ಚೆನ್ನೈ: ತಮಿಳುನಾಡಿನ ಹಿರಿಯ ನಟಿ ಗೌತಮಿ ತಡಿಮಲ್ಲ (actress gautami Tadimalla) , 25 ವರ್ಷಗಳ ಒಡನಾಟದ ಬಳಿಕ ಭಾರತೀಯ ಜನತಾ ಪಕ್ಷಕ್ಕೆ (Tamil Nadu BJP) ವಿದಾಯ ಹೇಳಿದ್ದಾರೆ. ತನ್ನ ಬದುಕಿನ ತೀವ್ರ ಸಂಕಷ್ಟದ ಸಮಯದಲ್ಲಿ ಪಕ್ಷ ತನ್ನ ಜತೆಗೆ ನಿಂತಿಲ್ಲದಿರುವುದು ತನಗೆ ಅತೀವ ನೋವು ತಂದಿದೆ ಎಂದಿದ್ದಾರೆ.
ʼತುಂಬಾ ನೋವು ಮತ್ತು ದುಃಖದಿಂದ ಈ ರಾಜೀನಾಮೆಯನ್ನು ಸಲ್ಲಿಸುತ್ತಿದ್ದೇನೆ. ನನಗೆ ದ್ರೋಹ ಬಗೆದಿರುವ ಒಬ್ಬ ವ್ಯಕ್ತಿಗೆ ಪಕ್ಷದ ಕೆಲವು ಮುಖಂಡರು ಸಹಾಯ ಮಾಡುತ್ತಿದ್ದಾರೆʼ ಎಂದು ನಟಿ- ರಾಜಕಾರಣಿ ಗೌತಮಿ ಆರೋಪಿಸಿದ್ದಾರೆ. ಗೌತಮಿ ಅವರು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಪಕ್ಷದ ತಮಿಳುನಾಡು ಮುಖ್ಯಸ್ಥ ಕೆ.ಅಣ್ಣಾಮಲೈ ಅವರನ್ನು ಪೋಸ್ಟ್‌ನಲ್ಲಿ ಟ್ಯಾಗ್ ಮಾಡಿದ್ದಾರೆ.
“ಇಂದು ನಾನು ನನ್ನ ಜೀವನದಲ್ಲಿ ಊಹಿಸಲಾಗದ ಬಿಕ್ಕಟ್ಟಿನ ಹಂತದಲ್ಲಿ ನಿಂತಿದ್ದೇನೆ. ನನಗೆ ಪಕ್ಷ ಮತ್ತು ನಾಯಕರಿಂದ ಯಾವುದೇ ಬೆಂಬಲ ದೊರೆತಿಲ್ಲ. ನನ್ನ ನಂಬಿಕೆಗೆ ದ್ರೋಹ ಬಗೆದ, ನನ್ನ ಜೀವನದ ಉಳಿತಾಯವನ್ನು ದೋಚಿ ನನಗೆ ಮೋಸ ಮಾಡಿದ ವ್ಯಕ್ತಿಗೆ ಅವರಲ್ಲಿ ಅನೇಕರು ಸಕ್ರಿಯವಾಗಿ ಸಹಾಯ ಮಾಡುತ್ತಿದ್ದಾರೆ ಮತ್ತು ಬೆಂಬಲಿಸುತ್ತಿದ್ದಾರೆ ಎಂಬುದು ನನ್ನ ಅರಿವಿಗೆ ಬಂದಿದೆ” ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಪತ್ರದಲ್ಲಿ ಬರೆದಿದ್ದಾರೆ.
ಸಿ.ಅಳಗಪ್ಪನ್ ನನ್ನ ಹಣ, ಆಸ್ತಿ ಮತ್ತು ದಾಖಲೆಗಳನ್ನು ಲಪಟಾಯಿಸಿದ್ದಾನೆ. ನಾನು ಮತ್ತು ನನ್ನ ಮಗಳು ಸೆಟಲ್ ಆಗಬೇಕಾದ ಸಮಯದಲ್ಲಿ ಇಂದು ಕಂಡುಬಂದಿರುವುದು ಭಯಾನಕವಾಗಿದೆ. ಅಳಗಪ್ಪನ್ ಸುಮಾರು 20 ವರ್ಷಗಳ ಹಿಂದೆ ನನ್ನ ಅಸಹಾಯಕತೆ, ಏಕಾಂಗಿತನದ ಸಮಯದಲ್ಲಿ ನನ್ನನ್ನು ಸಂಪರ್ಕಿಸಿದ್ದ. ಆಗ ನಾನು ನನ್ನ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡ ಅನಾಥೆಯಾಗಿದ್ದುದು ಮಾತ್ರವಲ್ಲ, ಶಿಶುವಿನೊಂದಿಗೆ ಇದ್ದ ಸಿಂಗಲ್ ಮದರ್ ಕೂಡ ಆಗಿದ್ದೆ. ಕಾಳಜಿ ತೋರಿಸುವ ಸೋಗಿನಲ್ಲಿ ಆತ ತನ್ನನ್ನು ಮತ್ತು ಅವನ ಕುಟುಂಬವನ್ನು ನನ್ನ ಜೀವನದಲ್ಲಿ ತೊಡಗಿಸಿಕೊಂಡ. 20 ವರ್ಷಗಳ ಹಿಂದೆ ಇಂಥ ಪರಿಸ್ಥಿತಿಯಲ್ಲಿ ನಾನು ನನ್ನ ಹಲವಾರು ಜಮೀನುಗಳ ಮಾರಾಟ ಮತ್ತು ದಾಖಲೆಗಳ ಹೊಣೆಯನ್ನು ಅವನಿಗೆ ವಹಿಸಿಕೊಟ್ಟೆ. ಅವನು ನನಗೆ ಮೋಸ ಮಾಡಿದ್ದಾನೆಂದು ಇತ್ತೀಚೆಗೆ ಗೊತ್ತಾಯಿತು. ಅವನ ಕುಟುಂಬದ ಭಾಗವಾಗಿ ನನ್ನನ್ನು ಮತ್ತು ನನ್ನ ಮಗಳನ್ನು ಸ್ವಾಗತಿಸಿದಂತೆ ಆತ ನಟಿಸಿದ್ದ.ʼʼ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಗೌತಮಿ ಅವರು ನ್ಯಾಯಕ್ಕಾಗಿ ತಾವು ನಡೆಸಿದ ಹೋರಾಟವನ್ನು ಪತ್ರದಲ್ಲಿ ವಿವರಿಸಿದ್ದಾರೆ. ತಾನು ಕಾನೂನು ಪ್ರಕ್ರಿಯೆಗಳನ್ನು ಅನುಸರಿಸಿದ್ದೇನೆ, ಅನೇಕ ದೂರುಗಳನ್ನು ಸಲ್ಲಿಸಿದ್ದೇನೆ, ಆದರೆ ಈ ಪ್ರಕ್ರಿಯೆ ತೀರಾ ವಿಳಂಬಿತವಾಗುತ್ತಿದೆ ಎಂದಿದ್ದಾರೆ. ಎಫ್‌ಐಆರ್‌ಗಳು ದಾಖಲಾದ ನಂತರವೂ ಕಳೆದ 40 ದಿನಗಳಿಂದ ಬಿಜೆಪಿಯ ಹಲವಾರು ಹಿರಿಯ ಸದಸ್ಯರು ಅಳಗಪ್ಪನ್‌ಗೆ ತಲೆಮರೆಸಿಕೊಳ್ಳಲು ಬೆಂಬಲ ನೀಡುತ್ತಿದ್ದಾರೆ ಎಂದು ಗೌತಮಿ ಆರೋಪಿಸಿದ್ದಾರೆ. ಬಿಜೆಪಿಯಿಂದ “ಬೆಂಬಲದ ಸಂಪೂರ್ಣ ಕೊರತೆ”ಯಾಗಿದೆ ಎಂದಿದ್ದಾರೆ.
“ಆದಾಗ್ಯೂ, ನಮ್ಮ ಮುಖ್ಯಮಂತ್ರಿ, ಪೊಲೀಸ್ ಇಲಾಖೆ ಮತ್ತು ನ್ಯಾಯಾಂಗ ವ್ಯವಸ್ಥೆಯು ಮೇಲುಗೈ ಸಾಧಿಸುತ್ತದೆ ಮತ್ತು ನಾನು ಬಯಸಿದ ನ್ಯಾಯವನ್ನು ನೀಡುತ್ತದೆ ಎಂಬ ಭರವಸೆ ನನಗಿದೆ. ಈ ರಾಜೀನಾಮೆ ಪತ್ರವನ್ನು ಬಹಳ ನೋವು ಮತ್ತು ದುಃಖದಿಂದ, ಆದರೆ ದೃಢವಾದ ಸಂಕಲ್ಪದಿಂದ ಬರೆಯುತ್ತಿದ್ದೇನೆ. ನಾನು ಒಂಟಿ ಮಹಿಳೆ ಮತ್ತು ಒಂಟಿ ಪೋಷಕಳಾಗಿ ನನ್ನ ಮತ್ತು ನನ್ನ ಮಗುವಿನ ಭವಿಷ್ಯಕ್ಕಾಗಿ ಹೋರಾಡುತ್ತಿದ್ದೇನೆ” ಎಂದು ಬರೆದಿದ್ದಾರೆ.
ಪಕ್ಷದ ರಾಜ್ಯಾಧ್ಯಕ್ಷ ಅಣ್ಣಾಮಲೈ (Annamalai) ಅವರ ಬೆಂಬಲ ಈ ಪ್ರಕರಣದಲ್ಲಿ ಯಾರ ಕಡೆಗಿದೆ ಎಂಬುದು ತಿಳಿದುಬಂದಿಲ್ಲ. ಅವರಿಗೆ ಪತ್ರವನ್ನು ಗೌತಮಿ ನೀಡಿದ್ದಾರೆ; ಆದರೆ ಪತ್ರದಲ್ಲಿ ಅವರ ಹೆಸರನ್ನು ಉಲ್ಲೇಖಿಸಿಲ್ಲ.
1969ರಲ್ಲಿ ಜನಿಸಿದ ಗೌತಮಿ 1998ರಲ್ಲಿ ಉದ್ಯಮಿ ಸಂದೀಪ್ ಭಾಟಿಯಾ ಅವರನ್ನು ವಿವಾಹವಾಗಿದ್ದರು. ಇವರಿಗೆ ಸುಬ್ಬುಲಕ್ಷ್ಮಿ ಎಂಬ ಮಗಳು 1999ರಲ್ಲಿ ಜನಿಸಿದ್ದಳು. ಗೌತಮಿ 1999ರಲ್ಲಿ ವಿಚ್ಛೇದನ ಪಡೆದಿದ್ದರು. ನಟ ಕಮಲ್ ಹಾಸನ್ (Kamal hassan) ಜತೆಗೆ 2004ರಿಂದ 2016ರವರೆಗೆ ಲಿವ್‌ಇನ್ ಸಂಬಂಧ ಹೊಂದಿದ್ದರು. 2016ರಲ್ಲಿ ಕಮಲ್ ಜತೆಗೆ ಸಂಬಂಧ ಕೊನೆಗೊಳಿಸಿದ್ದರು. ಆಕೆಗೆ 35ನೇ ವಯಸ್ಸಿನಲ್ಲಿ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ನಂತರ ಚೇತರಿಸಿಕೊಂಡಿದ್ದರು.
ಇದನ್ನೂ ಓದಿ: Kamal Haasan : ಶೋಲೆ ಸಿನಿಮಾ ಇಷ್ಟವಾಗಿರಲಿಲ್ಲ, ಆ ಸಿನ್ಮಾ ನೋಡಿದ ರಾತ್ರಿ ನಿದ್ದೆ ಮಾಡಲಿಲ್ಲ ಎಂದ ಕಮಲ ಹಾಸನ್