ಮುಂಬೈ: ಸುಮಾರು 263 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಹಿಂದಿಯ ಖ್ಯಾತ ನಟಿ, ಬಿಗ್ ಬಾಸ್ ಮಾಜಿ ಸ್ಪರ್ಧಿ ಕೃತಿ ವರ್ಮಾ (Kriti Verma) ಸಂಕಷ್ಟಕ್ಕೆ ಸಿಲುಕಿದ್ದಾರೆ. ಟಿಡಿಎಸ್ ರಿಫಂಡ್ ಹಗರಣಕ್ಕೆ (TDS Refund Scam) ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಕೋರ್ಟ್‌ಗೆ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಕೃತಿ ವರ್ಮಾ ಅವರ ಹೆಸರನ್ನೂ ಸೇರಿಸಲಾಗಿದೆ. ಹಾಗಾಗಿ, ನಟಿ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.
2007-08 ಹಾಗೂ 2008-09ನೇ ಸಾಲಿನಲ್ಲಿ ನೂರಾರು ಕೋಟಿ ರೂ. ವಂಚನೆ, ಅಕ್ರಮವಾಗಿ ಹಣದ ವರ್ಗಾವಣೆ ಪ್ರರಕಣದಲ್ಲಿ ಆದಾಯ ತೆರಿಗೆ ಇಲಾಖೆಯ ಮಾಜಿ ಇನ್ಸ್‌ಪೆಕ್ಟರ್ ತಾನಾಜಿ ಮಂಡಲ್ ಅಧಿಕಾರಿ, ಕೃತಿ ವರ್ಮಾ ಮಾಜಿ ಬಾಯ್‌ಫ್ರೆಂಡ್‌ಗಳಾದ ಭೂಷಣ್ ಪಾಟೀಲ್, ರಾಜೇಶ್ ಶೆಟ್ಟಿ ಸೇರಿ 14 ಆರೋಪಿಗಳ ವಿರುದ್ಧ ಇ.ಡಿ ಚಾರ್ಜ್‌ಶೀಟ್ ಸಲ್ಲಿಸಿದೆ. ಆರೋಪಪಟ್ಟಿಯಲ್ಲಿ ಕೃತಿ ವರ್ಮಾ ಹೆಸರೂ ಇದೆ.
ಏನಿದು ಪ್ರಕರಣ?
ಟಿಡಿಎಸ್ ರಿಫಂಡ್ ಮಾಡುವಲ್ಲಿ ಸುಮಾರು 263 ಕೋಟಿ ರೂ. ಅಕ್ರಮ ಎಸಗಿದ ಪ್ರಕರಣ ಇದಾಗಿದೆ. ತಾನಾಜಿ ಮಂಡಲ್ ಅಧಿಕಾರಿಯು ತಮ್ಮ ಅವಧಿಯಲ್ಲಿ ಉದ್ಯಮಿ ಭೂಷಣ್ ಅನಂತ್ ಪಾಟೀಲ್ (ಪ್ರಕರಣದ ಮತ್ತೊಬ್ಬ ಆರೋಪಿ) ಅವರ ಖಾತೆ ಸೇರಿ ಹಲವರ ಬ್ಯಾಂಕ್ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ ಆರೋಪವಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಈಗಾಗಲೇ ತಾನಾಜಿ ಮಂಡಲ್ ಸೇರಿ ಹಲವರ ವಿರುದ್ಧ ಅಕ್ರಮವಾಗಿ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. 2019-20ರಲ್ಲೂ ತಾನಾಜಿ ಮಂಡಲ್ ಅಕ್ರಮ ಎಸಗಿದ್ದಾರೆ ಎಂದು ಇ.ಡಿ ತಿಳಿಸಿದೆ.
ಇದನ್ನೂ ಓದಿ: ಮಾಡೆಲ್ಗಳನ್ನು ವೇಶ್ಯಾವಾಟಿಕೆ ದಂಧೆಗೆ ಬಳಸುತ್ತಿದ್ದ ಭೋಜಪುರಿ ನಟಿ ಬಂಧನ; ಒಬ್ಬಳು ಯುವತಿಗೆ 80 ಸಾವಿರ ರೂ. ಚಾರ್ಜ್
ಕೃತಿ ವರ್ಮಾ ಪಾತ್ರವೇನು?
ಕೃತಿ ವರ್ಮಾ ಅವರು ನಟನೆ, ಬಿಗ್‌ಬಾಸ್‌ಗೆ ಪ್ರವೇಶಿಸುವ ಮುನ್ನ ಜಿಎಸ್‌ಟಿ ಇನ್ಸ್‌ಪೆಕ್ಟರ್ ಆಗಿದ್ದರು. ಇವರು ಆರೋಪಿಗಳ ಜತೆ ನಂಟು ಹೊಂದಿದ ಕಾರಣ ಹಾಗೂ ಇತ್ತೀಚೆಗೆ ನಟಿಯ ಖಾತೆಗೆ 1.18 ಕೋಟಿ ರೂ. ಜಮೆಯಾದ ಕಾರಣ ಇದುವರೆಗೆ ಹಲವು ಬಾರಿ ಇ.ಡಿ ಅಧಿಕಾರಿಗಳು ಕೃತಿ ವರ್ಮಾ ಅವರನ್ನು ವಿಚಾರಣೆ ನಡೆಸಿದ್ದಾರೆ. ಈಗ ಇವರ ವಿರುದ್ಧ ಕೂಡ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಹಾಗಾಗಿ, ನಟಿ ಕೃತಿ ವರ್ಮಾ ಅವರಿಗೆ ಬಂಧನದ ಭೀತಿ ಎದುರಾಗಿದೆ.