ಕೋಲ್ಕತ್ತ: 20 ದಿನಗಳಿಂದಲೂ ಕೋಲ್ಕತ್ತ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಬೆಂಗಾಳಿ ನಟಿ ಐಂದ್ರಿಲಾ ಶರ್ಮಾ ಕೊನೆಗೂ ಬದುಕುಳಿಯಲಿಲ್ಲ. ನವೆಂಬರ್ 1ರಂದು ಬ್ರೇನ್ ಸ್ಟ್ರೋಕ್ಗೆ ಒಳಗಾಗಿದ್ದ ಐಂದ್ರಿಲಾ ಅವರಿಗೆ ನವೆಂಬರ್ 14ರಂದು ಹಲವು ಬಾರಿ ಹೃದಯಸ್ತಂಭನ ಆಗಿತ್ತು. ಹೀಗಾಗಿ ಉಸಿರಾಟ ಕ್ಷೀಣವಾಗಿತ್ತು. ಅವರಿಗೆ ಸಿಪಿಆರ್ (Cardiopulmonary Resuscitation) ಚಿಕಿತ್ಸೆ ನೀಡಲಾಗಿತ್ತು. ವೆಂಟಿಲೇಟರ್ನಲ್ಲಿ ಇಡಲಾಗಿತ್ತು. ಆರು ದಿನಗಳ ಕಾಲ ಇದೇ ಸ್ಥಿತಿಯಲ್ಲಿದ್ದ ಐಂದ್ರಿಲಾ ಇಂದು ನಿಧನರಾದರು. ಅವರಿಗೆ 24 ವರ್ಷ ವಯಸ್ಸಾಗಿತ್ತು.
ಐಂದ್ರಿಲಾ ಶರ್ಮಾ ಈ ಹಿಂದೆ ಕ್ಯಾನ್ಸರ್ಗೆ ತುತ್ತಾಗಿದ್ದರು. ಎರಡೆರಡು ಬಾರಿ ಈ ರೋಗ ಅವರನ್ನು ಕಾಡಿತ್ತು. ಅದನ್ನು ಯಶಸ್ವಿಯಾಗಿ ಮಣಿಸಿದ್ದ ಐಂದ್ರಿಲಾ ಈಗ ಇಂಟ್ರಾಕ್ರೇನಿಯಲ್ ಹೆಮ್ರೇಜ್ (ಮಿದುಳಿನಲ್ಲಿ ರಕ್ತನಾಳ ಒಡೆಯುವುದು)ನಿಂದ ಬಳಲುತ್ತಿದ್ದರು. ಹೀಗಾಗಿ ಅವರು ಒಂದು ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು.
ಐಂದ್ರಿಲಾ ಪಶ್ಚಿಮ ಬಂಗಾಳದ ಬರ್ಹಾಂಪೋರ್ನವರಾಗಿದ್ದು, ಝುಮುರ್ ಟಿವಿ ಶೋ ಮೂಲಕ ಬಣ್ಣದ ಬದುಕಿಗೆ ಪದಾರ್ಪಣೆ ಮಾಡಿದ್ದರು. ಅದಾದ ಬಳಿಕ ಮಹಾಪೀಠ್ ತಾರಾಪೀಠ್, ಜೀವನ್ ಜ್ಯೋತಿ, ಜಿಯೋನ್ ಕತಿ ಎಂಬಿತ್ಯಾದಿ ಹಲವು ಪ್ರಮುಖ ಟಿವಿ ಶೋಗಳಲ್ಲಿ ನಟಿಸಿ, ಜನಪ್ರಿಯತೆಗಳಿಸಿದ್ದರು. ಅಮಿ ದೀದಿ ನಂಬರ್ 1, ಲವ್ ಕೆಫೆ ಎಂಬ ಸಿನಿಮಾಗಳಲ್ಲೂ ನಟಿಸಿದ್ದರು. ಕ್ಯಾನ್ಸರ್ ಗೆದ್ದ ಬಳಿಕವೂ ಅವರು ಟಿವಿ ಶೋಗಳಲ್ಲಿ ನಟಿಸುತ್ತಿದ್ದರು.
ಇದನ್ನೂ ಓದಿ: Aindrila Sharma | ಬೆಂಗಾಲಿ ನಟಿ ಐಂದ್ರಿಲಾ ಶರ್ಮಾಗೆ ಹೃದಯಾಘಾತ: ಆರೋಗ್ಯ ಸ್ಥಿತಿ ಗಂಭೀರ