ನವ ದೆಹಲಿ: ಇಲ್ಲಿನ 20 ವರ್ಷದ ಯುವತಿ ಅಂಜಲಿ ಕಾರು ಅಪಘಾತ ಪ್ರಕರಣದಲ್ಲಿ ದಿನಕ್ಕೊಂದು ತಿರುವು ಸಿಗುತ್ತಿದೆ. ಹೊಸವರ್ಷದ ದಿನ ಕಾರಿನಡಿ ಸಿಲುಕಿ 12 ಕಿಮೀ ದೂರ ಎಳೆಯಲ್ಪಟ್ಟು ಅಂಜಲಿ ಎಂಬುವಳು ಮೃತಪಟ್ಟಿದ್ದಾಳೆ. ಈಕೆಯೊಬ್ಬಳೇ ಸ್ಕೂಟರ್ನಲ್ಲಿದ್ದಳು ಎಂದು ಮೊದಲು ಹೇಳಲಾಗಿತ್ತು. ಆದರೆ ನಂತರ ಈಕೆಯೊಬ್ಬಳೇ ಅಲ್ಲ, ಜತೆಗೆ ಅವಳ ಸ್ನೇಹಿತೆ ನಿಧಿ ಎಂಬುವಳೂ ಇದ್ದಳು ಎಂಬ ವಿಷಯ ಗೊತ್ತಾಗಿತ್ತು. ಹಾಗೇ, ಅಂಜಲಿ ಮತ್ತು ನಿಧಿ ಇಬ್ಬರೂ ದೆಹಲಿಯ ರೋಹಿಣಿಯಲ್ಲಿರುವ ಹೋಟೆಲ್ವೊಂದರಲ್ಲಿ ಹೊಸವರ್ಷಾಚರಣೆಯಲ್ಲಿ ಪಾಲ್ಗೊಂಡು, ರಾತ್ರಿ ಸ್ಕೂಟರ್ನಲ್ಲಿ ಅಲ್ಲಿಂದ ಹೋಗಿದ್ದ ಸಿಸಿಟಿವಿ ಫೂಟೇಜ್ಗಳು ಪೊಲೀಸರಿಗೆ ಲಭ್ಯವಾಗಿದ್ದವು. ಸದ್ಯ ಪೊಲೀಸರು ನಿಧಿಯ ಹೇಳಿಕೆಯನ್ನೂ ಪಡೆದಿದ್ದಾರೆ.
ಇಷ್ಟೆಲ್ಲದರ ಮಧ್ಯೆ ಕೇಸ್ಗೆ ಈಗ ಇನ್ನೊಂದು ಟ್ವಿಸ್ಟ್ ಸಿಕ್ಕಿದೆ. ಆರೋಪಿಗಳು ತಮ್ಮ ಕಾರನ್ನು ಪಾರ್ಕಿಂಗ್ ಏರಿಯಾದಲ್ಲಿ ನಿಲ್ಲಿಸಿ, ಅಲ್ಲಿಂದ ಆಟೋ ಹತ್ತಿ ಹೋದ ಸಿಸಿಟಿವಿ ಫೂಟೇಜ್ ಈಗ ಪೊಲೀಸರಿಗೆ ಲಭ್ಯವಾಗಿದೆ. ಅಂಜಲಿಗೆ ಡಿಕ್ಕಿ ಹೊಡೆದ ಕಅರಿನಲ್ಲಿದ್ದ ಐವರು ಆರೋಪಿಗಳಾದ ಮನೋಜ್ ಮಿತ್ತಲ್, ದೀಪಕ್ ಖನ್ನಾ, ಅಮಿತ್ ಖನ್ನಾ, ಕೃಷ್ಣನ್ ಮತ್ತು ಮಿಥುನ್ ಈಗಾಗಲೇ ಬಂಧಿತರಾಗಿದ್ದಾರೆ. ಅವರನ್ನೂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇದೀಗ ಸಿಕ್ಕ ಹೊಸ ವಿಡಿಯೊದಲ್ಲಿ ಆರೋಪಿಗಳ ನಡೆ ಇನ್ನಷ್ಟು ನಿಗೂಢ ಎನ್ನಿಸುತ್ತದೆ. ಅದೊಂದು ಪಾರ್ಕಿಂಗ್ ಏರಿಯಾ. ಅಲ್ಲಿ ಒಂದು ಆಟೋ ಸೇರಿ, ಹಲವು ವಾಹನಗಳು ನಿಂತಿರುತ್ತವೆ. ಆಗ ಈ ಕಾರು ಕೂಡ ಅಲ್ಲಿಗೆ ಬಂದು ನಿಲ್ಲುತ್ತದೆ. ಅದರಿಂದ ಒಬ್ಬಾತ ಇಳಿದು, ಕಾರಿನ ಎಡಗಡೆ ಟೈಯರ್ನ್ನು ಬಗ್ಗಿ ಚೆಕ್ ಮಾಡುತ್ತಾನೆ. ಅಂದರೆ ಅವರಿಗೆ ಅಂಜಲಿ ಅಲ್ಲಿ ಸಿಕ್ಕಿದ್ದು ಗೊತ್ತಾಗಿತ್ತು ಎಂದೇ ಅರ್ಥ ಎಂಬಂತೆ ಅವರ ವರ್ತನೆ ಇದೆ. ಬಳಿಕ ಕಾರನ್ನು ಅಲ್ಲೇ ಮುಂದಕ್ಕೆ ತೆಗೆದುಕೊಂಡು ಹೋಗಿ, ಇಟ್ಟು ಎಲ್ಲರೂ ಒಂದು ಆಟೊ ಹತ್ತಿಕೊಂಡು ಹೋಗುತ್ತಾರೆ.
ನಿಧಿ ಹೇಳಿದ್ದೇನು?
ಸ್ಕೂಟರ್ನಲ್ಲಿ ಜತೆಗಿದ್ದ ನಿಧಿ ಪೊಲೀಸರಿಗೆ ಹೇಳಿಕೆ ನೀಡಿ, ‘ಅವತ್ತು ಅಂಜಲಿ ಕುಡಿದಿದ್ದಳು. ನಾನು ಎಷ್ಟೇ ಬೇಡವೆಂದರೂ ಅವಳೇ ಬೈಕ್ ಓಡಿಸಿದಳು. ಸುಲ್ತಾನ್ಪುರಿ ಬಳಿ ಕಾರು ಡಿಕ್ಕಿಯಾದಾಗ ನಾನು ಪಕ್ಕಕ್ಕೆ ಬಿದ್ದೆ. ಅಂಜಲಿ ಕಾಲು ಕಾರಿಗೆ ಸಿಲುಕಿತ್ತು. ಅದರೊಳಗೆ ಇದ್ದವರಿಗೆ ಆಕೆ ಕಾರಿನಡಿ ಸಿಲುಕಿದ್ದು ಗೊತ್ತಿದ್ದೂ ಮುಂದಕ್ಕೆ ಓಡಿಸಿದರು. ಆಕೆಯನ್ನು ಎಳೆದುಕೊಂಡೇ ಹೋದರು’ ಎಂದು ಹೇಳಿದ್ದಳು. ಇನ್ನು ಅಂಜಲಿ ಕುಡಿದಿದ್ದಳು ಎಂಬ ನಿಧಿ ಹೇಳಿಕೆಯನ್ನು ಅಂಜಲಿ ಕುಟುಂಬದವರು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಶವ ಪರೀಕ್ಷೆಯ ವರದಿ ಹೊರಬಿದ್ದಿದೆ. ಅಂಜಲಿ ಮದ್ಯಪಾನ ಮಾಡಿರಲಿಲ್ಲ ಎಂದೇ ಆ ವರದಿಯಲ್ಲೂ ಹೇಳಲಾಗಿದೆ ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ ಈ ಪ್ರಕರಣ ಗೋಜಲಾಗುತ್ತಿದ್ದು, ಶೀಘ್ರವೇ ಭೇದಿಸುವ ಭರವಸೆಯನ್ನು ದೆಹಲಿ ಪೊಲೀಸರು ನೀಡಿದ್ದಾರೆ.