ನವ ದೆಹಲಿ: ಗುಜರಾತ್ನ ಏಳು ವರ್ಷದ ಬಾಲಕಿ ಅಧ್ಯಾಬಾ ಜಡೇಜಾ ಪ್ರಧಾನಿ ನರೇಂದ್ರ ಮೋದಿ ಅವರಿಗಾಗಿ ಒಂದು ಪದ್ಯವನ್ನು ಬರೆದು, ಹಾಡಿದ್ದಾಳೆ. ಗುಜರಾತಿ ಭಾಷೆಯಲ್ಲಿ ಇರುವ ಈ ಕವನದಲ್ಲಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಸಾಧನೆಗಳನ್ನು ಆಕೆ ವರ್ಣಿಸಿದ್ದಾಳೆ. ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ನವೆಂಬರ್ 21 (ಸೋಮವಾರ)ರಂದು ಈ ಬಾಲಕಿಯನ್ನು ಭೇಟಿ ಮಾಡಿದ್ದಾರೆ. ಆಕೆ ಪ್ರಧಾನಿ ಪಕ್ಕವೇ ನಿಂತು ಗುಜರಾತಿ ಭಾಷೆಯ ಕವನವನ್ನು ಹಾಡಿದ್ದಾಳೆ. ಇದರಿಂದ ಫುಲ್ ಖುಷಿಯಾದ ಪ್ರಧಾನಿ ನರೇಂದ್ರ ಮೋದಿ ‘ಶಹಭಾಷ್’ ಎಂದು ಹೊಗಳಿದ್ದಾರೆ. ಆದರೆ ಇದೀಗ ಕಾಂಗ್ರೆಸ್ ಕಣ್ಣನ್ನು ಕೆಂಪಾಗಿಸಿದೆ. ಗುಜರಾತ್ ಚುನಾವಣಾ ಪ್ರಚಾರಕ್ಕಾಗಿ ಪ್ರಧಾನಿ ಮೋದಿ 7 ವರ್ಷದ ಬಾಲಕಿಯನ್ನು ಬಳಸಿಕೊಂಡಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ಹೇಳಿದೆ.
ಅಧ್ಯಾಬಾ ಜಡೇಜಾ ಬಿಜೆಪಿ ಸರ್ಕಾರದ ಸಾಲುಸಾಲು ಯೋಜನೆಗಳನ್ನು ಉಲ್ಲೇಖಿಸಿ, ಮೋದಿಯವರನ್ನು ಹೊಗಳಿ ಬರೆದ ಕವನವನ್ನು ವಾಚಿಸಿದ್ದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಅದು ಪ್ರಧಾನಿ ಮೋದಿ ಗಮನಕ್ಕೂ ಬಂದು, ಸೋಮವಾರ ಗುಜರಾತ್ ಹೋದ ವೇಳೆ ಆಕೆಯನ್ನು ಭೇಟಿಯಾಗಿದ್ದರು. ತಾನು ನರೇಂದ್ರ ಮೋದಿಯವರನ್ನು ಭೇಟಿಯಾಗಲು ಸಾಧ್ಯವಾಗಿದ್ದಕ್ಕೆ ಅಧ್ಯಾಬಾ ಸಖತ್ ಖುಷಿಯಾಗಿದ್ದಾಳೆ. ‘ಅವರನ್ನು ಭೇಟಿಯಾಗಿದ್ದು ಕನಸೋ-ನನಸೋ ಎಂಬ ಗೊಂದಲದಲ್ಲೇ ಇದ್ದೇನೆ’ ಎಂದು ಹೇಳಿಕೊಂಡಿದ್ದಾಳೆ.
‘ನಾನು ಪ್ರಧಾನಿ ಮೋದಿ ಅವರನ್ನು ಭೇಟಿಯಾಗುತ್ತೇನೆ ಎಂದು ಒಂದಿನನೂ ಅಂದುಕೊಂಡಿರಲಿಲ್ಲ. ನಾನು ಚಿಕ್ಕವಳಿದ್ದಾಗ ಒಮ್ಮೆ ಅವರನ್ನು ನೋಡಿದ್ದೆ. ಅವರು ಒಳ್ಳೆಯ ಮನುಷ್ಯ ಎಂದು ನನಗೆ ಗೊತ್ತು. ಅವರನ್ನು ಭೇಟಿ ಮಾಡಿದ್ದೇನೆ ಎಂಬುದನ್ನು ನನಗೆ ಈಗಲೂ ನಂಬಲು ಸಾಧ್ಯವಾಗುತ್ತಿಲ್ಲ’ ಎಂದು ಹೇಳಿಕೊಂಡಿದ್ದಾಳೆ. ‘ಇನ್ನು ನಿನಗೆ ಪ್ರಧಾನಿ ಮೋದಿ ಏನು ಹೇಳಿದರು?’ ಎಂಬ ಪ್ರಶ್ನೆಗೆ ಉತ್ತರಿಸಿ ಆಕೆ ‘ಮೋದಿ ಜೀ ನನ್ನನ್ನು ಹೊಗಳಿದರು. ಮಗು ಈ ಕವನ, ನೀನದನ್ನು ಹಾಡಿದ ರೀತಿ ತುಂಬ ಚೆನ್ನಾಗಿದೆ ಎಂದು ಹೇಳಿದರು. ನನಗೆ ಆಶೀರ್ವದಿಸಿದರು. ನಮ್ಮೆಲ್ಲರಿಗೂ ಹೆಮ್ಮೆ ಮೂಡಿಸುವಷ್ಟುದೊಡ್ಡ ಸಾಧನೆ ಮಾಡು ಎಂದು ಹಾರೈಸಿದರು’ ಎಂಬುದಾಗಿ ಬಾಲಕಿ ತಿಳಿಸಿದ್ದಾಳೆ. ಅಷ್ಟೇ ಅಲ್ಲ, ‘ನಾನಿದನ್ನು ಒಂದೇ ದಿನದಲ್ಲಿ ಬರೆದೆ. ನಾನು ಹೇಳುತ್ತ ಹೋದಂತೆ, ನನ್ನ ದೊಡ್ಡಮ್ಮ ಬರೆದರು’ ಎಂದೂ ಅಧ್ಯಾಬಾ ತಿಳಿಸಿದ್ದಾಳೆ.
ಕಾಂಗ್ರೆಸ್ ಆರೋಪ
ಪ್ರಧಾನಿ ಮೋದಿ ಪಕ್ಕ ನಿಂತು ಅಧ್ಯಾಬಾ ಕವನ ವಾಚಿಸಿದ ವಿಡಿಯೊವನ್ನು ಬಿಜೆಪಿ ಶೇರ್ ಮಾಡಿಕೊಳ್ಳುತ್ತಿದ್ದಂತೆ ಕಾಂಗ್ರೆಸ್ ಕಿಡಿಕಾರಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಟ್ವೀಟ್ ಮಾಡಿ, ‘ಚುನಾವಣಾ ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು ಒಂದು ಪುಟ್ಟ ಮಗುವನ್ನು ಬಳಸಿಕೊಳ್ಳುತ್ತಿದ್ದಾರೆ. ಇದು ಕಾನೂನಿನ ಸ್ಪಷ್ಟ ಉಲ್ಲಂಘನೆ. ಚುನಾವಣಾ ಆಯೋಗ ಮತ್ತು ಮಕ್ಕಳ ಹಕ್ಕುಗಳ ರಕ್ಷಣಾ ರಾಷ್ಟ್ರೀಯ ಆಯೋಗ (NCPCR)ಕ್ಕೆ ಇದು ಗಮನಕ್ಕೆ ಬಂದಿಲ್ಲವೇ?’ ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾತೆ ಟ್ವೀಟ್ ಮಾಡಿ, ‘ಪ್ರಧಾನಿ ಮೋದಿಯವರು ಚಿಕ್ಕ ಮಕ್ಕಳನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಎನ್ಸಿಪಿಸಿಆರ್, ಚುನಾವಣಾ ಆಯೋಗಗಳೇನು ಕುಂಭಕರ್ಣನ ನಿದ್ದೆಗೆ ಜಾರಿವೆಯಾ? ಸ್ವಯಂಪ್ರೇರಿತರಾಗಿ ಕೇಸ್ ದಾಖಲಿಸಿಕೊಂಡು, ಕ್ರಮ ಕೈಗೊಳ್ಳಿ’ ಎಂದು ಆಗ್ರಹಿಸಿದ್ದಾರೆ.
ಗುಜರಾತ್ನಲ್ಲಿ ಡಿಸೆಂಬರ್ 1 ಮತ್ತು 7ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 8ಕ್ಕೆ ಮತಎಣಿಕೆ ಇದೆ. ಕಳೆದ 27ವರ್ಷಗಳಿಂದಲೂ ಬಿಜೆಪಿ ಇಲ್ಲಿ ಆಡಳಿತದಲ್ಲಿದ್ದು, ಪ್ರಧಾನಿಯ ತವರು ರಾಜ್ಯ ಎಂಬ ಕಾರಣಕ್ಕೆ ಇಲ್ಲಿನ ಚುನಾವಣೆ ಇನ್ನಷ್ಟು ಮಹತ್ವವನ್ನೂ ಪಡೆದುಕೊಂಡಿದೆ.
ಇದನ್ನೂ ಓದಿ: Gujarat Election | ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 125 ಸೀಟು: ಗೆಹ್ಲೋಟ್ ವಿಶ್ವಾಸ