ಆದಿಪುರುಷ್ ಸಿನಿಮಾದಲ್ಲಿ (Adipurush Movie), ಹಿಂದುಗಳ ಪವಿತ್ರ ಗ್ರಂಥಗಳಲ್ಲಿ ಒಂದಾದ ರಾಮಾಯಣವನ್ನು ಅತ್ಯಂತ ಕೆಟ್ಟದಾಗಿ ಬಿಂಬಿಸಲಾಗಿದೆ (Adipurush Row) ಎಂಬ ಆಕ್ರೋಶ ಬಲವಾಗಿ ಕೇಳಿಬಂದಿದೆ. ಅದರ ಮಧ್ಯೆಯೇ ಅಲಹಾಬಾದ್ ಹೈಕೋರ್ಟ್ನ (Allahabad High Court) ಲಖನೌ ಪೀಠ ಈ ವಿಚಾರದಲ್ಲಿ ಆದಿಪುರುಷ್ ಸಿನಿಮಾ ನಿರ್ಮಾಪಕ/ನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡಿದೆ.
ಆದಿಪುರುಷ್ ಸಿನಿಮಾ ಬ್ಯಾನ್ ಮಾಡಬೇಕು ಎಂದು ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟ್ನ ನ್ಯಾಯಮೂರ್ತಿಗಳಾದ ರಾಜೇಶ್ ಸಿಂಗ್ ಚೌಹಾಣ್ ಮತ್ತು ಶ್ರೀ ಪ್ರಕಾಶ್ ಸಿಂಗ್ ಅವರನ್ನು ಒಳಗೊಂಡ ಪೀಠ, ‘ಸಿನಿಮಾ ಮಾಡುವವರು ಧಾರ್ಮಿಕ ಪುಸ್ತಕಗಳು, ಕಥೆಗಳಿಂದ ದೂರವೇ ಇದ್ದುಬಿಡಿ. ಧಾರ್ಮಿಕ, ಪೌರಾಣಿಕ ಕತೆಗಳನ್ನು ಹೇಗೆಂದರೆ ಹಾಗೆ ಬಿಂಬಿಸಿ ಸಿನಿಮಾ ಮಾಡಲೇಬೇಡಿ’ ಎಂದು ಸಿನಿಮಾ ತಯಾರಿಕರಿಗೆ ಸೂಚನೆ ನೀಡಿದೆ. ಹಾಗೇ, ಆದಿಪುರುಷ್ ಸಿನಿಮಾ ನಿಷೇಧ ಅರ್ಜಿಗಳಿಗೆ ಪ್ರತಿಕ್ರಿಯೆಯಾಗಿ ಅಫಿಡಿವಿಟ್ ಸಲ್ಲಿಕೆ ಮಾಡುವಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹಾಗೂ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ ಸೂಚನೆ ನೀಡಿದೆ.
ರಾಮಾಯಣವನ್ನೇನೋ ಹೀಗೆ ಚಿತ್ರೀಕರಿಸಿದ್ದೀರಿ. ಅದೇ ಕುರಾನ್ ಗ್ರಂಥವನ್ನು ನೀವು ಹೀಗೆ ಚಿತ್ರಿಸಲು ಸಾಧ್ಯವೇ? ಹಾಗೊಮ್ಮೆ ಕುರಾನ್-ಬೈಬಲ್ ಮೇಲೆ ನೀವು ಹೀಗೆ ಒಂದು ಸಿನಿಮಾವನ್ನೋ, ಸಾಕ್ಷ್ಯಚಿತ್ರವನ್ನೋ ಮಾಡಿದರೆ ಮುಂದಿನ ಪರಿಣಾಮ ಏನಾಗಬಹುದು?-ಊಹಿಸಿದ್ದೀರಾ?. ಕೋರ್ಟ್ ಯಾವುದೇ ಧರ್ಮದ ಪರವಾಗಿಲ್ಲ. ಆದರೂ ಹಿಂದು ದೇವರು-ದೇವತೆಗಳನ್ನು ಸಿನಿಮಾಗಳಲ್ಲಿ ಬಿಂಬಿಸುವ ಬಗ್ಗೆ ಆಕ್ಷೇಪವಿದೆ. ಆದಿಪುರುಷ್ ಸಿನಿಮಾ ಕೂಡ ಇದನ್ನೇ ಮಾಡಿತು. ನಾವಿವತ್ತು ಆದಿಪುರುಷ್ ಸಿನಿಮಾದಲ್ಲಿ ದೇವರನ್ನು ತಮಾಷೆಯಾಗಿ ಬಿಂಬಿಸಿದ್ದನ್ನು ನೋಡಿಯೂ ಸುಮ್ಮನಿದ್ದರೆ, ಮುಂಬರುವ ದಿನಗಳಲ್ಲಿ ಇಂಥವು ಹೆಚ್ಚುತ್ತವೆ. ನಾವೂ ಸಿನಿಮಾ ನೋಡಿದ್ದೇವೆ. ಅದರಲ್ಲಿ ಶಿವ ತ್ರಿಶೂಲ ಹಿಡಿದುಕೊಂಡು ಓಡುತ್ತಾನೆ. ಇದು ಜೋಕ್ ಅಲ್ಲದೆ ಇನ್ನೇನು?’ ಎಂದು ಹೈಕೋರ್ಟ್ ಪೀಠ ಪ್ರಶ್ನಿಸಿದೆ.
ಇದನ್ನೂ ಓದಿ: Adipurush Movie: ಕಟ್ಟಪ್ಪ ಬಾಹುಬಲಿ ಕೊಂದಿದ್ದು ಯಾಕೆ ಅಂತ ಗೊತ್ತಾಯ್ತು; ಸೆಹ್ವಾಗ್ ಟ್ವೀಟ್ ವೈರಲ್!
ಆದಿಪುರುಷ್ ಸಿನಿಮಾವನ್ನು ನಿಷೇಧಿಸಬೇಕು ಎಂದು ಕುಲದೀಪ್ ತೇವಾರಿ ಮತ್ತು ಬಂದಾನಾ ಕುಮಾರ್ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಅಲಹಬಾದ್ ಹೈಕೋರ್ಟ್ಗೆ ಸಲ್ಲಿಸಿದ್ದಾರೆ. ವಕೀಲರಾದ ರಂಜನಾ ಅಗ್ನಿಹೋತ್ರಿ ಮತ್ತು ಸುಧಾ ಶರ್ಮಾ ಅವರು ಈ ಅರ್ಜಿದಾರರ ಪರ ವಾದ ಮಂಡನೆ ಮಾಡುತ್ತಿದ್ದಾರೆ. ಹಾಗೇ ಇನ್ನೊಂದೆಡೆ ಕೇಂದ್ರದ ಪರ ಸಾಲಿಸಿಟರ್ ಜನರಲ್ ಎಸ್.ಬಿ.ಪಾಂಡೆ ವಾದ ಮಂಡನೆ ಮಾಡಿದ್ದರು. ‘ಇಂಥ ಸಿನಿಮಾಗಳನ್ನು ನೀವು ಹೇಗೆ ಸಮರ್ಥಿಸಿಕೊಳ್ಳುತ್ತೀರಿ’ ಎಂದು ಕೋರ್ಟ್ ಪಾಂಡೆ ಬಳಿ ಪ್ರಶ್ನಿಸಿದೆ. ಅದಕ್ಕೆ ಪಾಂಡೆ ‘ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯಲ್ಲಿರುವ ಸಂಸ್ಕಾರವಂತ ಸದಸ್ಯರೇ ಈ ಸಿನಿಮಾಕ್ಕೆ ಅನುಮೋದನೆ ನೀಡಿದ್ದಾರೆ’ ಎಂದು ಹೇಳಿದ್ದಾರೆ. ಅದಕ್ಕೆ ಕೋರ್ಟ್ ಮತ್ತಷ್ಟು ವ್ಯಂಗ್ಯವಾಗಿ ‘ಸಂಸ್ಕಾರವಂತರೇ ಈ ಸಿನಿಮಾವನ್ನು ಪಾಸ್ ಮಾಡಿರುವುದು ಅಚ್ಚರಿ. ನಿಜಕ್ಕೂ ಈ ಸಿನಿಮಾ ಅನುಮೋದನೆ ಮಾಡಿದವರಿಗೆ ದೇವರ ಆಶೀರ್ವಾದ ಸಿಗುತ್ತದೆ’ ಎಂದು ಹೇಳಿದೆ.