ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ನ ನೂತನ ಯುದ್ಧ ತರಬೇತಿ ವಿಮಾನ HLFT-42 ರೆಕ್ಕೆಯ ಮೇಲೆ ಮತ್ತೆ ಆಂಜನೇಯನ ಚಿತ್ರ ಮೂಡಿದೆ. ಈ ವಿಮಾನವನ್ನು ಬೆಂಗಳೂರಿನಲ್ಲಿ ನಡೆಯುತ್ತಿರುವ ಏರೋ ಇಂಡಿಯಾ (Aero India) ಶೋನಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು. ಅದರ ರೆಕ್ಕೆಯ ಮೇಲಿದ್ದ ಹಿಂದು ದೇವತೆ ಹನುಮಂತನ ಚಿತ್ರ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ, ಎಚ್ಎಎಲ್ ಅದನ್ನು ಕಳೆದ ಮೂರು ದಿನಗಳ ಹಿಂದೆ ತೆಗೆದು ಹಾಕಿತ್ತು. ನಿನ್ನೆ (ಫೆ.17) ಏರ್ ಶೋದ ಕೊನೇ ದಿನದಂದು ವಿಮಾನದ ರೆಕ್ಕೆ ಮೇಲೆ ಮತ್ತೆ ಹನುಮಂತನ ಚಿತ್ರ ಮೂಡಿದೆ. ಗದೆ ಹಿಡಿದ ಭಗವಾನ್ ಹನುಮಾನ್ನ ಚಿತ್ರವನ್ನು ‘The Storm Is Coming’ ಎಂಬ ಕ್ಯಾಪ್ಷನ್ನೊಂದಿಗೆ ವಿಮಾನದ ಮೇಲೆ ನೋಡಬಹುದು.
ಬೆಂಗಳೂರಿನಲ್ಲಿ ಸೋಮವಾರದಿಂದ ಪ್ರಾರಂಭವಾದ ಏರ್ಶೋ ಐದು ದಿನಗಳ ಕಾಲ ಅದ್ಭುತವಾಗಿ ನಡೆಯಿತು. ಅದರಲ್ಲಿ ಈ ಹನುಮಾನ್ ಚಿತ್ರವಿದ್ದ HLFT-42 ವಿಮಾನದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ, ಚರ್ಚೆ ಶುರುವಾಗಿತ್ತು. ಅದರ ಬೆನ್ನಲ್ಲೇ ತೆಗೆದುಹಾಕಲಾಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಬಳಿಕ ಎಚ್‌ಎಎಲ್‌ನ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಸಿ.ಬಿ ಅನಂತಕೃಷ್ಣನ್, ‘ಹನುಮಂತನ ಚಿತ್ರ ತೆಗೆದು ಹಾಕಲು ಯಾವುದೇ ಉದ್ದೇಶವಿಲ್ಲ. ಅದನ್ನಲ್ಲಿ ಹಾಕಿಕೊಳ್ಳಲೂ ಯಾವುದೇ ಉದ್ದೇಶ ಇರಲಿಲ್ಲ. ಕಾರ್ಯಕ್ರಮವು ಸಾಂಗವಾಗಿ ನಡೆಯ ಬೇಕಿರುವುದರಿಂದ, ವಿವಾದ ಆಗದೆ ಇರಲಿ ಎಂದು ಈಗದನ್ನು ತೆಗೆಯಲಾಗಿದೆ’ ಎಂದು ಹೇಳಿದ್ದರು.
ಎಚ್ಎಎಲ್ ನಿರ್ಮಿಸಿರುವ ಮಾರುತ್ ಯುದ್ಧ ವಿಮಾನದ ಸರಣಿಯ ವಿಮಾನವೇ ಈ HLFT-42. ಮಾರುತ್ ಎಂದರೆ ಪವನ ಅಥವಾ ವಾಯು. ಪವನ ಪುತ್ರನೇ ಹನುಮಂತ ಆಗಿರುವುದರಿಂದ ಈ ಯುದ್ಧ ವಿಮಾನದ ಮಾದರಿಯಲ್ಲಿ ಮಾರುತಿಯ ಚಿತ್ರವನ್ನು ಅಳವಡಿಸಲಾಗಿತ್ತು. ಅತ್ಯಾಧುನಿಕ ಯುದ್ಧ ವಿಮಾನಗಳ ಹಾರಾಟಕ್ಕೆ ಸಂಬಂಧಿಸಿ ಪೈಲಟ್‌ಗಳಿಗೆ ತರಬೇತಿ ಕೊಡಲು ಈ ವಿಮಾನಗಳು ನಿರ್ಣಾಯಕ ಪಾತ್ರ ವಹಿಸುತ್ತವೆ.