Site icon Vistara News

Adhisthatri Biswas | ಈಕೆಯದ್ದು ಆಟೋಮೊಬೈಲ್ ಎಬಿಸಿಡಿ! ಎರಡೇ ವರ್ಷಕ್ಕೆ ದಾಖಲೆ ಬರೆದ ಪುಟಾಣಿ

ಕೋಲ್ಕೊತಾ: ಎರಡು ವರ್ಷದವರಿದ್ದಾಗ ನಾವೆಲ್ಲ ಹೇಗಿದ್ದೆವು? ಅ, ಆ, ಇ, ಈ ಹೇಳುವುದೂ ಕಷ್ಟವಾಗುತ್ತಿದ್ದ ವಯಸ್ಸದು. ಆದರೆ ಪಶ್ಚಿಮ ಬಂಗಾಳದ ಈ ಮಗು‌ (Adhisthatri Biswas) ಎರಡೇ ವರ್ಷಕ್ಕೆ ಎ, ಬಿ, ಸಿ, ಡಿ ಅನ್ನು ಸರಾಗವಾಗಿ ಹೇಳುತ್ತಾಳೆ. ಎ ಫಾರ್ ಆಪಲ್ ಎನ್ನುವ ಬದಲು ಪ್ರತಿ ಅಕ್ಷರಕ್ಕೂ ಅದರಿಂದ ಬರುವ ಆಟೋಮೊಬೈಲ್ ಸಂಸ್ಥೆಗಳ ಹೆಸರನ್ನು ಹೇಳುವ ಮೂಲಕ ಈ ಪುಟಾಣಿ ದಾಖಲೆಗಳನ್ನೂ ಬರೆದಿದ್ದಾಳೆ.

ಪಶ್ಚಿಮ ಬಂಗಾಳದ ಹೂಗ್ಲಿ-ಚಿನ್ಸುರಾಹ್ ನಿವಾಸಿಯಾಗಿರುವ ಅಭಿಜಿತ್ ಬಿಸ್ವಾಸ್ ಮತ್ತು ರಾಜಕುಮಾರಿ ಬಿಸ್ವಾಸ್ ಅವರ ಪುತ್ರಿ ಅದಿಸ್ತಾತ್ರಿ ಬಿಸ್ವಾಸ್ ಈ ರೀತಿ ದಾಖಲೆಗಳನ್ನು ಬರೆದಿರುವ ಪುಟಾಣಿ. ಆಕೆಗಿನ್ನೂ ಎರಡು ವರ್ಷ 9 ತಿಂಗಳು ವಯಸ್ಸು. ಇನ್ನೂ ಶಾಲೆಯ ಮೆಟ್ಟಿಲನ್ನೂ ಹತ್ತಿರದ ಆ ಪುಟಾಣಿ ಇಂಗ್ಲಿಷ್ ಕಲಿಕೆಯಲ್ಲಿ ಮುಂದಿದ್ದಾಳೆ. ಎ ಫಾರ್ ಆಡಿ, ಬಿ ಫಾರ್ ಬಾಷ್ ಎನ್ನುತ್ತ ಜೆಡ್‌ವರೆಗೂ ಎಲ್ಲ ಕಂಪನಿಗಳ ಹೆಸರನ್ನೂ ಹೇಳುತ್ತಾಳೆ. ವಿದೇಶಿ ಕಂಪನಿಗಳ ಹೆಸರನ್ನು ಹೇಳಲೂ ದೊಡ್ಡವರೂ ತಡವರಿಸುತ್ತಾರಾದರೆ ಈ ಪುಟಾಣಿ ಮಾತ್ರ ಪಟ ಪಟನೆ ಎಲ್ಲಾ ಹೆಸರನ್ನು ಹೇಳುತ್ತಾಳೆ.

ಇದನ್ನೂ ಓದಿ: Rahul Gandhi | “ನಾನಾರೆಂಬುದು ನಾನಲ್ಲ”, ನನ್ನೊಳಗಿನ ರಾಹುಲ್‌ ಗಾಂಧಿಯನ್ನು ಕೊಂದಿದ್ದೇನೆ ಎಂದ ರಾಹುಲ್, ವಿಡಿಯೊ ವೈರಲ್
ಕೇವಲ ಆಟೋಮೊಬೈಲ್ ಸಂಸ್ಥೆಗಳ ಹೆಸರು ಮಾತ್ರವಲ್ಲ, ಈ ಪುಟಾಣಿಗೆ ಹಲವಾರು ಪ್ರಾಣಿ ಮತ್ತು ಸಸ್ಯಗಳ ವೈಜ್ಞಾನಿಕ ಹೆಸರೂ ತಿಳಿದಿದೆ. ಐಫೆಲ್ ಟವರ್ ಎಲ್ಲಿದೆ? ಒಪೆರಾ ಹೌಸ್ ಎಲ್ಲಿದೆ ಎನ್ನುವಂತಹ ಸಾಮಾನ್ಯ ಜ್ಞಾನವೂ ಅದಿಸ್ತಾತ್ರಿಗಿದೆ. ಒಂದೇ ನಿಮಿಷದಲ್ಲಿ 100 ಸಾಮಾನ್ಯ ಜ್ಞಾನದ ಪ್ರಶ್ನೆಗಳಿಗೆ ಉತ್ತರಿಸುವ ಸಾಮರ್ಥ್ಯವೂ ಈ ಪುಟಾಣಿಗಿದೆ.

ಈ ಪುಟಾಣಿಯ ತಂದೆ ಅಭಿಜಿತ್ ಕಾಲೇಜೊಂದರ ಉಪನ್ಯಾಸಕರಾಗಿದ್ದಾರೆ. ತಾಯಿ ರಾಜಕುಮಾರಿ ಮಕ್ಕಳಿಗೆ ಟ್ಯೂಷನ್ ಹೇಳಿಕೊಡುತ್ತಾರೆ. ಅದಿಸ್ತಾತ್ರಿಗೆ ಅವರ ತಾಯಿಯೇ ಆಟಗಳ ಮೂಲಕ ಆಟೋಮೊಬೈಲ್ ಸಂಸ್ಥೆಗಳ ಹೆಸರು ಹೇಳಿಕೊಟ್ಟಿದ್ದಾರೆ. ಹಾಗೆಯೇ ಮಗಳ ಚಾಣಾಕ್ಷತನದ ವಿಡಿಯೋಗಳನ್ನು ಹಲವಾರು ಸಂಸ್ಥೆಗಳಿಗೆ ಕಳುಹಿಸಿಕೊಟ್ಟಿದ್ದಾರೆ. ಅದಿಸ್ತಾತ್ರಿ ಬುದ್ಧಿವಂತಿಕೆ ಗುರುತಿಸಿರುವ ಸಂಸ್ಥೆಗಳು ಆಕೆಗೆ ಪ್ರಶಸ್ತಿಗಳನ್ನು ನೀಡಿವೆ.
ಅತಿ ವೇಗವಾಗಿ ಆಟೋಮೊಬೈಲ್ ಸಂಸ್ಥೆಗಳ ಹೆಸರು ಸಹಿತವಾಗಿ ಎಬಿಸಿಡಿ ಹೇಳುವ ಈ ಪುಟಾಣಿಯ ಹೆಸರು ಕಳೆದ ನವೆಂಬರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರಿದೆ. ವರ್ಲ್ಡ್ ರೆಕಾರ್ಡ್ ಆಫ್ ಎಕ್ಸಲೆನ್ಸ್ ಅಲ್ಲೂ ಅದಿಸ್ತಾತ್ರಿ ಹೆಸರಿದೆ.‌‌

ಇದನ್ನೂ ಓದಿ: Giorgia Andriani | ಇಲ್ಲಿವೆ ಜಾರ್ಜಿಯಾ ಆ್ಯಂಡ್ರಿಯಾನಿ ವೈರಲ್‌ ಫೋಟೋಗಳು

Exit mobile version