ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಅಬಕಾರಿ ನೀತಿ ಜಾರಿ ವೇಳೆ ನಡೆದಿದೆ ಎನ್ನಲಾದ ಹಗರಣಕ್ಕೆ (Delhi Liquor Scam) ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ದೆಹಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರನ್ನು ಬಂಧಿಸಿದ ಬೆನ್ನಲ್ಲೇ ಆಪ್ ಸಂಸದ ಸಂಜಯ್ ಸಿಂಗ್ ಸೇರಿ ಹಲವು ನಾಯಕರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಈ ಕುರಿತು ಆಪ್ ಸಂಸದ ಸಂಜಯ್ ಸಿಂಗ್ ಅವರ ಟ್ವಿಟರ್ ಖಾತೆಯಿಂದಲೇ ಮಾಹಿತಿ ನೀಡಲಾಗಿದೆ. “ದೆಹಲಿ ಪೊಲೀಸರು ನನ್ನನ್ನು ಬಂಧಿಸಿದ್ದಾರೆ. ಅಷ್ಟೇ ಅಲ್ಲ, ಸಚಿವ ಗೋಪಾಲ್ ರಾಯ್, ಶಾಸಕ ರಿತುರಾಜ್ ಝಾ, ದಿನೇಶ್ ಮೊಹನಿಯಾ, ರೋಹಿತ್ ಮೆಹ್ರುಲಿಯಾ, ಆದಿಲ್ ಖಾನ್ ಸೇರಿ ಹಲವು ಕೌನ್ಸಿಲರ್‌ಗಳು ಹಾಗೂ ಆಪ್ ಕಾರ್ಯಕರ್ತರನ್ನು ಬಂಧಿಸಿ ಫತೇಪುರ್ ಬೇರಿ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದೆ” ಎಂದು ಸಿಂಗ್ ತಿಳಿಸಿದ್ದಾರೆ.
ಯಾವ ಕಾರಣಕ್ಕಾಗಿ ಸಂಜಯ್ ಸಿಂಗ್ ಸೇರಿ ಹಲವರನ್ನು ಪೊಲೀಸರು ಬಂಧಿಸಿದ್ದಾರೆ ಎಂಬ ಕುರಿತು ನಿಖರ ಮಾಹಿತಿ ಲಭ್ಯವಾಗಿಲ್ಲ. ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆಯೇ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಆದಾಗ್ಯೂ, ಸಿಸೋಡಿಯಾ ಸೇರಿ ಹಲವರ ಬಂಧನದ ಕುರಿತು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Manish Sisodia Arrested: ಅಬಕಾರಿ ನೀತಿ ಹಗರಣ, ದೆಹಲಿ ಡಿಸಿಎಂ ಮನೀಷ್ ಸಿಸೋಡಿಯಾ ಬಂಧನ