇಳಲು ಹೊರಟಿದ್ದಾರೆ. ಆಪ್ನವರು ಈ ಮೂಲಕ ತಮ್ಮ ಭ್ರಷ್ಟಾಚಾರ ಮರೆಮಾಚುತ್ತಿದ್ದಾರಾ?’ ಎಂದು ಬಿಜೆಪಿ ನಾಯಕ ಸಂಬಿತ್ ಪಾತ್ರಾ ಪ್ರಶ್ನಿಸಿದ್ದಾರೆ.